ಬೆಂಗಳೂರಿನಲ್ಲಿ ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಕರವೇ ಆಗ್ರಹ: ಅನುಮತಿ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

ಬೆಂಗಳೂರು: ಕನ್ನಡಿಗರ ಭಾಷಾಭಿಮಾನ ಹಾಗೂ ಭಾವನೆಗಳಿಗೆ ಧಕ್ಕೆ ತಂದಿರುವ ಬಾಲಿವುಡ್ ಗಾಯಕ ಸೋನು ನಿಗಮ್ ಅವರು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಸಂಗೀತ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಪೊಲೀಸ್ ಇಲಾಖೆ ಹಾಗೂ ಆಡಳಿತವನ್ನು ಒತ್ತಾಯಿಸಿದ್ದಾರೆ. ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ರಾಜ್ಯಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇದೇ ಬರುವ ಅಕ್ಟೋಬರ್ 24, 2026 ರಂದು ಸಂಜೆ 7 ಗಂಟೆಗೆ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ‘ಭಾರತೀಯ ಮಾಲ್ ಆಫ್ ಬೆಂಗಳೂರು’ (Bhartiya Mall of Bengaluru) ನಲ್ಲಿ ‘ದಿ ರೆವಲ್ಯೂಷನ್ ಇಂಡಿಯಾ ಟೂರ್’ (The Revolution India Tour) ಹೆಸರಿನಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ನಾರಾಯಣಗೌಡರು, ಈ ಹಿಂದೆ ಸೋನು ನಿಗಮ್ ನೀಡಿದ್ದ ಕನ್ನಡಿಗ ವಿರೋಧಿ ಹೇಳಿಕೆಯ ವಿರುದ್ಧ ಕರವೇ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಧರ್ಮರಾಜ್ ಟಿ.ಎ. ಅವರು 2025ರ ಮೇ 2ರಂದು ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದನ್ನು ಉಲ್ಲೇಖಿಸಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಈ ಗಂಭೀರ ಸಾರ್ವಜನಿಕ ಆಕ್ಷೇಪ ಹಾಗೂ ಗಾಯವನ್ನು ಕನ್ನಡಿಗರು ಇನ್ನೂ ಮರೆತಿಲ್ಲ ಮತ್ತು ಮರೆಯುವುದೂ ಇಲ್ಲ ಎಂದು ಅವರು ಗುಡುಗಿದ್ದಾರೆ.

ಕರ್ನಾಟಕದ ಜನರ ಭಾಷಾಭಿಮಾನವನ್ನು ಅಪಹಾಸ್ಯ ಮಾಡಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ವ್ಯಕ್ತಿಯೇ ಮತ್ತೆ ಕನ್ನಡಿಗರ ನಾಡಿನಲ್ಲಿ ಬಂದು ಕಾರ್ಯಕ್ರಮ ನಡೆಸಿ ಹಣ ಸಂಪಾದಿಸುವುದನ್ನು ಕನ್ನಡಿಗರು ಮೌನವಾಗಿ ನೋಡಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಯಾರೂ ಭಾವಿಸಬಾರದು. ಕನ್ನಡಿಗರ ತಾಳ್ಮೆಯನ್ನು ದೌರ್ಬಲ್ಯವೆಂದು ಪರಿಗಣಿಸುವ ತಪ್ಪನ್ನು ಸೋನು ನಿಗಮ್ ಆಗಲಿ ಅಥವಾ ಕಾರ್ಯಕ್ರಮದ ಆಯೋಜಕರಾಗಲಿ ಮಾಡಬಾರದು ಎಂದು ಅವರು ಖಡಕ್ ಸಂದೇಶ ರವಾನಿಸಿದ್ದಾರೆ.

ಸೋನು ನಿಗಮ್ ಹೇಳಿಕೆಯಿಂದ ಈಗಾಗಲೇ ಕನ್ನಡಿಗರಲ್ಲಿ ತೀವ್ರ ಅಸಮಾಧಾನವಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಕನ್ನಡಿಗರ ಆಕ್ರೋಶ ಮತ್ತಷ್ಟು ಹೆಚ್ಚುವುದಲ್ಲದೆ, ದೊಡ್ಡ ಮಟ್ಟದ ಪ್ರತಿಭಟನೆ ಹಾಗೂ ಸಾರ್ವಜನಿಕ ಉದ್ವಿಗ್ನತೆಗೆ ಕಾರಣವಾಗಬಹುದು. ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕರವೇ ಮುಂದಿಟ್ಟಿರುವ 5 ಪ್ರಮುಖ ಬೇಡಿಕೆಗಳು:

  1. ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.
  2. ಈಗಾಗಲೇ ಯಾವುದೇ ರೀತಿಯ ಅನುಮತಿ ನೀಡಿದ್ದರೆ, ಸಾರ್ವಜನಿಕ ಆಕ್ರೋಶ ಮತ್ತು ಕಾನೂನು ಸುವ್ಯವಸ್ಥೆಯ ಅಪಾಯಗಳನ್ನು ಪರಿಶೀಲಿಸಿ ತಕ್ಷಣವೇ ಅನುಮತಿಯನ್ನು ರದ್ದುಪಡಿಸಬೇಕು.
  3. ಸೋನು ನಿಗಮ್ ವಿರುದ್ಧ ಕರವೇ ಈ ಹಿಂದೆ ಸಲ್ಲಿಸಿರುವ ದೂರಿನ ಸ್ಥಿತಿಯನ್ನು ಪರಿಶೀಲಿಸಿ, ಕಾನೂನು ಪ್ರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
  4. ಕನ್ನಡಿಗರ ಭಾಷಾಭಿಮಾನವನ್ನು ಅವಮಾನಿಸುವ ಮತ್ತು ಭಾಷಿಕ ಸಮುದಾಯಗಳ ನಡುವೆ ಅನಗತ್ಯ ಉದ್ವಿಗ್ನತೆ ಉಂಟುಮಾಡುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು.
  5. ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಉಂಟಾಗಬಹುದಾದ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ತಡೆಯಲು ಸೂಕ್ತ ನಿರ್ಧಾರ ಕೈಗೊಳ್ಳಬೇಕು.

ಕನ್ನಡಿಗರ ಸ್ವಾಭಿಮಾನಕ್ಕಿಂತ ಯಾವುದೇ ಕಲಾವಿದನ ಕಾರ್ಯಕ್ರಮ ದೊಡ್ಡದಲ್ಲ ಎಂದಿರುವ ನಾರಾಯಣಗೌಡರು, ನಮ್ಮ ಈ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಿ ಕಾರ್ಯಕ್ರಮ ನಡೆಸಲು ಮುಂದಾದರೆ ಸಂಘಟಿತ ಹೋರಾಟ ಅನಿವಾರ್ಯವಾಗುತ್ತದೆ ಮತ್ತು ಅದರ ಸಂಪೂರ್ಣ ಹೊಣೆಗಾರಿಕೆ ಆಡಳಿತದ ಮೇಲಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಮನವಿಯ ಕುರಿತು ತುರ್ತಾಗಿ ನಿರ್ಧಾರ ಕೈಗೊಂಡು ತಮಗೆ ಲಿಖಿತವಾಗಿ ತಿಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು