Tuesday, June 18, 2024

ಸತ್ಯ | ನ್ಯಾಯ |ಧರ್ಮ

‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು

ಐದೂವರೆ ಅಡಿಯ ಹುಲು ಮಾನವನೊಬ್ಬ ದೈತ್ಯ ಸ್ಕ್ರೀನಿನಲ್ಲಿ ಕಪ್ಪೆ ನೋಡಿದರೂ ಅವಾಕ್ಕಾಗುತ್ತಾನೆ. ಈ Larger than life ಸಿನೆಮಾದ ಬಂಡವಾಳ. ಮಾಧ್ಯಮವಾಗಿ ಅದು ರಂಗಭೂಮಿಗಿಂತ ಭಿನ್ನವಾಗಿರುವುದು ಈ ಅಂಶಕ್ಕಷ್ಟೇ ಅಲ್ಲ, ಸುಲಭವಾಗಿ visuals ಮೂಲಕ ಪ್ರೇಕ್ಷಕರನ್ನು ಯಾಮಾರಿಸುವ ತಂತ್ರದ ಮೂಲಕ.

ಪ್ರೇಕ್ಷಕನೊಬ್ಬ ಹಂಬಲಿಸುವ ಭಾವ ಮತ್ತು ಆಂಗಿಕ ಸಾಧ್ಯತೆಗಳನ್ನು ರಂಗಭೂಮಿ ತಕ್ಷಣದ ವರ್ತಮಾನದಲ್ಲಿ ಮುಂದಿಡುತ್ತಾ ಹೋದರೆ, ಸಿನೆಮಾಕ್ಕೆ ಟೇಕ್ ಗಳ ಮತ್ತು ಎಡಿಟಿಂಗ್ ನ ಲಾಭವಿದೆ ಎಂಬುದನ್ನು ನಾವು ಮರೆಯಬಾರದು. ಸಿಸಿಲ್ ಡಿಮೆಲೋನಿಂದ ಈ ಮಾಧ್ಯಮದ ಶಕ್ತಿ ನಮಗೆ ಅರಿವಿಗೆ ಬಂದಿದೆ. ಇರಲಿ.

ಈಗ ಈ ಕಾಂತಾರ ಸಿನೆಮಾದ ಬಗ್ಗೆ

ಈ ಸಿನೆಮಾದಲ್ಲಿ ಗರುಡ ಗಮನ.. ಪುಷ್ಪಾ, ಪುಲಿ, ಮುರುಗನ್ ಸಿನೆಮಾಗಳ ಅಂಶಗಳೆಲ್ಲಾ ಬೆರೆತಿದೆ. ಅಷ್ಟೇ ಅಲ್ಲ, ನಮ್ಮ ಈ ಹಿಂದಿ ಸಿನೆಮಾಗಳ ಅಷ್ಟಿಷ್ಟು ಅಂಶಗಳೂ ಢಾಳಾಗಿವೆ. A-moral (ನೀತಿ ಅತೀತ) ನಾಯಕನೊಬ್ಬನನ್ನು ವಿಜೃಂಭಿಸುವ ಬಗೆ ಇದು.

ಊರಿನ ಅನಾಮಿಕ ನೈತಿಕ ಲಂಗರು ಇಲ್ಲದ ಒಬ್ಬನನ್ನು ಹೀರೋ ಮಾಡುವ ಸಿನೆಮಾಗಳು ನಮ್ಮಲ್ಲಿ ಯಥೇಚ್ಛವಾಗಿವೆ. ಮದರ್ ಇಂಡಿಯಾದ ಹೀರೋನಿಂದ ದಿಲೀಪ್ ಕುಮಾರ್ ಅಮಿತಾಬ್ ಬಚ್ಚನ್ ವರೆಗೆ ಇದು ಕಾಲಕಾಲಕ್ಕೆ ಪುನರ್ಜನ್ಮ ಎತ್ತಿದೆ. ಹೊಸತೇನೂ ಇಲ್ಲ, ಇರುವುದು ಟ್ರೀಟ್ ಮೆಂಟಲ್ಲಿ ಮಾತ್ರ.

ಅದಕ್ಕೇ ಮಾರ್ಕ್ ಟ್ವೈನ್ ಹೇಳಿದ್ದು. “ ಜಗತ್ತಿನಲ್ಲಿ ಒಟ್ಟು ನೂರಾ ಎಂಟು ಕತೆಗಳಷ್ಟೇ ಇರೋದು. “ ಅಂತ. ಅದನ್ನೇ ಮತ್ತೆ ಮತ್ತೆ ಬರೆಸಿ ಹೊಸೆಯೋದಷ್ಟೇ ಕತೆಗಾರರ ಪ್ರತಿಭೆ.

ಸಿನೆಮಾಗಳು ಸಾಮಾಜಿಕ ವಾಸ್ತವ ಕಟ್ಟಿಕೊಡುತ್ತದೆಂಬ ಭ್ರಮೆ ನಮಗಿದೆ. ಅಲ್ಲಿ ನಿಜಕ್ಕೂ ಇರುವುದು visual realism ವಿವರಗಳು.

ಈ ಕಾಂತಾರ ನೋಡಿ

ನಮ್ಮ ಯಾವ ಹಳ್ಳಿಯಲ್ಲೂ ನಯವಂಚಕ ವಿಲನ್ ಒಬ್ಬ ಸರಕಾರಿ ಅಧಿಕಾರಿ ಇರುವಾಗ ಬೆಟಾಲಿಯನ್ ನ ಕಟ್ಟಿಕೊಂಡು ಹಿಂಸೆಗಿಳಿಯುವುದಿಲ್ಲ. ಅಷ್ಟೇಕೆ, ನಮ್ಮ ಮರಗಳ್ಳರು ಸರಕಾರಿ ಅಧಿಕಾರಿ ಎದುರು ಸವಾಲಿನ ಮಾತೇ ಆಡುವುದಿಲ್ಲ.

ಇನ್ನೂ ವಾಸ್ತವ ಬೇಕೇ,

ಯಾವ ಮರಗಳ್ಳನೂ ಮರ ಇದ್ದಂತೆ ಅದಕ್ಕೆ ಕೊಡಲಿ ಗರಗಸ ಹಾಕುವುದಿಲ್ಲ. ಮೊದಲು ಅದರ ರೆಂಬೆ –ಕೊಂಬೆ ಕಡಿದು ಅದನ್ನು ನಗ್ನವಾಗಿಸಿ ಆಮೇಲೆ ಅದನ್ನು ಉರುಳಿಸುತ್ತಾರೆ. ನಮ್ಮೂರಿನ ಫಟಿಂಗರು ಹತ್ತಡಿ ಉದ್ದದ ಮೋಪು ಕತ್ತರಿಸಿ ಹಗ್ಗದಲ್ಲಿ ಅದನ್ನು ಬೀಳಿಸುತ್ತಿದ್ದರು!

ಅರ್ಥಾತ್ ಈ ಸಿನೆಮಾ ಮಾಮೂಲಿ ಸಿನೆಮಾಗಳ ವ್ಯಾಕರಣವನ್ನೇ ಢಾಳಾಗಿ ಉಪಯೋಗಿಸಿದೆ. ನಮ್ಮನ್ನು ಕೂರಿಸುವುದು script ನ ಸೂಕ್ಷ್ಮಗಳಲ್ಲ! Visual detailಗಳ ಸೂಕ್ಷ್ಮ. ಅದರಲ್ಲೂ ಸನ್ನಿವೇಶವನ್ನು ವ್ಯಂಗ್ಯದ ಮಾತಿನ ಕಮೆಂಟುಗಳ ಮೂಲಕ ನಿಭಾಯಿಸುವುದರಲ್ಲಿ.

ಚಿತ್ರಕಥೆಯಲ್ಲಿ ಈ ವಾಸ್ತವದ ಸೂಕ್ಷ್ಮತೆ ಇದ್ದಿದ್ದರೆ ನಿರ್ದೇಶಕನಿಗೆ ಇದನ್ನು ನಿಭಾಯಿಸುವುದೇ ಕಷ್ಟವಾಗುತ್ತಿತ್ತು. ಧಣಿಯ ತಲೆ ಹಾರಿಸುವುದೂ ಕಷ್ಟವಾಗುತ್ತಿತ್ತು.

ಅಂದರೆ, ಸಿನೆಮಾ ನಿಜ ವಾಸ್ತವವನ್ನು ನೆಚ್ಚಿಕೊಂಡು ಕೂತರೆ ಅದಕ್ಕೆ larger than life ಆಯಾಮ ಪ್ರಾಪ್ತವಾಗುವುದಿಲ್ಲ. ಸಿನೆಮಾ ಕೊನೆಗೂ ಮುಟ್ಟಿದರೆ ಸಿಗದ ಭ್ರಮಾ projection!!

ಆದ್ದರಿಂದಲೇ ಚಿತ್ರಕಥೆ ಕ್ರೂಡ್ ಆಗಿ ತನ್ನ ಗುರಿಯತ್ತ ಸಾಗುತ್ತದೆ. ಅದಕ್ಕೆ ಒಬ್ಬ ಅಸಡ್ಡಾಳ ಒರಟ ಹೀರೋ ಬೇಕು. ವಿಲನ್ ಎಂದು ಭ್ರಮೆ ಹುಟ್ಟಿಸುವ ಕೊನೆಗೆ ಸಜ್ಜನನೆಂದು ಅರಿವಾಗುವ ಒಂದು ಪಾತ್ರ ಬೇಕು. ಜಂಜೀರ್ ಸಿನೆಮಾದಲ್ಲಿ ಪ್ರಾಣ್ ಈ ಪಾತ್ರಕ್ಕೆ ಹೊಸ ಆಯಾಮ ನೀಡಿದ್ದು. ದ್ವಂದ್ವದಲ್ಲಿರುವ ನಾಯಕಿ ಇರಬೇಕು. ನಾಜೂಕಿನ ವಿಲನ್ ಒಬ್ಬ ಇರಬೇಕು. (ಅಶ್ವಥ್ ಇಂಥಾ ಒಂದೆರಡು ಪಾತ್ರ ಮಾಡಿದ್ದರು!)

ಇದೇ ಕಾಂತಾರದ ಶಕ್ತಿ ಮತ್ತು ಆಳ ವಿಶ್ಲೇಷಣೆಯಲ್ಲಿ ಅದರ ವೀಕ್ ನೆಸ್.

ಸಿನೆಮಾ ಎಂದರೆ ಇಷ್ಟೇ

ನಮ್ಮ ಪ್ರೇಕ್ಷಕರ aesthetic ಅನುಭವದ ಪ್ರೌಢಿಮೆ ಹೇಗಿದೆಯೆಂದರೆ ಅವರು ಇದನ್ನು ಸಿನೆಮಾ ಎಂದಷ್ಟೇ ನೋಡಬಲ್ಲರು. ಪದ್ಮಾವತ್ ಸಿನೆಮಾ ಬಂದಾಗ , ಅಲ್ಲಾವುದ್ದೀನ್ ಪಾತ್ರಧಾರಿ ಮಾತಾಡಿದಾಗಲೆಲ್ಲಾ ಶಿಳ್ಳು, ಚಿಲ್ಲರೆ ನಾಣ್ಯಗಳ ಸುರಿಮಳೆ ಆಗಿದ್ದನ್ನು ನಾನು ಕಂಡಿದ್ದೇನೆ.

ನಿತ್ಯದಲ್ಲಿ ಅಲ್ಲಾವುದ್ದೀನ್ ಒಬ್ಬ ಕೇಡಿ.!! ಅದು ಜನರಿಗೂ ಗೊತ್ತು. ಆದರೆ ಸಿನೆಮಾದಲ್ಲಿ ಅದೇಕೆ ಈ ಅಲ್ಲಾವುದ್ದೀನನನ್ನು ಮೆಚ್ಚುತ್ತಾರೆ? ಈ ಅರಿವು ಸಿನೆಮಾದವರಿಗೆ ಇರುವ ಕಾರಣವೇ ರಾಜ್ ಕುಮಾರ್ ರಾವಣನ ಪಾತ್ರ ಮಾಡಬಲ್ಲರು. ದರ್ಶನ್ ದುರ್ಯೋಧನನ ಪಾತ್ರ ಮಾಡಬಲ್ಲರು.

ಈ ವಿಚಿತ್ರ , ವಿರೋಧಾಭಾಸವೇ ಅಲ್ಲ. ಇದು ನಾವು ಪಾತ್ರವೊಂದನ್ನು ನೋಡುವ ರೀತಿ. ಈ aesthetic reception ಪ್ರೇಕ್ಷಕನ ಪ್ರೌಢಿಮೆಯೂ ಹೌದು. ನಿರ್ದೇಶಕ ಮತ್ತು ಪ್ರೇಕ್ಷಕನ ನಡುವಿನ ಒಪ್ಪಂದವೂ ಹೌದು.

ಕಾಂತಾರದಲ್ಲಿ ಹೀರೋ ತನ್ನ ಬೇಜವಾಬ್ದಾರಿ ಬದುಕಿನಿಂದ ಬದಲಾಗುವ purposeful transformation ಕೂಡಾ ಹೊಸದೇನಲ್ಲ. ಅದಕ್ಕೊಂದು ಬಲವಾದ ಕಾರಣ ನೀಡುವುದೇ script ನ ಸವಾಲು. ಇಲ್ಲಿ ಹೀರೋನ ಸಜ್ಜನ ತಮ್ಮನೊಬ್ಬನಿದ್ದಾನೆ. ಅವನನ್ನು ವಂಚನೆಯಲ್ಲಿ ಸಾಯಿಸಿದರೆ ಕತೆ ಮುಂದೆ ಓಡುತ್ತದೆ.

ಈ ಕ್ರೂಡ್ script ಕಾರಣಕ್ಕೇ ಈ ಸಿನೆಮಾ ಪೇಲವವಾಗಿ ಮುಗಿಯುವುದು. ಇಲ್ಲೂ ಆಧುನಿಕ ಸಿನೆಮಾದ ಬಲಹೀನತೆ ಇದೆ. State̲ = ಸರಕಾರವನ್ನು ಆದರ್ಶೀಕರಿಸುವುದು ಸುಲಭ. ಭೂಮಾಲೀಕನೊಬ್ಬನನ್ನು ಕೇಡಿಯಾಗಿಸುವುದು ಇನ್ನೂ ಸುಲಭ. ಸರಕಾರವನ್ನು ಕೇಡಿಯಾಗಿ ಚಿತ್ರಿಸಿ ನಿರ್ಮಾಪಕ/ ನಿರ್ದೇಶಕ ರಗಳೆ ಮಾಡಿಕೊಳ್ಳುವುದು ಕಷ್ಟದ ಕೆಲಸ. ನಮ್ಮ ಮಹಾ ಮಹತ್ವಾಕಾಂಕ್ಷಿ ನಿರ್ದೇಶಕರೂ ಕೂಡಾ ಈ end game ನಲ್ಲಿ ಶರಣಾಗಿದ್ದಾರೆ.

ಆದ್ದರಿಂದಲೇ ಈ ಸಿನೆಮಾ ಇಡೀ ಸಿನೆಮಾ ಸಿನೆಮಾದ ಸಿದ್ಧ ಸೂತ್ರವಾದ larger than Life+visual social ವಿವರಗಳ ತಂತ್ರದ ಮೂಲಕ ಪ್ರೇಕ್ಷಕನನ್ನು ಯಾಮಾರಿಸಿ ಗೆದ್ದಿದೆ.

ಕಾಂತಾರ ಇಷ್ಟವಾಗುವುದು ಈ ಸ್ಥಳೀಯ( ನೇಟಿವಿಟಿ ಅಂತಾರಲ್ಲ?) ಕ್ಯಾನ್ವಾಸನ್ನು ಢಾಳಾಗಿ ಬಳಸಿದ್ದರಲ್ಲಿ. ಕೊನೆಯ ಐದಾರು ನಿಮಿಷಗಳ ಇಂಟೆನ್ಸ್‌ ಪ್ರಸ್ತುತಿಯೂ ಚೆನ್ನಾಗಿದೆ.

ಇನ್ನು ಆರು ತಿಂಗಳ ಬಳಿಕ ಇನ್ನೊಂದು ಸಿನೆಮಾ ಬಂದರೆ ಅದಕ್ಕೂ ರೋಮಾಂಚನಗೊಳ್ಳಲು ಪ್ರೇಕ್ಷಕ ಸಿದ್ಧನಿದ್ದಾನೆ. Treatment ನ ಹೊಸತನ ಅಷ್ಟೇ ಅದರ ಮಾನದಂಡ.

ಇಷ್ಟು ದಿನ ದ.ಕದ ಭಾಷೆ , ಸಂಸ್ಕೃತಿ ಕನ್ನಡ ಸಿನೆಮಾ ಜಗತ್ತಿನಲ್ಲಿ ಹಾಸ್ಯದ ಸರಕಾಗಿತ್ತು. ದ.ಕ.ದ ಬಹಳಷ್ಟು ಕಲಾವಿದರು ಕನ್ನಡ ಸಿನೆಮಾದಲ್ಲಿದ್ದರೂ ಅವರೂ ಈ ಗಾಂಧಿನಗರಕ್ಕೆ ನಜರೊಪ್ಪಿಸಿದವರು.

ಒಂದು ಮೊಟ್ಟೆಯ ಕತೆ, ಗರುಡ ಗಮನ.. ಗಳ ಬಳಿಕ ಈಗ ಕಾಂತಾರ ಸ್ಥಳೀಯ ಭಾಷೆ, ಸಂಸ್ಕೃತಿಯ ಸೊಗಡನ್ನು ಒಂದು ಜಗತ್ತಾಗಿ ಬಿಂಬಿಸಿದೆ. ಈ ಸೊಗಡು ಪೂರಾ ಶೂದ್ರ ಸೊಗಡು ಕೂಡಾ.! ಕೋಳಿ, ಹೆಂಡದ ಘಮಲು ಗಮನಿಸಬೇಕು.! ದ.ಕ.ದ ಜನಿವಾರದ ಭಟ್ಟರ ಪಾತ್ರಗಳನ್ನು ಅಳಿಸಿ ಶೂದ್ರ ನೇಟಿವಿಟಿ ಕೇಂದ್ರಕ್ಕೆ ಬಂದಿದೆ. ದೈವ ಗಗ್ಗರ ಕುಣಿಸುತ್ತಿದೆ.

ಕೆ.ಪಿ. ಸುರೇಶ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!

ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ, ಪ್ರೀತಿ,, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು ಎನ್ನುತ್ತಾರೆ ಲೇಖಕಿ ಶಾಂತಾ ಕುಮಾರಿ

https://peepalmedia.com/pappu-endu-trol-madidavaru-dangagiddare-i-nishkalmasha-naguvige/

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

Related Articles

ಇತ್ತೀಚಿನ ಸುದ್ದಿಗಳು