Friday, October 17, 2025

ಸತ್ಯ | ನ್ಯಾಯ |ಧರ್ಮ

ಕನ್ಹೇರಿ ಮಠದ ಸ್ವಾಮಿಗೆ ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧ

ವಿಜಯಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಕನ್ಹೇರಿ ಕಾಡಸಿದ್ಧೇಶ್ವರ ಮಠದ ಪೀಠಾಧಿಪತಿಯಾದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ವಿಜಯಪುರ ಜಿಲ್ಲೆ ಪ್ರವೇಶಿಸುವುದನ್ನು ಜಿಲ್ಲಾಧಿಕಾರಿ ಆನಂದ್ ಕೆ ಅವರು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಪ್ರಕಾರ, ಸ್ವಾಮಿ ಅಕ್ಟೋಬರ್ 16ರಿಂದ ಡಿಸೆಂಬರ್ 16ರವರೆಗೆ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಮಹಾರಾಷ್ಟ್ರದ ಜತ್ ತಾಲೂಕಿನ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿ ನೀಡಿದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಬೆಂಬಲಿತ ಲಿಂಗಾಯತ ಮಠಾಧೀಶರ ಒಕ್ಕೂಟವನ್ನು ಟೀಕಿಸಿದ್ದ ಅವರು, ಆ ಒಕ್ಕೂಟವು ‘ಬಸವ ಸಂಸ್ಕೃತಿ ಉತ್ಸವ’ ಹೆಸರಿನಲ್ಲಿ ಒಂದು ತಿಂಗಳ ಕಾಲ ಕರ್ನಾಟಕದಲ್ಲಿ ಪ್ರವಾಸ ಮಾಡಿದ ‘ಡ್ರಾಮಾ ತಂಡ’ ಎಂದು ಕರೆದಿದ್ದರು.

ಸ್ವಾಮಿ ತನ್ನ ಭಾಷಣದಲ್ಲಿ, “ಲಿಂಗಾಯತ ಮಠಾಧೀಶರ ಒಕ್ಕೂಟವು ತಮ್ಮ ಪ್ರವಾಸದ ಸಮಯದಲ್ಲಿ, ದೇವರು ದೇವಸ್ಥಾನಗಳಲ್ಲಿ ಇಲ್ಲ. ದೇವಸ್ಥಾನಗಳಿಗೆ ಹೋಗಬೇಡಿ. ಮನೆಯಲ್ಲಿರುವ ದೇವರುಗಳನ್ನು ತೆಗೆದು ನದಿಗೆ ಹಾಕಿ, ಹೋಟೆಲ್‌ಗೆ ಹೋಗಿ, ಮದ್ಯ ಕುಡಿಯಿರಿ, ಮಾಂಸ ತಿಂದು ಆರಾಮವಾಗಿರಿ ಎಂದು ಹೇಳಿದ್ದರು” ಎಂದಿದ್ದರು. ಅವರು ಮುಂದುವರಿದು, “ನಾನು ವೈಯಕ್ತಿಕವಾಗಿ ಆ ‘ಬ……..ಗಳಿಗೆ’ ಪಾಠ ಕಲಿಸಬೇಕು, ಮತ್ತು ಅವರನ್ನು ಥಳಿಸಬೇಕು” ಎಂದು ಹೇಳಿದ್ದಾರೆ.

ಸ್ವಾಮಿಯ ಈ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಬಸವಣ್ಣನವರ ಅನುಯಾಯಿಗಳು ಮತ್ತು ಲಿಂಗಾಯತ ಮಠಾಧೀಶರು ಸ್ವಾಮೀಜಿಯ ಹೇಳಿಕೆಯನ್ನು ಖಂಡಿಸಿ, ವಿಜಯಪುರ ಸೇರಿದಂತೆ ಕರ್ನಾಟಕದಾದ್ಯಂತ ಪ್ರತಿಭಟನೆಗಳನ್ನು ನಡೆಸಿದರು ಮತ್ತು ಸ್ವಾಮಿಯ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಈ ನಿರ್ಧಾರ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page