ದೆಹಲಿ: ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಸುತ್ತ ಆರಂಭವಾದ ಚರ್ಚೆಯು ಈಗ ಬಾಲಿವುಡ್ ಅಂಗಳದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಹಿರಿಯ ನಟ ನಸೀರುದ್ದೀನ್ ಶಾ ವಿರುದ್ಧ ಪಿಯೂಷ್ ಮಿಶ್ರಾ ಮಾಡಿದ ವಾಗ್ದಾಳಿಯನ್ನು ಬೆಂಬಲಿಸಿರುವ ನಟ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ನಸೀರುದ್ದೀನ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಿಯೂಷ್ ಮಿಶ್ರಾ ಅವರು ನಸೀರುದ್ದೀನ್ ಶಾ ಅವರನ್ನು ವಿಮರ್ಶಿಸಿರುವ ವರದಿಯೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ, ಈ ಹಿಂದೆ ದೇಶದ ವಿದ್ಯಮಾನಗಳ ಬಗ್ಗೆ ಮೌನ ವಹಿಸುವ ಚಿತ್ರರಂಗದ ಪ್ರಮುಖರನ್ನು ‘ಬಾಯಿಯಲ್ಲಿ ಮೂಳೆ ಹಿಡಿದು ಬೊಗಳಲಾಗದ ನಾಯಿ’ಗೆ ಹೋಲಿಸಿದ್ದ ನಸೀರುದ್ದೀನ್ ಶಾ ಅವರ ಹಳೆಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶಾ ಅವರ ಈ ಹೋಲಿಕೆಯನ್ನೇ ಉಲ್ಟಾ ಮಾಡಿ ವಾಗ್ದಾಳಿ ನಡೆಸಿರುವ ಕಂಗನಾ, “ಎಲ್ಲರೂ ಯಾರಿಗಾದರೂ ಒಬ್ಬರಿಗೆ ನಿಷ್ಠೆಯಿಂದ ಇರುತ್ತಾರೆ. ಆದರೆ ನಾನು ತಿಂದ ದೇಶದ ಅನ್ನಕ್ಕೆ ನಿಷ್ಠೆಯಿಂದ ಇರಲು ಹೆಮ್ಮೆಪಡುತ್ತೇನೆ. ನಸೀರುದ್ದೀನ್ ಭಾರತದಲ್ಲೇ ವಾಸಿಸುತ್ತಾ ನೆರೆ ದೇಶಕ್ಕಾಗಿ ಬೆಂಬಲ ನೀಡುತ್ತಾರೆ,” ಎಂದು ನೇರವಾಗಿ ಆರೋಪಿಸಿದ್ದಾರೆ.
ಸದ್ಯದ ಕಾಲಘಟ್ಟದಲ್ಲಿ ನಿಷ್ಠೆ ಮತ್ತು ಪ್ರೀತಿ ಅಪರೂಪವಾಗಿರುವುದರಿಂದ ನಾಯಿಗೆ ಹೋಲಿಸುವುದನ್ನು ಒಂದು ರೀತಿಯ ಪ್ರಶಂಸೆ ಎಂದೇ ಭಾವಿಸಬಹುದು ಎಂದಿರುವ ಕಂಗನಾ, “ನಸೀರುದ್ದೀನ್ ಅವರಂತೆ ‘ನರಿ’ಯಾಗಿರುವುದಕ್ಕಿಂತ ನಾಯಿಯಾಗಿರುವುದೇ ಮೇಲು,” ಎಂದು ತೀವ್ರವಾಗಿ ವ್ಯಂಗ್ಯವಾಡಿದ್ದಾರೆ.
ಜಾರ್ಖಂಡ್‌ನಲ್ಲಿ JPSC ಹಾಗೂ JSSC ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಖಂಡಿಸಿ ಹೇಮಂತ್ ಸೊರೇನ್ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಉಲ್ಲೇಖಿಸಿ ಪಿಯೂಷ್ ಮಿಶ್ರಾ ಅವರು ನಸೀರುದ್ದೀನ್ ಶಾ ಅವರನ್ನು ಪ್ರಶ್ನಿಸಿದ್ದರು. ದೆಹಲಿ ವಿದ್ಯಾರ್ಥಿ ಪ್ರತಿಭಟನೆ ವೇಳೆ ಬಾಲಿವುಡ್ ಮೌನದ ಬಗ್ಗೆ ಮಾತನಾಡಿದ್ದ ಶಾ, ಈಗ ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಮಿಶ್ರಾ ಕಿಡಿಕಾರಿದ್ದರು.
ಇದಕ್ಕೂ ಮುನ್ನ ಸಂಸತ್ತಿನಲ್ಲಿ ಜಾರ್ಖಂಡ್ ಪ್ರತಿಭಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ‘ರಾಹುಲ್ ಗಾಂಧಿ ಜವಾಬ್ ದೋ’ ಎಂದು ಬ್ಯಾನರ್ ಹಿಡಿದು ಕಂಗನಾ ರಣಾವತ್ ಪ್ರತಿಭಟಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದೀರ್ಘ ಚರ್ಚೆಗೆ ಸಿದ್ಧರಿದ್ದರೂ ವಿಪಕ್ಷ ನಾಯಕರು ಚರ್ಚೆಯಿಂದ ಓಡಿಹೋಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
