Thursday, June 13, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸಂಕುಚಿತವಾಗಿದೆ : ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಸಮಾಧಾನ

ಬೆಂಗಳೂರು: ಕಳೆದ ವಾರ ವಿಧಾನ ಸಭೆಯಲ್ಲಿ ಮಂಡನೆಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಹೇಳಿದ್ದಾರೆ.

ಕನ್ನಡ, ಕನ್ನಡಿಗ ಹಾಗು ಕರ್ನಾಟಕದ ಪೂರ್ಣ ಅಭಿವೃದ್ಧಿ ವಿಧೇಯಕದಲ್ಲಿ ಕಾಣುತ್ತಿಲ್ಲ. ನಿಜಕ್ಕೂ ಸಮಗ್ರವಾಗಿದ್ದರೆ , ವಿಧೇಯಕವು  ಕನ್ನಡ, ಕನ್ನಡಿಗ ಹಾಗು ಕರ್ನಾಟಕದ ಸಮಗ್ರ ಅಭಿವೃದ್ಧಿಯ ವಿಧೇಯಕವಾಗಬೇಕಿತ್ತು. ವಿಧೇಯಕ, ಕರ್ನಾಟಕದಲ್ಲಿನ ಕನ್ನಡಿಗರ ಹಿತ ಕಾಪಾಡುವ ಜೊತೆಗೆ, ಹೊರನಾಡು ಮತ್ತು ಹೊರ ದೇಶದಲ್ಲಿರು  ಕನ್ನಡಿಗರ ಹಿತ ಕಾಪಾಡಲು ಸಹ ಚಿಂತಿಸಬೇಕಿತ್ತು ಎಂದು ಹೇಳಿದ್ದಾರೆ.

ವಿಧೇಯಕದ ಮೂಲ ಸ್ವರೂಪದಲ್ಲಿಯೇ ದೋಷವಿದ್ದಂತೆ ಕಾಣುತ್ತದೆ. ಸಮಗ್ರ ಅಭಿವೃದ್ಧಿಯನ್ನು ಎಲ್ಲಾ ಮೂರು ಮುಖ್ಯ ನೆಲೆಗಳಿಂದ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ನೆಲೆಯಿಂದ ನೋಡುವ ಸಮಗ್ರ ವಿಧೇಯಕಾವಾಗಬೇಕಿತ್ತು. ಪ್ರತಿಯೊಂದಕ್ಕು ಒಂದು ವಿಶೇಷ ಅಧ್ಯಾಯವಿರಬೇಕಿತ್ತು. ಉದಾಹರಣಗೆ, ಭಾಷೆಯನ್ನು ತೆಗೆದುಕೊಂಡರೆ, ಶಿಕ್ಷಣದಲ್ಲಿ ಮಾಧ್ಯಮ, ಶಿಕ್ಷಣದಲ್ಲಿ ಕನ್ನಡ ಭಾಷಾ ಕಲಿಕೆ, ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗದಲ್ಲಿ ಕನ್ನಡ ಭಾಷೆಯ ಜಾರಿ ಹಾಗು ಉಪಯೋಗ, ರಾಜ್ಯದಲ್ಲಿರುವ ಕೇಂದ್ರ ಹಾಗು ರಾಜ್ಯಗಳ ಕಛೇರಿ–ಸಂಸ್ಥೆಗಳಲ್ಲಿ ಕನ್ನಡ ಬಳಕೆ ಹಾಗು ಉಪಯೋಗ, ರಾಜ್ಯದಲ್ಲಿ ನೆಲೆಸಿರುವ ಕನ್ನಡೇತರರ ಕನ್ನಡ ಕಲಿಕೆ, ಸರ್ಕಾರೇತರ ವಲಯದಲ್ಲಿ ಕನ್ನಡ ಭಾಷಾ ಬಳಕೆ, ಸಿನಿಮಾ, ಮನರಂಜನೆ, ಸಂಸ್ಕೃತಿ, ಪ್ರವಾಸೋದ್ಯಮ, ಇತ್ಯಾದಿ ನೆಲೆಯಿಂದ ಸಮಗ್ರವಾಗಿ ಜಾರಿಗೊಳಿಸುವ ಆಶಯ ವಿಧೇಯಕದಲ್ಲಿ ಇರಬೇಕಿತ್ತು ಎಂದು ತಿಳಿಸಿದ್ದಾರೆ.

ಇದೇ ಮಾದರಿಯಲ್ಲಿ, ಸರ್ಕಾರಿ, ಅರೆಸರ್ಕಾರಿ, ಸರಕಾರಿ ಬೆಂಬಲಿತ ಸಂಸ್ಥೆಗಳು ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗನ ಉದ್ಯೋಗ ಅವಕಾಶಗಳ ಬಗ್ಗೆ ಮತ್ತು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಒಂದು ಸಮಗ್ರ ಅಧ್ಯಾಯವಿರಬೇಕಿತ್ತು.  ಇದಾವುದು ವಿಧೇಯಕದಲ್ಲಿ ಕಾಣುತ್ತಿಲ್ಲ ಎಂದು ನಿರಂಜನಾರಾಧ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಗ್ರ ಎನ್ನುತ್ತಲೇ ಸಂಕುಚಿತಗೊಳಿಸಿ ತಿಳಿಗೊಳಿಸುವ ಅನೇಕ ಉದಾಹರಣೆಗಳು ವಿಧೇಯಕದಲ್ಲಿ ಸಿಗುತ್ತವೆ. ಅವುಗಳಲ್ಲಿ, ಕೆಲವನ್ನು ಅವಲೋಕಿಸುವುದಾದರೆ, ಕನ್ನಡ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಪ್ರಕರಣ 4ರ ಅಡಿಯಲ್ಲಿ ಕಲ್ಪಿಸಿರುವ ಅವಕಾಶಗಳು, ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಮಿತಿಗೊಳಿಸಿವೆ. ಉದಾಹರಣೆಗೆ, 4(ಸಿ) ಅಡಿಯಲ್ಲಿ, ವಿಧೇಯಕ ಹೇಳುವಂತೆ, ಆಡಳಿತಾತ್ಮಕ ಕಾರಣಗಳಿಗಾಗಿ ಇಂಗ್ಲಿಷ್ ಭಾಷೆಯನ್ನು ಬಳಸುವುದು ಅನಿವಾರ್ಯವಾಗಿದ್ದಲ್ಲಿ ಅಥವಾ ವೈಜ್ಞಾನಿಕ ಹಾಗು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವಾಗ ಆಂಗ್ಲ ಭಾಷೆಯನ್ನು ಬಳಸಬಹುದು ಎನ್ನುತ್ತದೆ. ಈ ಅವಕಾಶವು ವಿಧೇಯಕದ ಮೂಲ ಪ್ರಕರಣ 3ರ ಆಶಯವನ್ನು ತಿಳಿಗೊಳಿಸಿ ಆಡಳಿತದಲ್ಲಿ ಮತ್ತೊಮ್ಮೆ ಆಂಗ್ಲ ಭಾಷೆ ರಾರಾಜಿಸಲು ರಹದಾರಿ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.

 ʼಅನಿವಾರ್ಯವಾಗಿದ್ದಲ್ಲಿʼ ಎಂಬ ಸವಕಲು ಪದ ಎಲ್ಲೆಡೆ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂದಲ್ಲಿ,  ಆಂಗ್ಲ ಭಾಷೆಯನ್ನು ಬಳಸುವ ಅನಿವಾರ್ಯತೆ ಹಾಗು ಕಾನೂನಿನ ಅಡಿಯಲ್ಲಿಯೇ ರಕ್ಷಣೆ ಪಡೆಯಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಭಾಷೆಯೊಂದು ಬೆಳೆಯಬೇಕಾದರೆ, ವೈಜ್ಞಾನಿಕ ಹಾಗು ತಾಂತ್ರಿಕ ವಿಷಯಗಳನ್ನು ನಮ್ಮ ತಾಯ್ನುಡಿನ  ಭಾಷೆಯಲ್ಲಿ ಬಳಸುವಂತಾಗಬೇಕು. ಸರ್ಕಾರ ಅದಕ್ಕೆ ಸೂಕ್ತ ಭೂಮಿಕೆ ಒದಗಿಸಬೇಕು. ಅದು ವೈಜ್ಞಾನಿಕ ಹಾಗು ತಾಂತ್ರಿಕ ವಿಷಯ ವಾದ ಮಾತ್ರಕ್ಕೆ ಆಂಗ್ಲ ಭಾಷೆಗೆ ಮೊರೆ ಹೋಗುವುದಾದರೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಯ ಅರ್ಥವೇನು ಎಂಬ ಮೂಲ ಪ್ರಶ್ನೆ ಕನ್ನಡಿಗನಿಗೆ ಎದುರಾಗುತ್ತದೆ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

ಪ್ರಕರಣ 4ರಲ್ಲಿ ಪ್ರಸ್ತಾಪಿಸಿರುವ ರಾಜಭಾಷಾ ಆಯೋಗದ ಉದ್ದೇಶವಾದರು ಏನು ಎಂಬುದು ಯಕ್ಷ ಪ್ರಶ್ನೆಯಾಗುತ್ತದೆ. ಅಧ್ಯಕ್ಷರು ಹಾಗು ಸದಸ್ಯರ ನೇಮಕಾತಿಯ ವಿಧಾನ ನಿವೃತ್ತ ಅಧಿಕಾರಿಗಳಿಗೆ ಪುನರ್ವಸತಿ ಕಲ್ಪಿಸುವಂತಿದೆ. ಪ್ರಕರಣ ೭ ರಲ್ಲಿ ಭಾಷೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲು ಪ್ರಸ್ತಾಪಿಸಿರುವ ರಾಜ್ಯಮಟ್ಟದ ಸಮಿತಿಯು ಅನುಷ್ಠಾನಕ್ಕೆ ಇರಬೇಕಾದ ಕನಿಷ್ಠ ರಾಜಕೀಯ ಇಚ್ಛಾಶಕ್ತಿಯನ್ನು ಅಭಿವ್ಯಕ್ತಗೊಳಿಸಬಹುದಾದ ಉನ್ನತ ಮಟ್ಟದ ಸಮಿತಿಯಾಗುವ ಬದಲು ಕೇವಲ ಕಾಟಾಚಾರದ ಸಮಿತಿಯಾದಂತಿದೆ ಎಂದಿದ್ದಾರೆ.

ಕನ್ನಡ ಅನುಷ್ಠಾನದ ರಾಜಕೀಯ ಕಾಯಕಲ್ಪ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಬೇಕೆ ಹೊರತು ಅದನ್ನು ತಿಳಿಗೊಳಿಸಬಾರದು. ಕನ್ನಡ ಅನುಷ್ಠಾನಕ್ಕಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಪರಿಷತ್ತಿನ ಅಧ್ಯಕ್ಷರು ಉಪಾಧ್ಯಕ್ಷರುಗಳಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸದಸ್ಯ ಸಂಚಾಲಕರಾದಾಗ ಮಾತ್ರ ಅನುಷ್ಠಾನಕ್ಕೆ ಅಗತ್ಯವಾದ  ರಾಜಕೀಯ ಇಚ್ಚಾಶಕ್ತಿ ಅಭಿವ್ಯಕ್ತಗೊಳ್ಳುತ್ತದೆ. ಜೊತೆಗೆ, ಸರ್ಕಾರದ ಹಂಗಿಲ್ಲದೆ ಸ್ವತಂತ್ರವಾಗಿ ಭಾಷೆಯ ಅನುಷ್ಠಾನದ ಬಗ್ಗೆ ನಿರ್ಭಯವಾಗಿ ಮಾತನಾಡಬಲ್ಲ ಸರ್ಕಾರೇತರ ತಜ್ಞ ಸದಸ್ಯರು ಇರಬೇಕಾಗುತ್ತದೆ ಹಾಗೂ ಇದೇ ಬಗೆಯ ಇಚ್ಛಾಶಕ್ತಿ ವ್ಯಕ್ತವಾಗುವ ರೀತಿಯಲ್ಲಿ ಜಿಲ್ಲಾ ಹಾಗು ತಾಲ್ಲೂಕು ಸಮಿತಿಗಳು ರಚನೆಯಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಸಮಗ್ರ ಎನ್ನುತ್ತಲೇ ಕನ್ನಡ, ಕನ್ನಡಿಗ ಹಾಗು ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಸಂಕುಚಿತ ಹಾಗು ತಿಳಿಗೊಳಿಸುವ ಈ ವಿಧೇಯಕವನ್ನು ಸಮಗ್ರವಾಗಿಯೇ ಪರಾಮರ್ಶಿಸಬೇಕಿದೆ ಎಂದು ನಿರಂಜನಾರಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು