Sunday, June 16, 2024

ಸತ್ಯ | ನ್ಯಾಯ |ಧರ್ಮ

ಹಿರೇಬಾಗೇವಾಡಿಯಲ್ಲಿ ಕರವೇ-ಪೊಲೀಸ್‌ ಸಂಘರ್ಷ: ಟಿ.ಎ.ನಾರಾಯಣಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರ ಬಂಧನ

ಹಿರೇಬಾಗೇವಾಡಿ ಟೋಲ್‌ ಪ್ಲಾಜಾ (ಬೆಳಗಾವಿ): ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಮುಂದೆ ಬೃಹತ್‌ ಹೋರಾಟಕ್ಕೆ ಮುಂದಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಸುಮಾರು ಐನೂರಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿದ್ದ ಕಾರ್ಯಕರ್ತರು, ಮುಖಂಡರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಟೋಲ್‌ ಪ್ಲಾಜಾ ಬಳಿ ಪೊಲೀಸರು ಇರುವುದನ್ನು ಗಮನಿಸಿದ ಕರವೇ ಮುಖಂಡರು ಕಾಲ್ನಡಿಗೆ ಮೂಲಕ ಮೆರವಣಿಗೆ ಹೊರಟರು. ಪ್ಲಾಜಾ ಬಳಿ ಬೆಳಿಗ್ಗೆಯಿಂದಲೂ ನೆರೆದಿದ್ದ ಪೊಲೀಸರು ಕರವೇ ಕಾರ್ಯಕರ್ತರನ್ನು ಬಂಧಿಸುತ್ತಿರುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬಲವಂತವಾಗಿ ಬಂಧನಕ್ಕೆ ಮುಂದಾದಾಗ ಅಲ್ಲಿದ ಮಹಾರಾಷ್ಟ್ರದ ಲಾರಿಗಳ ಮೇಲೆ ಹತ್ತಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಬಂಧಿಸಿ ಕರೆದೊಯ್ಯಲು ತರಲಾಗಿದ್ದ ಬಸ್‌ ಗಳ ಕೆಳಗೆ ಮಲಗಿ ಪ್ರತಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಬೆಳಗಾವಿಯ ರಾಜಕಾರಣಿಗಳು ಹೇಡಿಗಳು. ಹೇಡಿತನದಿಂದ ಕರವೇ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರನ್ನು ಛೂ ಬಿಟ್ಟಿದ್ದಾರೆ ಎಂದು ಆರೋಪಿಸಿದರು. ಬೆಳಗಾವಿಯ ಒಂದು ಅಡಿ ಜಾಗವನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ರಾಜಕಾರಣಿಗಳು ಹಗಲುಗನಸು ಕಾಣುವುದನ್ನು ನಿಲ್ಲಿಸಬೇಕು, ಬೆಳಗಾವಿಯಲ್ಲಿ ಅಶಾಂತಿ ಮೂಡಿಸುವುದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು