Thursday, July 17, 2025

ಸತ್ಯ | ನ್ಯಾಯ |ಧರ್ಮ

ಪಿಎಸ್‌ಐ ಹಗರಣ: 545 ಹುದ್ದೆಗಳಿಗೆ ಡಿಸೆಂಬರ್ 23ರಂದು ಮರು ಪರೀಕ್ಷೆ ನಡೆಸಲಿರುವ ಕೆಇಎ

ಬೆಂಗಳೂರು: ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯಕ್ಕೆ ಆದೇಶ ನೀಡಿದ ಕೆಲವು ದಿನಗಳ ನಂತರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಡಿಸೆಂಬರ್ 23ರಂದು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ಮರುಪರೀಕ್ಷೆಗೆ ದಿನಾಂಕವನ್ನು ಘೋಷಿಸಿದೆ. ರಾಜ್ಯದಲ್ಲಿ ಖಾಲಿ ಇರುವ 545 ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಗಳು ನಡೆಯಲಿವೆ.

ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಡಿಸೆಂಬರ್ 23ರಂದು ನಿಗದಿಯಾಗಿರುವ ಪ್ರವೇಶ ಪರೀಕ್ಷೆಯನ್ನು ಪುನಃ ಬರೆಯಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಅಕ್ಟೋಬರ್ 2021ರಲ್ಲಿ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಿತು. ಫಲಿತಾಂಶಗಳನ್ನು ಜನವರಿ 2022ರಲ್ಲಿ ಘೋಷಿಸಲಾಯಿತು, ಅದರ ನಂತರ ಹಲವಾರು ಅಕ್ರಮಗಳು ವರದಿಯಾಗಿವೆ ಮತ್ತು ಅದರ ಆಧಾರದ ಮೇಲೆ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಅಂದಿನ ಬಿಜೆಪಿ ಸರಕಾರ ಒತ್ತಡಕ್ಕೆ ಮಣಿದು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಲಾಗಿತ್ತು. ತನಿಖೆಯ ಸಮಯದಲ್ಲಿ, ಸಿಐಡಿ ನೇಮಕಾತಿಯ ಮುಖ್ಯಸ್ಥರಾಗಿದ್ದ ಅಂದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್ ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಿತು.

ಪಿಎಸ್‌ಐ ಹುದ್ದೆಗಳ ಪ್ರವೇಶ ಪರೀಕ್ಷೆಯನ್ನು ಅಕ್ರಮವಾಗಿ ತೇರ್ಗಡೆ ಮಾಡಲು ಅಭ್ಯರ್ಥಿಗಳು ಮಧ್ಯವರ್ತಿಗಳಿಗೆ 30-85 ಲಕ್ಷ ರೂ. ನೀಡಿದ್ದರು. ಕಲಬುರಗಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಅಭ್ಯರ್ಥಿಗಳಿಗೆ ನಕಲು ಮಾಡಲು ಪರೀಕ್ಷಾ ಕೇಂದ್ರದ ಮಾಲೀಕರು ಅವಕಾಶ ನೀಡಿದ್ದರು.

ಕಾಂಗ್ರೆಸ್ ನೇತೃತ್ವದ ಸರ್ಕಾರವು ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸಲು ಹೈಕೋರ್ಟ್ ಮಾಜಿ ನ್ಯಾಯಾಧೀಶ ವೀರಪ್ಪ ನೇತೃತ್ವದ ಏಕಸದಸ್ಯ ನ್ಯಾಯಾಂಗ ಆಯೋಗಕ್ಕೆ ಆದೇಶ ನೀಡಿತು.

ಪಿಎಸ್ ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಲವಾರು ವಿದ್ಯಾರ್ಥಿಗಳು ಸರ್ಕಾರದ ಆದೇಶದ ವಿರುದ್ಧ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನವೆಂಬರ್ 10ರಂದು ಸರ್ಕಾರಿ ಆದೇಶವನ್ನು ಎತ್ತಿಹಿಡಿದಿದೆ ಮತ್ತು ಸ್ವತಂತ್ರ ಸಂಸ್ಥೆಯ ಮೂಲಕ ಮರು ಪರೀಕ್ಷೆ ನಡೆಸುವಂತೆ ರಾಜ್ಯಕ್ಕೆ ನಿರ್ದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page