Home ರಾಜ್ಯ ದಕ್ಷಿಣ ಕನ್ನಡ ಕರಾವಳಿ-ಮಲೆನಾಡು ಅಭಿವೃದ್ಧಿಗೆ ಸಂಪುಟ ಅಸ್ತು: ತುಳು ಭಾಷೆಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನ, ₹32,611 ಕೋಟಿ...

ಕರಾವಳಿ-ಮಲೆನಾಡು ಅಭಿವೃದ್ಧಿಗೆ ಸಂಪುಟ ಅಸ್ತು: ತುಳು ಭಾಷೆಗೆ ಎರಡನೇ ಅಧಿಕೃತ ಭಾಷಾ ಸ್ಥಾನಮಾನ, ₹32,611 ಕೋಟಿ ಯೋಜನೆಗಳಿಗೆ ಒಪ್ಪಿಗೆ

0

ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ, ಮಲೆನಾಡು ಹಾಗೂ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸುಮಾರು 32,611 ಕೋಟಿ ರೂಪಾಯಿ ಮೊತ್ತದ ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕರಾವಳಿ ಜನರ ದಶಕಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ ಆಡಳಿತಾತ್ಮಕ ಉದ್ದೇಶಗಳಿಗಾಗಿ ಎರಡನೇ ಹೆಚ್ಚುವರಿ ಅಧಿಕೃತ ಭಾಷಾ ಸ್ಥಾನಮಾನ ನೀಡುವುದು ಸೇರಿದಂತೆ ಹತ್ತಾರು ಐತಿಹಾಸಿಕ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡದೊಂದಿಗೆ ತುಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಬಳಸಲು ಸಂಪುಟ ಅನುಮೋದನೆ ನೀಡಿದ್ದು, ಭಾಷಾ ಬಳಕೆ, ತರಬೇತಿ ಮತ್ತು ಭಾಷಾಂತರಕ್ಕಾಗಿ ವಾರ್ಷಿಕ ಅನುದಾನ ಒದಗಿಸಲಾಗುವುದು. ಜತೆಗೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು’ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಸಾರ್ವಜನಿಕರ ಸಲಹೆ-ಆಕ್ಷೇಪಣೆಗಳನ್ನು ಆಹ್ವಾನಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಕರಡು ಅಧಿಸೂಚನೆ ಹೊರಡಿಸಲು ನಿರ್ಧರಿಸಲಾಗಿದೆ. ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ 549.79 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026ಕ್ಕೆ ಹಸಿರು ನಿಶಾನೆ ತೋರಲಾಗಿದ್ದು, ಪ್ರವಾಸೋದ್ಯಮ ಯೋಜನೆಗಳಿಗೆ ಉದ್ಯಮ ಸ್ಥಾನಮಾನ ನೀಡುವುದರೊಂದಿಗೆ ಕರಾವಳಿ ಪ್ರವಾಸೋದ್ಯಮ ದೃಷ್ಟಿಕೋನ ಯೋಜನೆಗೆ ಅನುಮತಿ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿನ 12 ದ್ವೀಪಗಳ ಅಭಿವೃದ್ಧಿ, ಮಂಗಳೂರಿನ ಲೈಟ್‌ಹೌಸ್ ಪ್ರವಾಸೋದ್ಯಮ, ತಣ್ಣೀರುಬಾವಿ ಇಕೋ-ಫ್ರೆಂಡ್ಲಿ ಪ್ರವಾಸೋದ್ಯಮ, ತ್ರಾಸಿ-ಮರವಂತೆ ಬೀಚ್ ರೆಸಾರ್ಟ್ ಮತ್ತು ಸಾಹಸ ವಲಯ ಯೋಜನೆಗಳಿಗೆ ಅನುದಾನ ನಿಗದಿಪಡಿಸಲಾಗಿದೆ. ಕಾರವಾರ ವಿಮಾನ ನಿಲ್ದಾಣ ಯೋಜನೆಯ ಮೊತ್ತವನ್ನು 250.05 ಕೋಟಿ ರೂಪಾಯಿಗೆ ಪರಿಷ್ಕರಿಸಲಾಗಿದೆ.

ಮೀನುಗಾರಿಕೆ ರಂಗಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಮಂಗಳೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು 60 ರಿಂದ 200ಕ್ಕೆ ಹೆಚ್ಚಿಸಿ, ಅದನ್ನು ಪ್ರತ್ಯೇಕ ಮೀನುಗಾರಿಕಾ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು ತತ್ವತಃ ಅನುಮೋದನೆ ನೀಡಲಾಗಿದೆ. ಎಕ್ಕೂರಿನಲ್ಲಿ ಸುಸಜ್ಜಿತ ಸಗಟು ಮೀನು ಮಾರುಕಟ್ಟೆ, ಕೋಟೆಪುರ ಬಂದರು ಡ್ರೆಡ್ಜಿಂಗ್ ಹಾಗೂ ಕರಾವಳಿ ಜಿಲ್ಲೆಗಳನ್ನು ‘ವಿಶೇಷ ಸಮುದ್ರ ವಲಯ’ (SMZ) ಎಂದು ಘೋಷಿಸಲು ನಿರ್ಧರಿಸಲಾಗಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 6,925 ಕೋಟಿ ವೆಚ್ಚದ ಬಹುಪಯೋಗಿ ಬಂದರು ಹಾಗೂ ಹಡಗು ನಿರ್ಮಾಣ ಕೇಂದ್ರ ಮತ್ತು ಗಂಗೊಳ್ಳಿಯಲ್ಲಿ ಹಸಿರು ಹಡಗು ನಿರ್ಮಾಣ ಯಾರ್ಡ್‌ಗೆ ಒಪ್ಪಿಗೆ ಸೂಚಿಸಲಾಗಿದೆ.

ಗ್ರಾಮೀಣ ಮೂಲಸೌಕರ್ಯಕ್ಕಾಗಿ ಬರೋಬ್ಬರಿ 16,000 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, 15,000 ಕಿಲೋಮೀಟರ್ ಗ್ರಾಮೀಣ ರಸ್ತೆಗಳ ಸಂಪರ್ಕಕ್ಕೆ 10,000 ಕೋಟಿ ಮತ್ತು ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 6,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಪಂಚಾಯತ್ ರಾಜ್ ಚುನಾವಣೆಗಳನ್ನು ಡಿಸೆಂಬರ್ ಒಳಗೆ ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ತೀರ್ಮಾನಿಸಲಾಗಿದ್ದು, ಲೈವ್ ವೆಬ್‌ಕಾಸ್ಟಿಂಗ್ ಮತ್ತು ಬ್ಯಾಲೆಟ್ ಬಾಕ್ಸ್‌ಗಳಿಗಾಗಿ 151.31 ಕೋಟಿ ರೂಪಾಯಿ ಅನುಮೋದಿಸಲಾಗಿದೆ. ಇದರೊಂದಿಗೆ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ಅಭಿವೃದ್ಧಿ, ಮಂಗಳೂರು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ 200 ಹೆಚ್ಚುವರಿ ಹಾಸಿಗೆಗಳು, ಮಂಗಳೂರಿನ ಮಂಗಳಾ ಕ್ರೀಡಾಂಗಣದ ಅಂತಾರಾಷ್ಟ್ರೀಯ ದರ್ಜೆಯ ನವೀಕರಣ ಹಾಗೂ ಉಡುಪಿಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೂ ಸಂಪುಟ ಸಭೆಯಲ್ಲಿ ಅನುಮತಿ ದೊರೆತಿದೆ.

You cannot copy content of this page

Exit mobile version