ಪ್ರಲ್ಹಾದ ಜೋಷಿಗೂ ಗ್ರೇಸ್ ಮಾರ್ಕ್, ಉಳಿದವರು ಕೂಳಿಗೆ ದಂಡ!
ಬೆಂಗಳೂರು: ಕರ್ನಾಟಕದಿಂದ ಆಯ್ಕೆಯಾದ ಲೋಕಸಭಾ ಸದಸ್ಯರ ಕಾರ್ಯಕ್ಷಮತೆಯ ಸಮೀಕ್ಷೆ ಬಿಡುಗಡೆಯಾಗಿದ್ದು. ಕೆಲವು ಪಾಸ್ ಮಾರ್ಕ್ ಪಡೆದಿದ್ದರೆ, ಇನ್ನೂ ಕೆಲವರು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಉಳಿದಂತೆ ಬಹುತೇಕರು ಕನಿಷ್ಠ ಪಾಸ್ ಮಾರ್ಕ್ ಕೂಡಾ ತೆಗೆದುಕೊಳ್ಳದೆ ಈಗ ಮತ್ತೆ ಚುನಾವಣೆಯೆಂಬ ಪರೀಕ್ಷೆ ಎದುರಿಸಲು ಸಿದ್ಧರಾಗಿ ನಿಂತಿದ್ದಾರೆ.
ಕಲಾಪದ ಸಮಯದಲ್ಲಿನ ಸಂಸತ್ತಿನಲ್ಲಿ ಹಾಜರಾತಿ, ಕೇಳಿದ ಪ್ರಶ್ನೆಗಳು, ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸುವಿಕೆ ಮತ್ತು ಅವರ ಕ್ಷೇತ್ರಗಳಲ್ಲಿನ ಕಾರ್ಯಕ್ಷಮತೆಯನ್ನು ಸಮೀಕ್ಷೆ ಪರಿಗಣಿಸಿದೆ.
ರಾಷ್ಟ್ರೀಯ ಸರಾಸರಿ ಸಂಸದರ ಹಾಜರಾತಿ ಶೇಕಡಾ 79 ಇದ್ದರೆ, ರಾಜ್ಯದ ಸಂಸದರ ಸರಾಸರಿ ಹಾಜರಾತಿ 71% ಇದೆ ಎಂದು ಸಮೀಕ್ಷೆ ಹೇಳಿದೆ.
ಕರ್ನಾಟಕ: 9 ಸಂಸದರು ಶೇಕಡಾ 79ಕ್ಕಿಂತ ಹೆಚ್ಚು ಹಾಜರಾತಿ ಹೊಂದಿದ್ದರು (ಬಿ. ಖೂಬಾ; ಪಿಸಿ ಮೋಹನ್; ಪಿಸಿ ಗದ್ದಿಗೌಡರ್; ಪ್ರತಾಪ್ ಸಿಂಹ; ಆರ್.ಎ. ನಾಯ್ಕ್; ಶೋಭಾ ಕರಂದಲಾಜೆ; ಉದಾಸಿ ಎಸ್. ಚನ್ನಬಸಪ್ಪ; ಉಮೇಶ್ ಜಾಧವ್, ವೈ. ದೇವೇಂದ್ರಪ್ಪ).
ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಸಂಸದ ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಮತ್ತು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ತಮ್ಮ ಇಡೀ ಅಧಿಕಾರವಧಿಯಲ್ಲಿ ಸದನದಲ್ಲಿ ಒಂದೇ ಒಂದು ಪ್ರಶ್ನೆ ಎತ್ತಲಿಲ್ಲ.
ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದು ಬಿಟ್ಟರೆ ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಸಂಸದ), ಡಿ.ವಿ.ಸದಾನಂದಗೌಡ, ಜೋಶಿ, ರಮೇಶ್ ಜಿಗಜಿಣಗಿ (ವಿಜಯಪುರ), ಶ್ರೀನಿವಾಸ ಪ್ರಸಾದ್ (ಚಾಮರಾಜನಗರ) ಮತ್ತು ಬಚ್ಚೇಗೌಡ (ಚಿಕ್ಕಬಳ್ಳಾಪುರ) ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ.
ಇನ್ನು ಮಂಗಳಾ ಅಂಗಡಿ (ಬೆಳಗಾವಿ) ಒಂದು ಚರ್ಚೆಯಲ್ಲಿ ಭಾಗವಹಿಸಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ವಿಮಾನ ಒದಗಿಸುವಂತೆ ಕೋರಿದ್ದರು ಎಂದು ಸಮೀಕ್ಷೆ ಹೇಳುತ್ತದೆ.
ಸಾಮಾಜಿಕ ವಿಜ್ಞಾನಿಗಳಾದ ಎಆರ್ ವಾಸವಿ ಮತ್ತು ಜಾನಕಿ ನಾಯರ್ ಅವರು ಈ ವಿಶ್ಲೇಷಣೆ ನಡೆಸಿದ್ದು, ಶುಕ್ರವಾರ ನಾಗರಿಕ ಸಮಾಜ ತಂಡ ಸಂವಿದಾನದ ಹಾದಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಬಿಡುಗಡೆಗೊಳಿಸಲಾಯಿತು.
ಇದೇ ಸಮೀಕ್ಷೆಯಲ್ಲಿ “ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ) ಮತ್ತು ಪ್ರಲ್ಹಾದ್ ಜೋಶಿ ಅವರು ಕೋವಿಡ್ ಸಮಯದಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
ಹದಿನೈದು ಮಂದಿ ಸಂಸದರಿಗೆ ನೆಗೆಟಿವ್ ಮಾರ್ಕ್ ನೀಡಲಾಗಿದ್ದು, ಅದರಲ್ಲಿ ಶ್ರೀನಿವಾಸ್ ಪ್ರಸಾದ್ ಹಾಗೂ ತೇಜಸ್ವಿ ಸೂರ್ಯ ತಮ್ಮ ಸಂಸದ ಸ್ಥಾನದ ಕುರಿತು ಪೂರ್ತಿಯಾಗಿ ನಿರಾಸಕ್ತಿ ತೋರಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಉಮೇದುವಾರರಾಗಿರುವ ತೇಜಸ್ವಿ ಸೂರ್ಯ ತನ್ನ ಐದು ವರ್ಷಗಳ ಅವಧಿಯಲ್ಲಿ ವಿವಿಧ ವಿವಾದಗಳ ಕಾರಣಕ್ಕಾಗಿಯೇ ಚಾಲ್ತಿಯಲ್ಲಿದ್ದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇತ್ತೀಚೆಗೆ ಪ್ರಚಾರ ಸಭೆಯೊಂದರಲ್ಲಿ ಬ್ಯಾಂಕ್ ಹಗರಣದ ಸಂತ್ರಸ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹಿಂಬಾಗಿಲಿನಿಂದ ಅವರು ಪರಾರಿಯಾಗಿದ್ದು ಸುದ್ದಿಯಾಗಿತ್ತು.