Friday, July 4, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟಕ: ಕೋಮು ಸಂಘರ್ಷದ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲೂ ಪಕ್ಷ ರಾಜಕೀಯ

ಕೋಮು ಸಂಘರ್ಷದ ಬಲಿಪಶುಗಳು ಬಡ ಕುಟುಂಬಗಳಿಂದ ಬಂದವರು, ಇವರ ದುಡಿಮೆಯಲ್ಲಿಯೇ ಮನೆಗಳು ನಡೆಯುತ್ತವೆ. ಪರಿಹಾರ ಸಿಗದೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ 

ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 10 ದಿನಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದ ನಂತರ, 30 ವರ್ಷದ ಕಲಂದರ್ ಶಫಿ ತಮ್ಮ ಊರು ಕೋಲ್ತಮಜಲುಗೆ ಹೋಗುವ ಯೋಚನೆ ಮಾಡುವಾಗ ಮೈ ನಡುಗುತ್ತದೆ ಎಂದು ಹೇಳುತ್ತಾರೆ.

ಅಲ್ಲಿ, ಶಫಿ ಜೊತೆ ಬೆಳೆದ ಮತ್ತು ಕೆಲಸ ಮಾಡಿದ ಜನರು ಈಗ ಅವನ ರಕ್ತ ಹೀರಲು ಹಾತೊರೆಯುತ್ತಿದ್ದಾರೆ. ಶಫಿ ಮೇ 27 ರಂದು ಕೋಲ್ತಮಜಲುನಲ್ಲಿ ನಡೆದ ಕೋಮು ಸಂಘರ್ಷದಿಂದ ಬದುಕುಳಿದವರು. ಆ ಘಟನೆಯ ನಂತರ, ಅವನು ತಮ್ಮ ಸಹೋದರಿಯೊಂದಿಗೆ 20 ಕಿಲೋಮೀಟರ್ ದೂರದಲ್ಲಿರುವ ಅಡ್ಡೂರ್ ಎಂಬ ಮತ್ತೊಂದು ಊರಿಗೆ ಹೋಗಿದ್ದಾರೆ.

ತಮ್ಮ ಕಣ್ಣೆದುರೇ ತಮ್ಮ ಬಾಲ್ಯದ ಗೆಳೆಯ ಅಬ್ದುಲ್ ರೆಹಮಾನ್ ಅವರನ್ನು ಬಾಲ್ಯದಿಂದಲೂ ಚಿರಪರಿಚಿತರಾಗಿದ್ದ ವ್ಯಕ್ತಿಗಳು ಕಡಿದು ಕೊಂದರು ಎಂದು ಹೇಳುತ್ತಾರೆ. “ಈ ಘಟನೆಯ ದೃಶ್ಯ ನನ್ನ ಕಣ್ಣ ಮುಂದೆ ಆಗಾಗ ಬರುತ್ತದೆ,” ಎಂದು ಅವರು ಹೇಳುತ್ತಾರೆ. “ದೀಪಕ್ (ಪೂಜಾರಿ) ನಮ್ಮ ಮೇಲೆ ದಾಳಿ ಮಾಡುತ್ತಾನೆ ಎಂಬುದನ್ನು ನಂಬಲು ನಂಗೆ ಈಗಲೂ ಆಗುತ್ತಿಲ್ಲ. ಅವರು ಮತ್ತು ನಾನು ಹಲವು ವರ್ಷಗಳಿಂದ ಮೇಸನ್‌ಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ” ಎಂದು ಶಫಿ ಹೇಳುತ್ತಾರೆ. ಅಬ್ದುಲ್ ರೆಹಮಾನ್ ಕೋಲ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದರು ಮತ್ತು ನಿರ್ಮಾಣ ಕಾರ್ಯಕ್ಕಾಗಿ ಕಚ್ಚಾ ವಸ್ತುಗಳನ್ನು ಸಾಗಿಸುವ ಪಿಕಪ್ ಟ್ರಕ್ ಅನ್ನು ಓಡಿಸುತ್ತಿದ್ದರು.  

ಶಫಿ ಮತ್ತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಮೇ 27 ರಂದು ದೀಪಕ್ ಪೂಜಾರಿ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಲು ರೆಹಮಾನ್‌ಗೆ ಫೋನ್ ಮಾಡಿದ್ದರು. ರೆಹಮಾನ್ ಶಫಿಯನ್ನು‌ ಕೆಲಸಕ್ಕೆ ಸೇರಿಕೊಳ್ಳಲು ಕೇಳಿಕೊಂಡಿದ್ದರು, ಮತ್ತು ಇಬ್ಬರೂ ಮರಳಿನೊಂದಿಗೆ ಕೆಲಸದ ಸ್ಥಳಕ್ಕೆ ಹೋದರು. “ನಾವು ದಾರಿಯಲ್ಲಿ ದೀಪಕ್‌ನ ತಾಯಿಯನ್ನು ನೋಡಿದೆವು ಮತ್ತು ಅವರನ್ನು ಮನೆ ತನಕ ಬಿಡಲು ಮುಂದಾದೆವು” ಎಂದು ಶಫಿ ಹೇಳುತ್ತಾರೆ.

ಮೇ 27 ರಂದು ಕೋಲ್ತಮಜಲು ಗ್ರಾಮದಲ್ಲಿ ಹತ್ಯೆಗೀಡಾದ ಅಬ್ದುಲ್ ರೆಹಮಾನ್

ದೀಪಕ್ ಪೂಜಾರಿ ಇರುವ ಸ್ಥಳವನ್ನು ತಲುಪಿದಾಗ, ಅಲ್ಲಿ ಕೆಲವರು ಗುಂಪುಗೂಡಿರುವುದನ್ನು ಅವರಿಬ್ಬರೂ ನೋಡಿದರು. ಇವರಿಗೆ ಅವರು ತಮ್ಮ ಮೇಲೆ ದಾಳಿ ಮಾಡುತ್ತಾರೆ ಎಂಬುದು ಗೊತ್ತಾಯಿತು ಸಾಬೀತಾಯಿತು. ಅವರು ರೆಹಮಾನ್ ಜೊತೆ ಜಗಳವಾಡಿದರು ಮತ್ತು ಕ್ಷಣಮಾತ್ರದಲ್ಲೇ ಅವರನ್ನು ಕಡಿದು ಕೊಂದರು. ಶಫಿಯ ತೋಳು, ಎದೆ, ಹೊಟ್ಟೆ ಮತ್ತು ಬೆನ್ನಿನ ಕೆಳಭಾಗದಲ್ಲಿ ಕತ್ತಿಯಿಂದ ಕಡಿದು ಗಾಯವುಂಟು ಮಾಡಿದರು.

“ಮುಂದೆ ಅವರು ನನ್ನನ್ನು ಕೊಲ್ಲಲು ಬರುತ್ತಾರೆ ಎಂಬುದು ನನಗೆ ಗೊತ್ತಾಯಿತು. ಆ ಗಾಯಗೊಂಡ ಸ್ಥಿತಿಯಲ್ಲಿಯೇ ನಾನು ಮೂರು ಕಿಲೋಮೀಟರ್‌ಗಳಿಗಿಂತ ಹೆಚ್ಚು ಓಡಿದೆ” ಎಂದು ಅವರು ಹೇಳುತ್ತಾರೆ. ಪ್ರಕರಣದ ಪ್ರಮುಖ ಆರೋಪಿ ದೀಪಕ್ ಪೂಜಾರಿ, ಬಡ ಕಾರ್ಮಿಕ ಕುಟುಂಬದಿಂದ ಬಂದವರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪೂಜಾರಿ ಮತ್ತು ಇತರ ಆರೋಪಿಗಳು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರಾಗಿದ್ದು, ಶಫಿ ಪ್ರಕಾರ, ಹಿಂದುತ್ವವಾದಿ ಬಜರಂಗ ದಳದೊಂದಿಗೆ ಗುರುತಿಸಿಕೊಂಡಿದ್ದಾರೆ.

ತೋಳುಗಳಿಗೆ ರಾಡ್ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿರುವ ಶಫಿ, ತನ್ನ ಕುಟುಂಬವನ್ನು ಸಾಕಲು ವಾಪಾಸ್ ಕೆಲಸಕ್ಕೆ ಹೋಗಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ತನ್ನ ಊರಿಗೆ ಮರಳಿ ಹೋಗುವ ಬಗ್ಗೆ ಅವರಿಗೆ ಇನ್ನು ವಿಶ್ವಾಸವಿಲ್ಲ.

ಶಫಿ ಈಗ ವಾಸಿಸುತ್ತಿರುವ ಅಡ್ಡೂರ್ ಗ್ರಾಮದಲ್ಲಿ, ಹೆಚ್ಚಿನವು ಮುಸ್ಲಿಮರ ಮನೆಗಳಾಗಿರುವುದರಿಂದ “ಸೇಫ್‌” ಎಂದು ಅವರು ಹೇಳುತ್ತಾರೆ. “ಕೋಲ್ತಮಜಲುವಿನಲ್ಲಿ, ನಾವು ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿ ಇದ್ದೇವೆ, ನನ್ನ ಮನೆ ಹಿಂದೂಗಳ ಮನೆಗಳಿಂದ ಸುತ್ತುವರೆದಿದೆ” ಎಂದು ಅವರು ಹೇಳುತ್ತಾರೆ.

ದೇಹದ ತುಂಬಾ ಇರಿತದ ಗಾಯಗಳೊಂದಿಗೆ ಕಲಂದರ್ ಶಫಿ. ಫೋಟೋ: ಸುಕನ್ಯಾ ಶಾಂತ

ಬಲಿಪಶುಗಳು ತಮ್ಮ ಊರು ಬಿಟ್ಟು ಹೋಗುವುದು ವಿಶೇಷ ಸಂಗತಿಯೇನಲ್ಲ, ಗಲಭೆಗಳು, ಕೋಮು ಹಿಂಸಾಚಾರ ಮತ್ತು ಜಾತಿ ಆಧಾರಿತ ದಾಳಿಗಳ ನಂತರ ಇದೇ ರೀತಿಯ ಪರಿಸ್ಥಿತಿ ಕಂಡುಬರುತ್ತದೆ.

ಈ ಘಟನೆ ಆದ ಮೇಲೆ ಶಫಿಗೆ ಮಾಡಲು ಯಾವುದೇ ಕೆಲಸವಿಲ್ಲ, ವಾಸಿಸಲು ಮನೆಯಿಲ್ಲ, ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಬೆಂಬಲವೂ ಇಲ್ಲ. ದೀಪಕ್ ಪೂಜಾರಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರೂ, ಪೊಲೀಸರು ಅಥವಾ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ಯಾವುದೇ ಸಂವಹನ ನಡೆದಿಲ್ಲ ಎಂದು ಅವರು ಹೇಳುತ್ತಾರೆ. “ನನ್ನ ಕುಟುಂಬ ಪರಿಹಾರಕ್ಕಾಗಿ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,” ಎಂದು ಅವರು ಹೇಳುತ್ತಾರೆ.

ಸರ್ಕಾರ ಮತ್ತು ಆಡಳಿತ ಪಕ್ಷದ ವೈಫಲ್ಯ

ಏಪ್ರಿಲ್ ಮತ್ತು ಮೇ ನಡುವೆ, ಮೂರು ಪ್ರತ್ಯೇಕ ದ್ವೇಷ ಅಪರಾಧ ಘಟನೆಗಳಲ್ಲಿ ಮೂವರು ಕೊಲೆಯಾಗಿ, ಶಫಿ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಮಂಗಳೂರು ನಗರದಲ್ಲಿ ಚಿಂದಿ ಆಯುವವನಾಗಿ ಕೆಲಸ ಮಾಡುತ್ತಿದ್ದ ಕೇರಳದ ವಯನಾಡ್ ಪ್ರದೇಶದ ಮಾನಸಿಕ ಅಸ್ವಸ್ಥ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಅಶ್ರಫ್, 2022 ರ ಮೊಹಮ್ಮದ್ ಫಾಜಿಲ್ ಹತ್ಯೆ ಸೇರಿದಂತೆ ಹಲವಾರು ದ್ವೇಷ ಅಪರಾಧ ಪ್ರಕರಣಗಳನ್ನು ಹೊಂದಿರುವ ಹಿಂದುತ್ವ ಕಾರ್ಯಕರ್ತ ಸುಹಾಸ್ ಶೆಟ್ಟಿ ಮತ್ತು ಕೋಲ್ತಮಜಲು ಗ್ರಾಮದಲ್ಲಿ ಕೊಲ್ಲಲ್ಪಟ್ಟ ಅಬ್ದುಲ್ ರೆಹಮಾನ್ ಸೇರಿದ್ದಾರೆ.

ಈ ಕೊಲೆಗಳು ಹಿಂಸಾಚಾರದ ಸ್ಪಷ್ಟ ಪ್ರಕರಣಗಳಾಗಿದ್ದರೂ, ಕಾಂಗ್ರೆಸ್ ಸರ್ಕಾರವು ಯಾವುದೇ ಕೊಲೆಗಳಿಗೆ ಪರಿಹಾರವನ್ನು ಘೋಷಿಸಿಲ್ಲ. ಅಬ್ದುಲ್ ರೆಹಮಾನ್ ಅವರ ಸಹೋದರ ಮೊಹಮ್ಮದ್ ಹನೀಫ್, ರಾಜ್ಯ ಸರ್ಕಾರವು ಕುಟುಂಬವನ್ನು ಭೇಟಿ ಮಾಡಲು ಯಾವುದೇ ಪ್ರತಿನಿಧಿಯನ್ನು ಕಳುಹಿಸಿಲ್ಲ ಎಂದು ಹೇಳುತ್ತಾರೆ. “ಪೊಲೀಸರು ಹೇಳಿಕೆಗಳನ್ನು ದಾಖಲಿಸಲು ಕೆಲವು ಬಾರಿ ಬಂದಿದ್ದಾರೆ, ಅಷ್ಟೇ. ಕುಟುಂಬ ಹೇಗೆ ಬದುಕುತ್ತಿದೆ ಎಂದು ನೋಡಲು ಯಾವ ಶಾಸಕನಾಗಲೀ, ಯಾವುದೇ ಜಿಲ್ಲಾಧಿಕಾರಿಯಾಗಲೀ ಬಂದಿಲ್ಲ” ಎಂದು ಪಿಕ್-ಅಪ್ ವ್ಯಾನ್‌ನ ಚಾಲಕನಾಗಿಯೂ ಕೆಲಸ ಮಾಡುವ ಹನೀಫ್ ಹೇಳುತ್ತಾರೆ.

ಘಟನೆಯ ಬಗ್ಗೆ ಕಾಂಗ್ರೆಸ್ ತಕ್ಷಣ ಕ್ರಮ ಕೈಗೊಳ್ಳದಿರುವುದು ಮುಸ್ಲಿಂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ನಂತರ, ಮಾಜಿ ಮೇಯರ್ ಕೆ. ಅಶ್ರಫ್ ಸೇರಿದಂತೆ ಮುಸ್ಲಿಂ ಸಮುದಾಯದ ಸುಮಾರು 200 ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ಪ್ರತಿಭಟನೆಯ ಸಂಕೇತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. “ಈ ಪ್ರದೇಶದ ಮತ್ತು ಇಡೀ ರಾಜ್ಯದ ಮುಸ್ಲಿಮರು ಸರ್ವಾನುಮತದಿಂದ ಪಕ್ಷಕ್ಕೆ ಮತ ಹಾಕಿದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬಲಪಂಥೀಯ ಶಕ್ತಿಗಳು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರದಂತೆ ಮತ್ತು ಹೆಚ್ಚಿನ ಸಮಸ್ಯೆಗಳು ಉಂಟಾಗದಂತೆ ಮಾಡಲು ನಮ್ಮ ಸಮುದಾಯವು ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರ ಇದು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಏನಾಗುತ್ತಿದೆ ಎಂಬುದನ್ನು ನೀವೇ ನೋಡಿ?” ಎಂದು ಅಶ್ರಫ್ ಹೇಳುತ್ತಾರೆ.

ಕೋಮು ಸಂಘರ್ಷಗಳ ಇತಿಹಾಸ

ದಕ್ಷಿಣ ಕನ್ನಡ ಪ್ರದೇಶವು ಯಾವಾಗಲೂ ಕೋಮು ಉದ್ವಿಗ್ನತೆಯಿಂದ ಕೂಡಿರುತ್ತದೆ. ಈ ಪ್ರದೇಶದಲ್ಲಿ ಹಿಂಸಾಚಾರ ಮತ್ತು ದ್ವೇಷ ಅಪರಾಧಗಳ ಪ್ರಕರಣಗಳನ್ನು ನಿಕಟವಾಗಿ ದಾಖಲಿಸುತ್ತಿರುವ ಕಾರ್ಯಕರ್ತ ಶಬೀರ್ ಅಹಮದ್, ಅಶ್ರಫ್ ಹೇಳಿದ್ದನ್ನೇ ಪುನರುಚ್ಚರಿಸುತ್ತಾರೆ. “ಅಸಮಾಧಾನವು ಪಕ್ಷದೊಳಗೆ ಮಾತ್ರವಲ್ಲ, ಸಮುದಾಯದಲ್ಲೂ ಇದೆ” ಎಂದು ಅವರು ಹೇಳುತ್ತಾರೆ.

ಇತ್ತೀಚೆಗೆ ಮೊಹಮ್ಮದ್ ಅಶ್ರಫ್ ಹತ್ಯೆಯ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿದ ಸತ್ಯಶೋಧನಾ ತಂಡದಲ್ಲಿ ಶಬೀರ್ ಕೂಡ ಇದ್ದರು. ವಾಮಂಜೂರು ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕುಡುಪು ಎಂಬ ಗ್ರಾಮದಲ್ಲಿ ಕೇರಳದ 30 ವರ್ಷದ ಅಶ್ರಫ್ ಅವರನ್ನು 30 ಕ್ಕೂ ಹೆಚ್ಚು ಜನರ ಗುಂಪೊಂದು ಹೊಡೆದು ಕೊಂದು ಹಾಕಿತು. ಏಪ್ರಿಲ್ 27 ರಂದು ಅವರು ಸಾವನ್ನಪ್ಪಿದ ಕೂಡಲೇ, ಮಾಧ್ಯಮಗಳು ಅಶ್ರಫ್ “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಕೂಗಿದ್ದಾನೆ ಎಂದು ವರದಿ ಮಾಡಿದವು, ಹೀಗೆ ಗುಂಪು ಹತ್ಯೆಯನ್ನು ಸಮರ್ಥಿಸಲು ಪ್ರಯತ್ನಿಸಿದರು. 

ಯಾವುದೇ ಪರಿಶೀಲನೆ ಇಲ್ಲದೆ ಮಾಧ್ಯಮಗಳು ಮಾಡಿದ ವರದಿಗಳನ್ನು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸಹ ಒಪ್ಪಿಕೊಂಡರು. “‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ್ದರೆ, ಅದು ತಪ್ಪು, ಅದು ಯಾರೇ ಆಗಿರಲಿ. ವಿಚಾರಣೆ ಇನ್ನೂ ನಡೆಯುತ್ತಿದೆ, ಪ್ರಕರಣ ದಾಖಲಾಗಿದೆ. ವರದಿ ಬರಲಿ, ಯಾರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತದೆ. ಯಾರಾದರೂ ಪಾಕಿಸ್ತಾನದ ಪರವಾಗಿ ಮಾತನಾಡಿದರೆ ಅದು ತಪ್ಪು, ಅದು ದೇಶದ್ರೋಹ,” ಎಂದು ಘಟನೆಯ ನಂತರ ಸಿದ್ದರಾಮಯ್ಯ ಹೇಳಿದ್ದರು. 

ಹಾಗಿದ್ದೂ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಅಸೋಸಿಯೇಷನ್ ​​ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ (ಎಪಿಸಿಆರ್) ಮತ್ತು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ​​ಫಾರ್ ಜಸ್ಟೀಸ್ (ಎಐಎಲ್‌ಎಜೆ) ಕರ್ನಾಟಕ ಘಟಕ ನಡೆಸಿದ ಸತ್ಯಶೋಧನಾ ಕಾರ್ಯದಲ್ಲಿ, ಅಂತಹ ಯಾವುದೇ ಘೋಷಣೆಗಳನ್ನು ಕೂಗಿರುವುದು ಎಂದಿಗೂ ನಡೆದಿಲ್ಲ ಎಂಬುದು ಕಂಡುಬಂದಿದೆ. ಕಾಂಗ್ರೆಸ್ ನಾಯಕರು ಮಾಧ್ಯಮಗಳ ಪರಿಶೀಲಿಸದ ಹೇಳಿಕೆಗಳನ್ನು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಮತ್ತೆ ಮತ್ತೆ ಹೇಳುತ್ತಲೇ ಬಂದರು.

ವಾಸ್ತವದಲ್ಲಿ, ಆರೋಪಿಗಳೆಲ್ಲರೂ ಭಟ್ರ ಕಲ್ಲುರ್ಟಿ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ, ಅಶ್ರಫ್ ದೇವಸ್ಥಾನದ ಹತ್ತಿರ ನೀರು ಕುಡಿಯುತ್ತಿರುವುದನ್ನು ನೋಡಿ ಯಾವುದೇ ಪ್ರಚೋದನೆಯಿಲ್ಲದೆ ಅವರ ಮೇಲೆ ಹಲ್ಲೆ ನಡೆಸಿದರು. ಮಂಗಳೂರು ಪೊಲೀಸ್ ಈ ಪ್ರಕರಣವನ್ನು ಮೊದಲು “ಅಕಾಲಿಕ ಮರಣ ವರದಿ” ದಾಖಲಿಸಿದ್ದರು ಮತ್ತು ಕೆಲವು ದಿನಗಳ ನಂತರ ಒತ್ತಡದ ಮೇರೆಗೆ ನಿರ್ದಿಷ್ಟ ಎಫ್‌ಐಆರ್ ದಾಖಲಿಸಲಾಯಿತು. ಘಟನೆಯ ನಂತರ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರನ್ನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವರ್ಗಾವಣೆ ಮಾಡಲಾಯಿತು.

“ಇವೆಲ್ಲವೂ ಬಡ ಕುಟುಂಬಗಳು, ಈ ಗಂಡಸರು ದುಡಿದು ತಂದ ಆದಾಯದ ಮೇಲೆ ಮನೆ ನಡೆಯುತ್ತದೆ” ಎಂದು ಶಬೀರ್ ಹೇಳುತ್ತಾರೆ.

ಪರಿಹಾರ ರಾಜಕೀಯ

ಮೂರು ವರ್ಷಗಳ ಹಿಂದೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಈ ಪ್ರದೇಶವು ಇದೇ ರೀತಿಯ ಗುಂಪು ಹತ್ಯೆಗಳಿಗೆ ಸಾಕ್ಷಿಯಾಗಿತ್ತು. 2022 ರಲ್ಲಿ ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಕೊಲೆ ಮಾಡಿದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೇಟ್ಟಾರು ಅವರ ಕುಟುಂಬಕ್ಕೆ ಮಾತ್ರ ಬಿಜೆಪಿ ಪರಿಹಾರ ನೀಡಿತ್ತು. ಉಳಿದವರು ಪರಿಹಾರದ ಬೇಡಿಕೆಗಳ ಬೇಡಿಕೆ ಇಟ್ಟರೂ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷಿಸಿತ್ತು ಮತ್ತು ಮೇ 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೇ ಕೊಲ್ಲಲ್ಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ನೀಡಲಾಯಿತು. ಅವರಲ್ಲಿ ಮೂವರು ಮುಸ್ಲಿಂ ಯುವಕರು ಮತ್ತು ಒಬ್ಬರು ಬಜರಂಗದಳದೊಂದಿಗೆ ಸಂಬಂಧ ಹೊಂದಿರುವ ಹಿಂದೂ ವ್ಯಕ್ತಿ.

ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪರಿಣಾಮವಾಗಿ ಗುಂಪು ಹಿಂಸಾಚಾರ ಮತ್ತು ದ್ವೇಷ ಅಪರಾಧ ಪ್ರಕರಣಗಳಲ್ಲಿ ಪರಿಹಾರಗಳು ಸಿಗುವಂತಾಗಿದೆ. ಪ್ರತಿಯೊಂದು ರಾಜ್ಯವೂ ಗುಂಪು ಹಿಂಸಾಚಾರದ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ, ಬಲಿಪಶುಗಳ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಕೂಡ ಕೋಮು ದ್ವೇಷ ಅಪರಾಧದಲ್ಲಿ ಕೊಲ್ಲಲ್ಪಟ್ಟ ಕಾರಣ, ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಲು ಹಿಂಜರಿಯುತ್ತಿದೆ ಎಂದು ಹಿಂದುತ್ವ ಕಾರ್ಯಕರ್ತರು ಆರೋಪಿಸಿದ್ದಾರೆ. ಬಿಜೆಪಿ ತನ್ನ ಪಕ್ಷದ ಪರವಾಗಿ ಶೆಟ್ಟಿ ಕುಟುಂಬಕ್ಕೆ ಈಗಾಗಲೇ 25 ಲಕ್ಷ ರುಪಾಯಿಗಳನ್ನು ನೀಡಿದೆ ಮತ್ತು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾಗಿದೆ. ಮುಸ್ಲಿಂ ಹುಡುಗರ ಹತ್ಯೆಗಳನ್ನು ರಾಜ್ಯ ಪೊಲೀಸರು ನಿರ್ವಹಿಸುತ್ತಿದ್ದಾರೆ.  

“ಗುಂಪು ಹಿಂಸಾಚಾರದ ಆರೋಪ ಹೊತ್ತಿರುವ ಹಿಂದುತ್ವವಾದಿ ವ್ಯಕ್ತಿಗೆ ಪರಿಹಾರ ನೀಡುವುದು ಅವರಿಗೆ (ಕಾಂಗ್ರೆಸ್) ಬೇಕಾಗಿಲ್ಲ” ಎಂದು ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು. ಆದರೆ ಪಕ್ಷ ರಾಜಕಾರಣದ ನಡುವೆ, ಬಲಿಪಶುಗಳ ಕುಟುಂಬಗಳು ಬಳಲುತ್ತಿವೆ ಎಂದು ಶಬೀರ್ ಹೇಳುತ್ತಾರೆ.

ಆರೋಪಗಳ ಕುರಿತು ಹೇಳಿಕೆಗಾಗಿ ರಾಜ್ಯ ವಿಧಾನಸಭಾ ಸ್ಪೀಕರ್ ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್ ಅವರಿಗೆ ಹಲವಾರು ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಖಾದರ್ ಪ್ರತಿಕ್ರಿಯಿಸಿದರೆ ಸುದ್ದಿಯನ್ನು ನವೀಕರಿಸಲಾಗುತ್ತದೆ.

ವರದಿ: ಸುಕನ್ಯಾ ಶಾಂತಾ

(ದಿ ವೈರ್‌ನ In Karnataka, Compensation for Victims of Communal Hate Crimes Is Beholden to Party Politics ವರದಿಯ ಕನ್ನಡಾನುವಾದ)

Related Articles

ಇತ್ತೀಚಿನ ಸುದ್ದಿಗಳು

You cannot copy content of this page