Friday, June 14, 2024

ಸತ್ಯ | ನ್ಯಾಯ |ಧರ್ಮ

ಮದ್ಯ ಪ್ರಿಯರನ್ನು ಮದುವೆಯಾಗುವ ಹುಡುಗಿಯರಿಗೆ 2 ಲಕ್ಷ ಸಹಾಯ ಧನ ನೀಡಿ: ಮದ್ಯ ಪ್ರಿಯರ ಸಂಘದ ಬೇಡಿಕೆ

ಬೆಳಗಾವಿ: ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸುತ್ತಿವೆ. ಆದರೆ, ಇವರ ನಡುವೆ ಕರ್ನಾಟಕ ಮದ್ಯ ಪ್ರೇಮಿಗಳ ಸಂಘ ಎಂಬ ಪ್ರತಿಭಟನಾಕಾರರ ಒಂದು ಗುಂಪು ಗುರುವಾರ ಗಮನ ಸೆಳೆಯುತ್ತಿತ್ತು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಂಘದ ಸದಸ್ಯರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಆಲಿಸಿದರು.

ಕರ್ನಾಟಕ ಮದ್ಯಪ್ರೇಮಿಗಳ ಸಂಘ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಮುಂದೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದು, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು. ‘ಕಷ್ಟಪಟ್ಟು ದುಡಿ, ಸತ್ಯವನ್ನೇ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ’ ಎಂಬ ಬ್ಯಾನರ್ ಹಿಡಿದು ಸದಸ್ಯರು ಪ್ರತಿಭಟನೆ ನಡೆಸಿದರು.

ಮದ್ಯ ಪ್ರಿಯರ ಸಂಘದ ಬೇಡಿಕೆಗಳು:

1 ಮದ್ಯವ್ಯಸನಿಗಳಿಗೆ ಕಲ್ಯಾಣ ನಿಧಿ ಸ್ಥಾಪಿಸಿ

2 ಮದ್ಯ ಮಾರಾಟದಿಂದ ಬರುವ ಆದಾಯದ ಶೇ 10ರಷ್ಟು ಹಣವನ್ನು ಮದ್ಯಪ್ರಿಯರ ಕಲ್ಯಾಣಕ್ಕೆ ಮೀಸಲಿಡಬೇಕು.

3 ಲಿವರ್ ಹಾನಿಯ ಸಂದರ್ಭದಲ್ಲಿ ಸರ್ಕಾರವು‌ ಆಸ್ಪತ್ರೆ ವೆಚ್ಚವನ್ನು ಭರಿಸಬೇಕು

4 ‘ಕುಡುಕ’ ಪದವನ್ನು ನಿಷೇಧಿಸಬೇಕು ಮತ್ತು ಅದನ್ನು ‘ಮದ್ಯ ಪ್ರಿಯರು’ ಎಂದು ಬದಲಿಸಬೇಕು.

5 ಪ್ರತಿಯೊಬ್ಬರಿಗೂ 1 ಕ್ವಾರ್ಟರ್‌ ಮದ್ಯ ಸಿಗಬೇಕು ಮತ್ತು ಬಾರ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು

6 ಬಾರ್‌ಗಳ ಬಳಿ ಆಂಬ್ಯುಲೆನ್ಸ್ ನಿಲ್ಲಿಸಬೇಕು.

7 ಮದ್ಯ ಪ್ರಿಯರ ಭವನ ನಿರ್ಮಿಸಬೇಕು.

8 ಡಿಸೆಂಬರ್ 31ನ್ನು ಮದ್ಯಪ್ರಿಯರ ದಿನವನ್ನಾಗಿ ಘೋಷಿಸಬೇಕು

9 ಸಾವಿನ ಸಂದರ್ಭದಲ್ಲಿ, ಸಂತ್ರಸ್ತರ ಕುಟುಂಬಕ್ಕೆ ಡ್ರಿಂಕ್ ಅಂಡ್ ಡ್ರೈವ್‌
ಅಪರಾಧದಡಿ ಸಂಗ್ರಹಿಸಿದ ದಂಡದ ನಿಧಿಯಿಂದ 10 ಲಕ್ಷ ರೂ. ಪರಿಹಾರ ನೀಡಬೇಕು

10 ಮದ್ಯ ಪ್ರಿಯರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ರೂ. 2 ಲಕ್ಷ ನೀಡಬೇಕು

ಸದಸ್ಯರ ಮಾತುಗಳನ್ನು ಆಲಿಸಿದ ಕಾರ್ಮಿಕ ಸಚಿವರು ಸಂಘದ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಕಳೆದ ವರ್ಷ ನವೆಂಬರ್ 6ರಂದು ಮದ್ಯ ಪ್ರೇಮಿಗಳ ಸಂಘವನ್ನು ರಚಿಸಲಾಯಿತು. ಸಂಘದ ಅಧ್ಯಕ್ಷ ವೆಂಕಟೇಶ ಬೋರೇಹಳ್ಳಿ ಕಳೆದ ವರ್ಷವೂ ಸರ್ಕಾರದ ಮುಂದೆ ವಿವಿಧ ಬೇಡಿಕೆಗಳನ್ನು ಮಂಡಿಸಿದ್ದರು.

ಸರಕಾರಕ್ಕೆ ಮದ್ಯದಿಂದ ಅತಿ ಹೆಚ್ಚು ಆದಾಯ ಬರುತ್ತಿದೆ ಆದರೆ ಅದರ ಬಳಕೆದಾರರ ಹಿತವನ್ನು ಸರಕಾರ ಕಡೆಗಣಿಸಿದೆ ಎಂದು ಸಂಘದ ಸದಸ್ಯರು ದೂರಿದರು.

“ಮದ್ಯದ ಬಾಟಲಿಗೆ ವಿಮೆ ಮಾಡಿಸಬೇಕು. ಮದ್ಯವ್ಯಸನಿ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮದ್ಯ ಪ್ರಿಯರ ಆರೋಗ್ಯ ತಪಾಸಣೆಯನ್ನು ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ನಡೆಸಬೇಕು” ಎಂದು ಬೋರೇಹಳ್ಳಿ ವೆಂಕಟೇಶ ಅವರು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು