ಬೆಂಗಳೂರು: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಷರತ್ತುಗಳ ಉಲ್ಲಂಘನೆಯ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದಾಗ ಮತ್ತು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ (ಸ್ವಾತಂತ್ರ್ಯ) ನೀಡದಿದ್ದಾಗ, ಅದನ್ನು ಮರುಪರಿಶೀಲಿಸಿ ಬೇರೆ ಯಾವುದೇ ನ್ಯಾಯಾಲಯವು ಜಾಮೀನು ನೀಡುವುದು ನ್ಯಾಯಾಂಗದ ಔಚಿತ್ಯಕ್ಕೆ ವಿರುದ್ಧವಾಗಿರುತ್ತದೆ ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣವು 2016ರ ಜೂನ್ 15ರಂದು ಧಾರವಾಡದಲ್ಲಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆಗೆ ಸಂಬಂಧಿಸಿದೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ನಂತರ, ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಎರಡನೇ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ಇದರಲ್ಲಿ ವಿನಯ್ ಕುಲಕರ್ಣಿ ಅವರನ್ನು ಐಪಿಸಿ ಸೆಕ್ಷನ್ 120ಬಿ, 143, 147, 148, 302 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಹಾಗೂ 3, 5, 8 ಮತ್ತು 29ರ ಅಡಿಯಲ್ಲಿ ಆರೋಪಿಯನ್ನಾಗಿ ಸೇರಿಸಲಾಗಿದೆ.
2021ರ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು, ಆದರೆ ನಂತರ 2025ರ ಜೂನ್ 6ರಂದು ಸುಪ್ರೀಂ ಕೋರ್ಟ್ ತಾನೇ ಅದನ್ನು ರದ್ದುಗೊಳಿಸಿತು. ಬದಲಾದ ಸನ್ನಿವೇಶಗಳ ಆಧಾರದ ಮೇಲೆ ಅರ್ಜಿದಾರರಾದ ಕುಲಕರ್ಣಿ ಅವರು ನಿಯಮಿತ ಜಾಮೀನು ಕೋರಿ ಮತ್ತೆ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದರು. ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದ್ದು, ಕೇವಲ ಅಧಿಕೃತ ಸಾಕ್ಷಿಗಳ ವಿಚಾರಣೆ ಮಾತ್ರ ಬಾಕಿ ಇದೆ ಎಂದು ವಾದಿಸಲಾಯಿತು. ಜಾಮೀನು ಷರತ್ತುಗಳ ಉಲ್ಲಂಘನೆಯ ಕಾರಣದಿಂದ ಜಾಮೀನು ರದ್ದುಗೊಂಡಿದ್ದ ಇತರ ಸಹ-ಆರೋಪಿಗಳಿಗೆ ಹೈಕೋರ್ಟ್ ಮತ್ತೆ ಜಾಮೀನು ನೀಡಿದೆ, ಅದೇ ಸಮಾನತೆಯ ಆಧಾರದ ಮೇಲೆ ತಮಗೂ ಜಾಮೀನು ನೀಡಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಮತ್ತೊಂದೆಡೆ, ಸಿಬಿಐ ಪರವಾಗಿ ಹಾಜರಿದ್ದ ಪಿ. ಪ್ರಸನ್ನ ಕುಮಾರ್, ವಿಚಾರಣೆಯಲ್ಲಿ ಇನ್ನೂ ಕೆಲವು ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂದು ತಿಳಿಸಿದರು. ಅಲ್ಲದೆ, ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸುವಾಗ ಹೊಸದಾಗಿ ಜಾಮೀನು ಕೋರಲು ಅವಕಾಶ ನೀಡದ ಕಾರಣ, ಅರ್ಜಿದಾರರು ಹೊಸ ಜಾಮೀನು ಕೋರಲು ಅರ್ಹರಲ್ಲ ಎಂದು ವಾದಿಸಿದರು.
ವಿನಯ್ ಕುಲಕರ್ಣಿ ಅವರ ಜಾಮೀನು ರದ್ದುಗೊಳಿಸುವಾಗ, ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ದಾಖಲೆಯಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಗಮನಿಸಿದರು. ಜಾಮೀನು ರದ್ದುಗೊಳಿಸುವ ಆದೇಶದಲ್ಲಿ ಮರು ಅರ್ಜಿ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿಲ್ಲ ಮತ್ತು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು, ತ್ವರಿತ ವಿಚಾರಣೆಯ ಮೂಲಕ ದೀರ್ಘಾವಧಿಯ ಸೆರೆವಾಸವನ್ನು ಕಡಿಮೆ ಮಾಡುವ ಉದ್ದೇಶವನ್ನು ಸೂಚಿಸುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
“‘ಬದಲಾದ ಸನ್ನಿವೇಶಗಳು’ ಎಂಬ ಅಂಶವು ಜಾಮೀನು ತಿರಸ್ಕರಿಸಿದ ಆದೇಶವನ್ನು ಮರುಪರಿಶೀಲಿಸಲು ಆಧಾರವಾಗಬಹುದು, ಆದರೆ ವಿಧಿಸಲಾದ ಷರತ್ತುಗಳ ಉಲ್ಲಂಘನೆಗಾಗಿ ಜಾಮೀನು ರದ್ದುಗೊಂಡಾಗ ಅದು ಪ್ರಯೋಜನಕ್ಕೆ ಬರುವುದಿಲ್ಲ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಜಾಮೀನು ರದ್ದುಗೊಂಡಾಗ, ಆರೋಪಿಯು ನಂತರ ನ್ಯಾಯಾಂಗ ವಿವೇಚನೆಯನ್ನು ಪಡೆಯುವ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವ ಹಂತದಲ್ಲಿದೆ ಎಂಬ ನಂತರದ ಘಟನಾವಳಿಗಳು ಇಲ್ಲಿ ಪ್ರಸ್ತುತವಾಗುವುದಿಲ್ಲ,” ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹೇಳಿದರು.
ಅರ್ಜಿಯ ಅರ್ಹತೆಯ ಬಗ್ಗೆ (merits) ಯಾವುದೇ ತೀರ್ಪು ನೀಡಿಲ್ಲ ಮತ್ತು ಅರ್ಜಿದಾರರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬೇಕು ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿರುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
