ಬಿಜೆಪಿಯ 5-ಸ್ಟಾರ್ ಕಚೇರಿಗಳು ಬೀಳಲ್ಲ, ಸರ್ಕಾರಿ ಕಟ್ಟಡ-ರಸ್ತೆಗಳು ಕುಸಿಯುತ್ತವೆ: ದೆಹಲಿ ಪಿಜಿ ದುರಂತಕ್ಕೆ ಕನ್ಹಯ್ಯಾ ಕುಮಾರ್ ಕಿಡಿ

ದೆಹಲಿ: ದೆಹಲಿಯ ಸತ್ಯ ನಿಕೇತನದಲ್ಲಿ ಪಿಜಿ ಹಾಸ್ಟೆಲ್ ಕಟ್ಟಡ ಕುಸಿದು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಎನ್‌ಎಸ್‌ಯುಐ (NSUI) ಉಸ್ತುವಾರಿ ಕನ್ಹಯ್ಯಾ ಕುಮಾರ್ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿಯವರು ಪ್ರತಿಯೊಂದು ಜಿಲ್ಲೆಯಲ್ಲೂ ಫೈವ್-ಸ್ಟಾರ್ ಮಾದರಿಯ ಐಷಾರಾಮಿ ಪಕ್ಷದ ಕಚೇರಿಗಳನ್ನು ಕಟ್ಟಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಅವರ ಪಕ್ಷದ ಕಚೇರಿಗಳು ಎಂದಿಗೂ ಕುಸಿಯುವುದಿಲ್ಲ; ಆದರೆ ಸರ್ಕಾರಿ ಕಟ್ಟಡಗಳು, ಸೇತುವೆಗಳು ಮತ್ತು ರಸ್ತೆಗಳು ಮಾತ್ರ ಕುಸಿದುಬೀಳುತ್ತವೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ದೇಶದಲ್ಲಿ ವಿದ್ಯಾರ್ಥಿಗಳು ಸರಣಿ ದುರಂತಗಳಿಗೆ ಬಲಿಯಾಗುತ್ತಿರುವುದನ್ನು ಪ್ರಸ್ತಾಪಿಸಿದ ಅವರು, “ಒಂದು ಕಡೆ ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ, ಮತ್ತೊಂದೆಡೆ ಲೈಬ್ರರಿಯೊಳಗೆ ನೀರು ನುಗ್ಗಿ ವಿದ್ಯಾರ್ಥಿಗಳು ಸಾಯುತ್ತಾರೆ, ಇನ್ನೊಂದೆಡೆ ವಿದ್ಯುತ್ ಸ್ಪರ್ಶಕ್ಕೆ ವಿದ್ಯಾರ್ಥಿ ಬಲಿಯಾಗುತ್ತಾನೆ. ಈ ಸಾವು-ನೋವುಗಳಿಗೆ ಬಿಜೆಪಿ ಸರ್ಕಾರ ಯಾವಾಗ ಜವಾಬ್ದಾರಿ ಮತ್ತು ಹೊಣೆಗಾರಿಕೆ ವಹಿಸಿಕೊಳ್ಳುತ್ತದೆ?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಗಳನ್ನು ಟೀಕಿಸಿದ ಕನ್ಹಯ್ಯಾ ಕುಮಾರ್, “ಇಟಲಿ ಪ್ರಧಾನಿ ಮೆಲೋನಿ ಅವರಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಲು ಪ್ರಧಾನಿ ಮೋದಿಯವರಿಗೆ ಸಮಯವಿದೆ. ಆದರೆ ದುರಂತ ಸಂಭವಿಸಿದ ಸತ್ಯ ನಿಕೇತನಕ್ಕೆ ಭೇಟಿ ನೀಡಿ, ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಲು ಅವರಿಗೆ ಪುರುಸೊತ್ತಿಲ್ಲ” ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು