Monday, June 17, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಶಾಲೆಗಳಿಗೆ ಜೀವ ತುಂಬುವ ಕನ್ನಡ ಮನಸ್ಸುಗಳು

ಬೆಂಗಳೂರೆನ್ನುವುದು ಹಲವು ರೀತಿಯ ಮನಸ್ಸುಗಳಿಗೆ ಆಶ್ರಯ ನೀಡುವ ತಾಣ. ಹಲವು ಕನಸುಗಳಿಗೆ ರೆಕ್ಕೆ ನೀಡುವ ಜಾಗ. ಬೆಂಗಳೂರಿಗೆ ಬಂದು ಬರಿಗೈಯಲ್ಲಿ ಹೋದ ಶ್ರಮಿಕನಿಲ್ಲ. ಇಂತಹ ಒಂದು ಊರಿಗೆ ಬಂದು ಬದುಕು ಕಟ್ಟಿಕೊಂಡ ನಂತರ ಒಂದಷ್ಟು ಜನರಿಗೆ ತಾವು ಓದಿದ ಶಾಲೆಗೆ, ತಾನು ಹುಟ್ಟಿ ಬೆಳೆದ ಊರಿಗೆ ಏನನ್ನಾದರೂ ಮರಳಿ ನೀಡುವ ಮನಸು ಮತ್ತು ಕನಸು ಚಿಗುರತೊಡಗುತ್ತದೆ. ಮೊದಮೊದಲು ಹೀಗೆ ಒಂದಿಷ್ಟನ್ನು ಮರಳಿ ಕೊಡುವ ಮನಸ್ಸು ಮಾಡಿದಾಗ ಹೇಗೆ ಕೊಡುವುದು, ಯಾರಿಗೆ ಕೊಡುವುದು ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಇಂತಹ ಪ್ರಶ್ನೆ ಹುಟ್ಟಿಕೊಂಡಾಗ ಕೆಲವರು ಪರೋಪಕಾರಿ ಕೆಲಸ ಮಾಡುವ ಸಂಘಟನೆಗಳಿಗೆ ತಮ್ಮ ಸಂಪಾದನೆಯ ಒಂದು ಭಾಗ ಕೊಟ್ಟು ಸುಮ್ಮನಾಗುತ್ತಾರೆ. ಆದರೆ ಇನ್ನೂ ಕೆಲವರಿರುತ್ತಾರೆ. ಅವರು ಹೀಗೆ ಹಣ ನೀಡಿ ಸುಮ್ಮನಾಗುವುದಿಲ್ಲ. ಅವರು ತಮ್ಮಂತಹ ಸಮಾನ ಮನಸ್ಕರನ್ನು ಹುಡುಕಿ ಅವರೊಡನೆ ಸೇರಿಕೊಂಡು ಕಾರ್ಯಕ್ಷೇತ್ರಕ್ಕಿಳಿದು ತಮ್ಮ ತನು, ಮನ, ಧನ ಹೀಗೆ ಎಲ್ಲವನ್ನೂ ಸಮರ್ಪಿಸಿಕೊಂಡು ದುಡಿಯತೊಡಗುತ್ತಾರೆ. ತಮ್ಮದೇ ಒಂದು ಸಮಾನ ಮನಸ್ಕ ಗುಂಪನ್ನು ಕಟ್ಟಿಕೊಳ್ಳುತ್ತಾರೆ. ಬನ್ನಿ ಇಂದು ಅಂತಹ ಗುಂಪೊಂದ ಕುರಿತು ತಿಳಿದುಕೊಳ್ಳೋಣ.

ಕನ್ನಡ ಮನಸುಗಳು ಕನ್ನಡ ಶಾಲೆಯ ಮಕ್ಕಳೊಡನೆ ಬಿಳಿಗಿರಿ ರಂಗನ ಬೆಟ್ಟದಲ್ಲಿ

ಇಂದು ನಾವು ನಿಮಗೆ ಪರಿಚಯಿಸುತ್ತಿರುವ ಗುಂಪಿನ ಹೆಸರು ಕನ್ನಡ ಮನಸ್ಸುಗಳು. ಈ ಗುಂಪಿನಲ್ಲಿ ಬಹುತೇಕ ಯುವಕರೇ ತುಂಬಿಕೊಂಡಿದ್ದು, ವಿವಿಧ ಊರು, ವಿವಿಧ ಉದ್ಯೋಗ, ವಿವಿಧ ಹಿನ್ನೆಲೆಯ ಯುವಕ-ಯುವತಿಯರಿದ್ದಾರೆ. ವಾರಾಂತ್ಯದ ಎರಡು ದಿನವನ್ನು ಆಗಾಗ ಇವರು ದೂರದೂರಿನ ಸರಕಾರಿ ಶಾಲೆಗಳ ಸುಣ್ಣ-ಬಣ್ಣ, ಮೂಲಭೂತ ಸೌಕರ್ಯ ಅಭಿವೃದ್ಧಿ ಇಂತಹ ಕಾರ್ಯಗಳಿಗೆ ಮೀಸಲಿಡುತ್ತಾರೆ.

ಇತ್ತೀಚಿಗಷ್ಟೇ ಈ ತಂಡವು ಬಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲಿರುವ ಸೋಲಿಗರ ಹಾಡಿ ಮತ್ತು ಶಾಲೆಗೆ ಒಂದಷ್ಟು ಸೌಲಭ್ಯಗಳನ್ನು ಒದಗಿಸಲು ಸುಮಾರು ಐವತ್ತು ಜನರ ತಂಡದಲ್ಲಿ ತೆರಳಿದ್ದರು. ಈ ಹಿನ್ನೆಲೆಯಲ್ಲಿ ತಂಡದ ಹೇಳಿಕೆ ಹೀಗಿದೆ.

“ಐದು ವರ್ಷದ ಸಂತಸದಲ್ಲಿರುವ ಕನ್ನಡ ಮನಸುಗಳು ತಂಡದ ಬಹುದೊಡ್ಡ ಕನಸು ಸರ್ಕಾರಿ ಶಾಲೆ ಉಳಿಸಿ ಅಭಿಯಾನ ತನ್ನ 14ನೇ ಅಧ್ಯಾಯವನ್ನು ಯಶಸ್ವಿಯಾಗಿ ಮುಗಿಸಿದೆ. ಈ ಹಿಂದಿನ ಎಲ್ಲಾ ಅಭಿಯಾನಗಳಿಗಿಂತ ವಿಭಿನ್ನವಾಗಿ, ವಿಶೇಷವಾಗಿ, ಅರ್ಥಪೂರ್ಣವಾಗಿ ಮುಗಿಸಿದ ಖುಷಿ ನಮ್ಮ ಪಾಲಿನದ್ದು. ಈ ಭಾರಿ ನಾವು ಆಯ್ದುಕೊಂಡ ಪ್ರದೇಶ, ಫಲಾನುಭವಿ ಮಕ್ಕಳು, ಕುಟುಂಬದವರು ಕರ್ನಾಟಕದ ಶೋಷಿತ, ಬುಡಕಟ್ಟು ಸಮುದಾಯ ಸೋಲಿಗರದ್ದು. ಹೌದು, ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದ ಕೆ ಗುಡಿ ಆಶ್ರಮ ಶಾಲೆಯ ಹತ್ತಿರ ವಾಸಿಸುವ ಇವರದ್ದು ಸುಮಾರು 230 ಕುಟುಂಬಗಳಿವೆ. ಜೇನು ತೆಗೆದು ಮಾರುವುದು, ಪೋಡು ಬೇಸಾಯದ ಮೇಲೆ ಅವಲಂಬಿತವಾಗಿರುವ ಈ ಕುಟುಂಬಗಳು ಪ್ರವಾಸಿ ಕ್ಷೇತ್ರದ ಹಿನ್ನಲೆಯಲ್ಲಿ ಒಂದಿಷ್ಟು ಹೊಸತನಕ್ಕೆ ತೆರೆದುಕೊಂಡಿದೆಯಾದರೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಮೂಲಭೂತ ಸೌಕರ್ಯದ ವಿಷಯದಲ್ಲಿ ಸಾಕಷ್ಟು ಮುಂದೆ ಬರಬೇಕಿದೆ, ಉನ್ನತ ಶಿಕ್ಷಣಗಳು ಕೂಡ ಕೈಗೆಟುಕಬೇಕಿದೆ, ಪ್ರಾಣಿಗಳ ದಾಳಿಗಳಿಂದ ಮುಕ್ತಿ ಬೇಕಿದೆ, ಸೋರುವ ಸೂರುಗಳಿಂದ ತಪ್ಪಿ ನೆಮ್ಮದಿಯ ಜೀವನ ನಡೆಸಬೇಕಿದೆ. ಇಂತಹ ಅತಿ ಸೂಕ್ಷ್ಮ ಪ್ರದೇಶವನ್ನು ಆಯ್ದುಕೊಂಡಾಗ ನಮ್ಮೊಂದಿಗೆ ಜೊತೆಯಾಗಿದ್ದು ಸುಮಾರು 50 ಜನ ಸ್ವಯಂ ಸೇವಕರು.

ಶುಕ್ರವಾರವೇ ಹೊರಟು ಶನಿವಾರ ಬೆಳಿಗ್ಗೆ ಅಲ್ಲಿಗೆ ತಲುಪಿ ಕೇವಲ ಸೋಲಾರ್ ನಂಬಿದ್ದ ಜಾಗದಲ್ಲಿ ನಮ್ಮ ಕೈಲಾದಷ್ಟು ಬಣ್ಣ ಬಳಿದು ಶಾಲೆಯನ್ನು ಚಂದ ಮಾಡಿದ್ದೇವೆ. ಜೊತೆಗೆ ದಾನಿಗಳ ನೆರವಿನಿಂದ ಅಗತ್ಯ ಇರುವ ಟಾರ್ಚ್, ಪುಸ್ತಕ, ಶೂ, ಜಾಕೆಟ್ ಕೂಡ ಒದಗಿಸಿದ್ದೇವೆ. ಟಾರ್ಪಲ್ ಕೊಟ್ಟೆವಾದರೂ ಇನ್ನಷ್ಟು ಕುಟುಂಬಗಳಿಗೆ ಸಾಕಾಗಲಿಲ್ಲ, ಹಾಗಾಗಿ ಇನ್ನಷ್ಟು ದಾನಿಗಳ ನೆರವನ್ನು ನಿರೀಕ್ಷಿಸುತ್ತಿದ್ದೇವೆ. ಒಟ್ಟಾರೆ ಇದೊಂದು ಅದ್ಭುತ ಕಾರ್ಯಕ್ರಮ ಮಾತ್ರವಲ್ಲ, ಇಡೀ ತಂಡದ ಎಲ್ಲರ ಶ್ರಮ, ವೀಕೆಂಡ್ ಸಾರ್ಥಕವಾದ ದಿನ. ಮಕ್ಕಳ ಶಿಸ್ತುಬದ್ದ ಸ್ವಾಗತ, ಸೋಲಿಗರ ಹಾಡಿಯಲ್ಲಿ ಪುಷ್ಪಮ್ಮರ ಸ್ವಾಗತ ಹಾಡು, ರಂಗೇಗೌಡರ ತಂಡದ ಗೊರುಕನ ಕುಣಿತ, ಬಡಗರ ಕುಣಿತ, ರಂಗಮ್ಮ ನಾಗಮ್ಮ ಮುಂತಾದವರ ಗುಬ್ಬಿ ಹಾಲೆ ಮುಂತಾದ ಹಾಡಿಕೆಗಳು, ಜೈ ಮಾದೇಶ್ವರನ ತಮಟೆ ಸದ್ದು, ಊರ ಜನರ ಖುಷಿ, ಮುಗ್ಧ ನಗು ಎಲ್ಲವೂ ನಮ್ಮಲ್ಲಿ ಹಾಗೇ ಉಳಿಯಲಿದೆ, ಎಂದೆಂದಿಗೂ ಕಾಡಲಿದೆ, ಮತ್ತೆ ಸೋಲಿಗರ ಕಾಡಿಗೆ ಮನಸ್ಸನ್ನು ಕರೆಯಲಿದೆ..

ಇದಕ್ಕೆಲ್ಲಾ ಬೆಂಬಲವಾಗಿ ನಿಂತ ನಮ್ಮ ನೆಚ್ಚಿನ ಸೂರ್ಯ ಫೌಂಡೇಷನ್, ದಾನಿಗಳು, ಎರಡು ದಿನ ಜೊತೆಗಿದ್ದು ಕೆಲಸ ಮಾಡಿದ್ದಲ್ಲದೆ ಅಲ್ಲಿಯ ಜನರಿಗೆ ಒಂದಿಷ್ಟು ಅರಿವು ತುಂಬಿದ ಭರವಸೆ ತಂಡದ ಸದಸ್ಯರಿಗೆ, ಮುಖ್ಯವಾಗಿ ಸದಾ ಅದೇ ಖುಷಿಯಿಂದ ಬಂದು, ಇದ್ದು, ಮಕ್ಕಳೊಂದಿಗೆ ಮಕ್ಕಳಾಗಿ ಜವಾಬ್ದಾರಿಯನ್ನು ನಾಜೂಕಾಗಿ ಮುಗಿಸಿದ ಕನ್ನಡ ಮನಸುಗಳು ತಂಡದ ಎಲ್ಲಾ ಸದಸ್ಯರು, ಸ್ವಯಂ ಸೇವಕರಿಗೆ ತಂಡದ ಪರವಾಗಿ ಧನ್ಯವಾದಗಳು”

ಈ ತಂಡ ಅಲ್ಲಿ ಕೆಲಸ ಮಾಡಿ ಬಂದ ನಂತರ ಸುಮ್ಮನಾಗುವುದಿಲ್ಲ. ಅದು ಅಲ್ಲಿನ ಆಗುಹೋಗುಗಳನ್ನು ಫಾಲೋಅಪ್‌ ಕೂಡಾ ಮಾಡುತ್ತದೆ. ಇವರ ವ್ಯಾಪ್ತಿ ಉಡುಪಿ ಜಿಲ್ಲೆಯ ಕುಗ್ರಾಮವೆನ್ನಬಹುದಾದ ಕೂಡಿಗೆಯಿಂದ, ಬಿ ಆರ್‌ ಹಿಲ್ಸ್‌ ತನಕ, ಬಳ್ಳಾರಿಯಿಂದ ಉತ್ತರ ಕರ್ನಾಟಕದ ಇನ್ಯಾವುದೋ ಹಳ್ಳಿಯ ತನಕ ಹೀಗೆ ಹಲವು ಊರುಗಳಿಗೆ ಹಬ್ಬಿದೆ.

ಇದರ ಆರಂಭದ ಕತೆ ಹೀಗಿದೆ

“ಕನ್ನಡ, ಕನ್ನಡಿಗ, ಕರ್ನಾಟಕ ಕೇಂದ್ರಿತ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಒಂದಷ್ಟು ಯುವ ಕನ್ನಡಪರ ಜೀವಗಳು 2017ರಲ್ಲಿ ವಿವಿಧ ಭಾಗಗಳಿಂದ ಬೆಂಗಳೂರಿನಲ್ಲಿ ಒಂದಾಗುತ್ತಾರೆ. ಹರಿದ ಬಾವುಟಗಳನ್ನು ತೆಗೆದು ಹೊಸ ಕನ್ನಡ ಬಾವುಟ ಹಾರಿಸುವುದು, ಪರಿಸರ ಕಾಳಜಿ ಮೂಡಿಸುವುದು, ಕನ್ನಡಿಗರಿಗೆ ಉದ್ಯೋಗ ಕೊಡಿಸುವುದು, ನಾಮಫಲಕಗಳ ಬದಲಾವಣೆಗೆ ಅಂಗಡಿಗಳಲ್ಲಿ ಅಭಿಯಾನ ಮಾಡುವುದು, ಹಿಂದಿ ಹೇರಿಕೆ ವಿರುದ್ಧ ಜನಜಾಗೃತಿ ಮೂಡಿಸುವುದು, ಕನ್ನಡ ಬಳಸುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸುವುದು ಹೀಗೆ ಹತ್ತು ಹಲವು ರೀತಿಯಲ್ಲಿ ತಮಗೆ ಸಿಗುವ ರಜಾ ದಿನಗಳಲ್ಲಿ ಮಾಡುತ್ತಾ ಬಂದಿರುತ್ತಾರೆ. ಕನ್ನಡಕ್ಕಾಗಿ ಒಂದಾದ ಈ ಎಲ್ಲಾ ಮನಸುಗಳು “ಕನ್ನಡ ಮನಸುಗಳು” ಎಂದು ಚಂದದ ಹೆಸರಿಟ್ಚುಕೊಂಡು ಅತಿ ಉದ್ದದ ಬಾವುಟವನ್ನು ಬೆಂಗಳೂರಿನ ಹೃದಯ ಭಾಗದಲ್ಲಿ ಮೆರವಣಿಗೆ ಮಾಡುವ ಮೂಲಕ ಸಂಚಲನ ಮೂಡಿಸಿದೆ. ಹೀಗೇ ಸಾಗುತ್ತಿರುವಾಗ ಸುಮಾರು 2019ರಲ್ಲಿ ತಂಡದ ಸದಸ್ಯರೊಬ್ಬರ ಊರಿನ ಸರ್ಕಾರಿ ಕನ್ನಡ ಶಾಲೆ ಮುಚ್ಚುವ ಪರಿಸ್ಥಿತಿಗೆ ಹೋಗಿರುತ್ತದೆ. ಅದನ್ನು ಪುನಶ್ಚೇತನಗೊಳಿಸುವ ಸಂಕಲ್ಪ ಕೈಗೊಂಡು ಏನೂ ಅನುಭವ ಇಲ್ಲದ ಯುವ ಮನಸ್ಸುಗಳು ತಮ್ಮ ಕೈಯಿಂದ ಹಣ ಹಾಕಿ ಇಡೀ ಶಾಲೆಗೆ ಬಣ್ಣ ಬಳಿದು ಹೊಸ ರೂಪ ಕೊಟ್ಟು ಮಾದರಿಯಾಗುತ್ತಾರೆ, ಅಲ್ಲಿಂದ ಮೊದಲಾಗಿದ್ದೇ “ಸರ್ಕಾರಿ ಶಾಲೆ ಉಳಿಸಿ ಅಭಿಯಾನ..”

ಅಭಿಯಾನ ಹಂತಹಂತವಾಗಿ ಸಾಗುತ್ತಾ ಜನಮೆಚ್ಚುಗೆಗೆ ಪಾತ್ರವಾಗುತ್ತದೆ, ನಮ್ಮ ಊರಿಗೂ ಬನ್ನಿ ಎಂಬ ಅಹವಾಲುಗಳು ಬರಲು ಆರಂಭವಾಗುತ್ತದೆ. ಇದನ್ನು ಮನಗಂಡ ಕನ್ನಡ ಮನಸುಗಳು ತಂಡ ಅಭಿಯಾನವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ದಾನಿಗಳ ಮೊರೆ ಹೋದಾಗ ಅದಕ್ಕೆ ಸಿಕ್ಕ ಜನರ ಬೆಂಬಲ ಇನ್ನಷ್ಟು ಶಾಲೆಗಳಿಗೆ ಬಣ್ಣ ಕೊಡಲು ನೆರವಾಗುತ್ತದೆ. ಮುಖ್ಯವಾಗಿ ಬೆಂಗಳೂರಿನ “ಸೂರ್ಯ ಫೌಂಡೇಶನ್” ತಂಡದ ಬೆನ್ನೆಲುಬಾಗಿ ನಿಂತಿದೆ ಎಂದರೂ ತಪ್ಪಾಗಲಾರದು. ಜೊತೆಗೆ ಹಲವಾರು ಕಂಪೆನಿಗಳು ತಮ್ಮ CSR ನಿಧಿಯಲ್ಲಿ ಪಾಲನ್ನು ಕೆಲವು ಶಾಲೆಗಳಿಗೆ ಕೊಟ್ಟಿದ್ದೂ ಇದೆ. ಮೊದಮೊದಲು ಕೇವಲ ಬಣ್ಣ ಬಳಿಯುವುದನ್ನಷ್ಟೇ ಮಾಡಿದರೂ ತದನಂತರ ದಾನಿಗಳ ಭರವಸೆ ಮತ್ತು ನೆರವಿನಿಂದ ಶಾಲೆಗಳಿಗೆ ಅಗತ್ಯವಿರುವ ಪ್ರಾಜೆಕ್ಟರ್, ಪ್ರಿಂಟರ್, ಡೆಸ್ಕ್, ಫ್ಯಾನ್, ಲೈಬ್ರರಿ ಪುಸ್ತಕ ಮುಂತಾದ ಅತ್ಯಗತ್ಯ ವಸ್ತುಗಳನ್ನು ಕೂಡ ಕೊಡಮಾಡಿದೆ. ಇದೆಲ್ಲವೂ ಸಾಧ್ಯವಾಗಿದ್ದು ತಂಡದ ಸುಮಾರು 150 ಸದಸ್ಯರಿಂದ, ತಮ್ಮ ವಾರಾಂತ್ಯವನ್ನು ಇದಕ್ಕಾಗಿ ಮೀಸಲಿಟ್ಟು ಗೊತ್ತಿಲ್ಲದ ಊರಿಗೆ ಹೋಗಿ, ಸಿಕ್ಕ ವ್ಯವಸ್ಥೆಗೆ ಹೊಂದಿಕೊಂಡು ಅಚ್ಚುಕಟ್ಟಾಗಿ ಕೆಲಸ ಮುಗಿಸಿ ಬರುತ್ತಾರೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದರೂ, ಕೆಲಸದ ಒತ್ತಡವೆಲ್ಲಾ ಬದಿಗಿಟ್ಟು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಾರೆ. ಅಷ್ಟೇ ಅಲ್ಲ, ದಾನಿಗಳನ್ನು ಸಂಪರ್ಕಿಸುವ, ಕೆಲಸವನ್ನು ಜನರಿಗೆ ತಲುಪಿಸುವ ಮಾಧ್ಯಮ ಕೂಡ ಇದೇ ಸದಸ್ಯರು. ಇವರಿಗೆ ತಾವು ಮಾಡುವ ಕೆಲಸದಲ್ಲಿ ಹೆಮ್ಮೆಯಿದೆ, ಶ್ರದ್ಧೆಯಿದೆ, ಹೆಚ್ಚಾಗಿ ಆತ್ಮತೃಪ್ತಿಯಿದೆ.

ಸಂಘಟನೆಯ ಮುಂದಿನ ಕನಸುಗಳು

ಇಲ್ಲಿಯವರೆಗೆ ಸುಮಾರು 14 ಅಭಿಯಾನಗಳ ಮೂಲಕ 25 ಕ್ಕೂ ಮಿಕ್ಕಿ ಶಾಲೆಗಳ ಅಭಿವ್ರದ್ದಿ ಮಾಡಿದ್ದಾರೆ. ಅಲ್ಲಿಯ ಮಕ್ಕಳ ಭವಿಷ್ಯಕ್ಕೆ ಬಣ್ಣ ತುಂಬಿದ್ದಾರೆ. ಶಿಕ್ಷಕರ ವಾಟ್ಸಾಪ್ ಗುಂಪು ಮಾಡಿ ನಿರಂತರ ಮಾಹಿತಿ ಕಲೆಹಾಕುತ್ತಾರೆ. ಹೆಚ್ಚಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೂಡ ಜಾಸ್ತಿಯಾಗಿದೆ, ಸರ್ಕಾರದ ಹೆಚ್ಚುವರಿ ಅನುದಾನಗಳು ಬಂದಿದೆ, ಕನ್ನಡ ಮನಸುಗಳ ಕೆಲಸದಿಂದ ಪ್ರೇರಿತರಾಗಿ ಹಲವಾರು ಇತರ ಸಂಸ್ಥೆಗಳು ಇದೇ ಮಾದರಿ ಕಾರ್ಯ ಕೈಗೊಂಡಿದೆ. ಕನ್ನಡ ಮನಸುಗಳು ಸುಮಾರು 100 ಅಭಿಯಾನ ಮಾಡಬೇಕು ಎಂಬ ಕನಸನ್ನು ಹೊತ್ತಿದ್ದಾರೆ. ಇದಕ್ಕಾಗಿ ನಿರಂತರ ದಾನಿಗಳ ನೆರವು ಕೂಡ ಅಗತ್ಯವಿರುತ್ತದೆ. ಒಂದುವೇಳೆ ನಿಮ್ಮೂರಿನ ಶಾಲೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೆ, ಅಥವಾ ನೀವುಗಳು ನಿಮ್ಮ ದುಡಿಮೆಯ ಒಂದಿಷ್ಟು ಪಾಲು ಮಕ್ಕಳ ಖುಷಿಗಾಗಿ ಮುಡಿಪಿಡುವುದಾದರೆ, ಸ್ವಯಂ ಸೇವಕರಾಗಿ ಸಮಯ ನೀಡುವುದಾದರೆ ಮುಕ್ತ ಮನಸ್ಸಿನಿಂದ ಕನ್ನಡ ಮನಸುಗಳನ್ನು ಸಂಪರ್ಕಿಸಬಹುದು

ಸಂಪರ್ಕ: ಪವನ್‌9742608420

ಕನ್ನಡ ಶಾಲೆಗಳನ್ನು ಚಂದಗೊಳಿಸುವ ಈ ಸಂಘಟನೆಯ ಮುಂದಿನ ದಿನಗಳು ಇನ್ನಷ್ಟು ಚಂದವಾಗಲಿ ಎಂದು ಪೀಪಲ್‌ ಮೀಡಿಯಾ ಹಾರೈಸುತ್ತದೆ.

🔸 ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ https://chat.whatsapp.com/GBc6sg7E2FQLuXblEdBxSi

ಇದನ್ನೂ ನೋಡಿ: https://www.youtube.com/watch?v=kjwGqFwWoVY

Related Articles

ಇತ್ತೀಚಿನ ಸುದ್ದಿಗಳು