Thursday, March 5, 2026

ಸತ್ಯ | ನ್ಯಾಯ |ಧರ್ಮ

ಜೈಲಿನಲ್ಲಿರುವ ನಟ ದರ್ಶನ್‌ ಮತ್ತು ಇತರ ಕೊಲೆ ಆರೋಪಿಗಳಿಗೆ ಮನೆಯೂಟ ನೀಡದಂತೆ ಹೈಕೋರ್ಟ್‌ ತಾಕೀತು

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್ ತೂಗುದೀಪ ಮತ್ತು ಇತರರಿಗೆ ಮನೆಯಿಂದ ಬೇಯಿಸಿದ ಆಹಾರವನ್ನು ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ರದ್ದುಪಡಿಸಿದೆ. ಜೈಲು ನಿಯಮಗಳ ಪ್ರಕಾರ ವೈದ್ಯಕೀಯ ಶಿಫಾರಸು ಇಲ್ಲದೆ ಇಂತಹ ಸೌಲಭ್ಯಗಳನ್ನು ನೀಡಲು ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೇವಲ ಮನವಿ ಅಥವಾ ವೈಯಕ್ತಿಕ ಇಚ್ಛೆಯ ಮೇಲೆ ಮನೆಯ ಊಟಕ್ಕೆ ಅನುಮತಿ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ. ಯಾವುದೇ ಆರೋಪಿಗೆ ಈ ಸೌಲಭ್ಯ ಬೇಕಿದ್ದಲ್ಲಿ ಮೊದಲು ವೈದ್ಯಕೀಯ ತಪಾಸಣೆ ನಡೆಸಿ, ವೈದ್ಯರ ಶಿಫಾರಸು ಪಡೆಯುವುದು ಕಡ್ಡಾಯ. ಇಂತಹ ಸೌಲತ್ತುಗಳನ್ನು ಯಾವುದೇ ಆಧಾರವಿಲ್ಲದೆ ನೀಡಿದರೆ ಜೈಲು ವ್ಯವಸ್ಥೆಯಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಇತರ ಕೈದಿಗಳೂ ಸಹ ಇದೇ ರೀತಿಯ ಬೇಡಿಕೆ ಇಡಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಜೈಲು ಸುಧಾರಣೆ ಮತ್ತು ಡಿಜಿಟಲ್ ಮೆನು

ಜೈಲಿನ ಊಟದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯವು, ಕೆಲವು ಪ್ರಮುಖ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. “ಮಾನವ ಘನತೆಯ ರಕ್ಷಣೆ ಜೈಲಿನ ಗೇಟಿನ ಹೊರಗೆ ಕೊನೆಗೊಳ್ಳುವುದಿಲ್ಲ” ಎಂದು ಹೇಳಿದ ನ್ಯಾಯಮೂರ್ತಿಗಳು, ಕೈದಿಗಳಿಗೆ ನೀಡಲಾಗುವ ದೈನಂದಿನ ಆಹಾರದ ಪಟ್ಟಿಯನ್ನು (Menu) ಜೈಲಿನ ಆವರಣದಲ್ಲಿ ಡಿಜಿಟಲ್ ಫಲಕಗಳ ಮೂಲಕ ಪ್ರಕಟಿಸಬೇಕು ಎಂದು ಸೂಚಿಸಿದ್ದಾರೆ.

ಇದರ ಜೊತೆಗೆ, ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡಲು ಕೈದಿಗಳಿಗೆ ಸೂಕ್ತ ವ್ಯವಸ್ಥೆ ಇರಬೇಕು ಮತ್ತು ವೈದ್ಯಾಧಿಕಾರಿಗಳು ಅಥವಾ ಆಹಾರ ತಜ್ಞರು ಕಾಲಕಾಲಕ್ಕೆ ಜೈಲಿನ ಊಟವನ್ನು ತಪಾಸಣೆ ನಡೆಸಿ ದೃಢೀಕರಣ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ. ಈ ಎಲ್ಲಾ ನಿರ್ದೇಶನಗಳನ್ನು ಪಾಲಿಸಲು ಸರ್ಕಾರವು ಸುತ್ತೋಲೆ ಹೊರಡಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page