Thursday, June 20, 2024

ಸತ್ಯ | ನ್ಯಾಯ |ಧರ್ಮ

ಕನಿಷ್ಟ ವೇತನವನ್ನೂ ಪಡೆಯದ ನಾವು ಬದುಕಬೇಕೇ? ಸಾಯಬೇಕೆ?: 24 ನೇ ದಿನಕ್ಕೆ ಕೊಡಗಿನ ಕಾಫಿ ಎಸ್ಟೇಟ್‌ ಕಾರ್ಮಿಕರ ಮುಷ್ಕರ

“ಮಾಲೀಕರನ್ನ ಮೀರಿ ನಾವು ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳುವಂತಿಲ್ಲ. ನಾವು ಮಾಡುವ ಕೆಲಸಕ್ಕೆ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನವನ್ನೂ ನೀಡದೆ ಕೇವಲ 150 ರಿಂದ 200 ರೂ ಗಳು ನೀಡುತ್ತಾರೆ. ಬರುವ ಅಷ್ಟು ಹಣದಲ್ಲೇ ನಮ್ಮ ಕುಟುಂಬದ ಸಂಪೂರ್ಣ ನಿರ್ವಹಣೆ ಮಾಡಬೇಕು. ಇಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಒಂದು ವೇಳೆ  ಮಕ್ಕಳು ಎಂಟನೇ ತರಗತಿಗೆ ಹೋಗಬೇಕಾದರೆ ಬೇರೆ ಊರಿಗೆ ಹೋಗಬೇಕು. ಆದರೆ ಇಲ್ಲಿ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಆಟೋ ಮುಖಾಂತರ ಮಕ್ಕಳನ್ನ ಸ್ಕೂಲಿಗೆ ಕಳುಹಿಸಬೇಕು ಆದರೆ ಆಟೋ ಗೆ ದಿನಕ್ಕೆ 100 ರೂ ಆಗೋದ್ರಿಂದ, ಮನೆಯ ಬಡತನದಿಂದ ಸುಮಾರು ಜನ ಮಕ್ಕಳನ್ನು ಏಳನೇ ತರಗತಿಗೆ ಶಿಕ್ಷಣ ನಿಲ್ಲಿಸಿ ಕೆಲಸಕ್ಕೆ ಕಳುಹಿಸುವಂತಹ ಪರಿಸ್ಥಿತಿ ನಮ್ಮ ಇಲ್ಲಿನ ಜನರದ್ದು”

ಕೊಡಗು ಜಿಲ್ಲೆಯ ಕಾಫಿ ತೋಟಗಳ ಲೈನ್‌ ಮನೆಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದ ಕಾರ್ಮಿಕರು ನಿವೇಶನ ಹಕ್ಕು ಪತ್ರಕ್ಕಾಗಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಇವತ್ತಿಗೆ 24 ನೇ ದಿನಕ್ಕೆ ಕಾಲಿಟ್ಟಿದೆ. ಮೊದಲಿಗೆ ಮಾಯಾಮುಡಿ ಗ್ರಾಮ ಪಂಚಾಯಿತಿ ಮುಂದೆ ಕುಳಿತು ಶುರುವಾದ ಸತ್ಯಾಗ್ರಹ ಕಳೆದ ಒಂಬತ್ತು ದಿನಗಳಿಂದ ತಾಲ್ಲೂಕು ಪಂಚಾಯಿತಿಗಳ ಮುಂದೆ ನಡೆಯುತ್ತಿದೆ.

ಬುಡಕಟ್ಟು ಕಾರ್ಮಿಕ ಸಂಘದ ಮುಂದಾಳತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು ಅಲ್ಲಿನ ಲೈನ್‌ ಮನೆಗಳಲ್ಲಿ ವಾಸಿಸುತ್ತಿರುವವರ ಕೂಗು ಸರ್ಕಾರಕ್ಕೆ ಕೇಳುವವರೆಗೂ ಈ ಧರಣಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಅಲ್ಲಿನ ಪ್ರತಿಭಟನಾಕಾರರು ಪೀಪಲ್‌ ಮೀಡಿಯಾ ದೊಂದಿಗೆ ಮಾತಾನಾಡುತ್ತಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ಹೋರಾಟಗಾರ್ತಿ ಜ್ಯೋತಿ,  “ಪಂಚಾಯಿತಿಗೆ ಅರ್ಜಿ ಸಲ್ಲಿ ಐದಾರು ವರ್ಷಗಳಾಗಿದೆ ಆದರೂ ಇದುವರೆಗೂ ನಮಗೆ ಯಾವುದೇ ನಿವೇಶನ ಪತ್ರ ಸಿಕ್ಕಿಲ್ಲ. ಇಲ್ಲಿನ ಮಾಯಾಮುಡಿ ನಾಲ್ಕು ಎಕರೆ ಸರ್ಕಾರದ ಜಮೀನಿನಲ್ಲಿ ನಮಗೆಲ್ಲಾ ನಿವೇಶನ ಪತ್ರ ಮಾಡಿಕೊಡಬೇಕು” ಎಂದರಲ್ಲದೆ,  “ನಾವು ಲೈನ್‌ ಮನೇಲಿರೋದು. ಇಲ್ಲಿ ವಾಶ್‌ ರೂಮ್‌ ಗಳ ಸೌಲಭ್ಯ ಇಲ್ಲ , ನಾವೂ ಸಾವ್ಕಾರರ ಮನೆಗೆ ಕೆಲಸಕ್ಕೆ ಹೋಗೋದ್ರಿಂದ ಅವರು ಯಾವ್ದೇ ಹೊತ್ತಿನಲ್ಲೂ ಕರೆದ್ರೂ  ನಮಗೆ ಏನೇ ತೊಂದ್ರೆ ಇದ್ರು ಹೋಗಲೇ ಬೇಕು. ನಮಗೆ ಯಾವುದೇ ಹಣದ ಅವಶ್ಯಕತೆ ಇದ್ದಾಗ ಬೇರೆ ವಿಧಿ ಇಲ್ಲದೆ ಸಾವ್ಕಾರರ ಬಳಿಯೇ ಹಣ ತೆಗೆದುಕೊಂಡು ಸಾಲ ತೀರಿಸಲಿಕ್ಕಾಗಿ ಅವರ ಬಳಿಯೇ ಹೇಳಿದ ಕೆಲಸವನ್ನು ಮಾಡಿಕೊಂಡು ಇದ್ದೇವೆ. ಇಲ್ಲ ಎಂದಾಗ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ. ಅವರು ಕೊಡುವ ವೇತನ ಯಾವ ಮೂಲೆಗೂ ಸಾಲದಾಗಿದೆ. ವಯಸ್ಸಾದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ, ಶಾಲೆಗೆ ಹೋಗುವವರನ್ನ ಶಾಲೆ ಬಿಟ್ಟು ಕೆಲಸ ಮಾಡುವಂತೆ ಇಲ್ಲಿನ ಮಾಲೀಕರು ಹೇಳ್ತಾರೆ” ಎಂದರು.  

“ಮಾಲೀಕರನ್ನ ಮೀರಿ ನಾವು ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳುವಂತಿಲ್ಲ. ನಾವು ಮಾಡುವ ಕೆಲಸಕ್ಕೆ ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನವನ್ನೂ ನೀಡದೆ ಕೇವಲ 150 ರಿಂದ 200 ರೂ ಗಳು ನೀಡುತ್ತಾರೆ. ಬರುವ ಅಷ್ಟು ಹಣದಲ್ಲೇ ನಮ್ಮ ಕುಟುಂಬದ ಸಂಪೂರ್ಣ ನಿರ್ವಹಣೆ ಮಾಡಬೇಕು. ಇಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಒಂದು ವೇಳೆ  ಮಕ್ಕಳು ಎಂಟನೇ ತರಗತಿಗೆ ಹೋಗಬೇಕಾದರೆ ಬೇರೆ ಊರಿಗೆ ಹೋಗಬೇಕು. ಆದರೆ ಇಲ್ಲಿ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಆಟೋ ಮುಖಾಂತರ ಮಕ್ಕಳನ್ನ ಸ್ಕೂಲಿಗೆ ಕಳುಹಿಸಬೇಕು ಆದರೆ ಆಟೋ ಗೆ ದಿನಕ್ಕೆ 100 ರೂ ಆಗೋದ್ರಿಂದ, ಮನೆಯ ಬಡತನದಿಂದ ಸುಮಾರು ಜನ ಮಕ್ಕಳನ್ನು ಏಳನೇ ತರಗತಿಗೆ ಶಿಕ್ಷಣ ನಿಲ್ಲಿಸಿ ಕೆಲಸಕ್ಕೆ ಕಳುಹಿಸುವಂತಹ ಪರಿಸ್ಥಿತಿ ನಮ್ಮ ಇಲ್ಲಿನ ಜನರದ್ದು” ಎಂದು ಅಲ್ಲಿನ ಮತ್ತೊಬ್ಬ ಮಹಿಳೆ ರಾಣಿ ಮಾತಾಡಿದರು.

ಶೌಚ ಮಾಡಲು ಸರಿಯಾದ ಶೌಚಾಲಯಗಳ ವ್ಯವಸ್ಥೆ ಇಲ್ಲದ ಕಾರಣ ಸುಮಾರು ಜನ ಬಯಲಿನ ಕಡೆ ಹೋಗಿ ಗುಂಡಿ ತೋಡಿ ಬಟ್ಟೆ ಪರದೆಗಳನ್ನು ಅಡ್ಡವಾಗಿ ಇಟ್ಟು ಶೌಚ ಮಾಡುವ ಸ್ಥಿತಿ ಇಲ್ಲಿನವರದ್ದು. ಹೀಗಿರುವಾಗ ಇಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ, ಗರ್ಭಿಣಿ, ಬಾಣಂತಿಯರು ಎಲ್ಲಿಗೆ ಹೋಗಬೇಕು………?” ಎಂಬುದು ಪುಷ್ಪ ಅವರ ಪ್ರಶ್ನೆ.

ಕಾರ್ಮಿಕ ಸಂಘದ ಅಧ್ಯಕ್ಷರಾದ ವೈ ಬಿ ಗಪ್ಪು ಅವರು, “ನಾವು ಸುಮಾರು ದಿನಗಳಿಂದ ಪ್ರತಿಭಟನೆ ಮಾಡುತ್ತಲೇ ಬಂದಿದ್ದೇವೆ ಆದರೂ ಇಲ್ಲಿನ ಜಿಲ್ಲಾಧಿಕಾರಿಗಳು ಬಂದು ಕೇವಲ ಮಾತಿನ ಆಶ್ವಾಸನೆ ನೀಡುತ್ತಾರೆಯೇ ವಿನಃ ಯಾವುದೇ ರೀತಿ ನಮ್ಮ ಸಲುವಾಗಿ ಕಾರ್ಯಗಳು ಮಾತ್ರ ನಡೆಯುತ್ತಿಲ್ಲ, ನಮಗೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಗಳು, ಮಾಧ್ಯಮದವರು ಕೂಡ ನಮ್ಮ ಬಗ್ಗೆ ತಲೆಕೆಡೆಸಿಕೊಳ್ಳುತ್ತಿಲ್ಲ” ಎಂದು ತಮ್ಮ ಅಳಲನ್ನು ಹೇಳಿಕೊಂಡರು.      

ವರದಿ: ಅಂಜನಿದೇವಿ ಕೆ ಸಿ
ಪೀಪಲ್‌ ಮೀಡಿಯಾ.

Related Articles

ಇತ್ತೀಚಿನ ಸುದ್ದಿಗಳು