Home ರಾಜ್ಯ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ: ಮುಸ್ಲಿಂ ವ್ಯಕ್ತಿಯ ಹತ್ಯೆಗೆ ಸಂಚು, ಎಫ್‌ಐಆರ್ ದಾಖಲು

ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ: ಮುಸ್ಲಿಂ ವ್ಯಕ್ತಿಯ ಹತ್ಯೆಗೆ ಸಂಚು, ಎಫ್‌ಐಆರ್ ದಾಖಲು

0

ಬಜರಂಗದಳದ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ರೂಪಿಸಲಾಗಿದ್ದ ಸಂಚಿಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಬೆಳ್ತಂಗಡಿ ನಿವಾಸಿ ಅಭಿಷೇಕ್ (25) ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಸೆಪ್ಟೆಂಬರ್ 23 ರಂದು ಈ ಎಫ್‌ಐಆರ್ ದಾಖಲಾಗಿದೆ. ಕಳೆದ ಒಂದು ವರ್ಷದಿಂದ ತನಗೆ ಪರಿಚಿತನಾಗಿದ್ದ ಸುದೀಪ್ ಎಂಬಾತ, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಕೊಲ್ಲುವ ಕುರಿತು ಮಾತನಾಡಿದ್ದಾಗಿ ಅಭಿಷೇಕ್ ಪೊಲೀಸರಿಗೆ ತಿಳಿಸಿದ್ದಾರೆ.

ಹತ್ಯೆಯ ಈ ಯೋಜನೆಯಲ್ಲಿ ಕೈಜೋಡಿಸಲು ಸುದೀಪ್ ತನಗೆ ಒಟ್ಟು ₹24 ಲಕ್ಷ ಹಣ ನೀಡುವುದಾಗಿ ಆಮಿಷ ಒಡ್ಡಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಹತ್ಯೆಯ ಪ್ರಕರಣದಲ್ಲಿ ಜೈಲು ಸೇರಿದರೆ ಅವರ ಕುಟುಂಬಕ್ಕೆ ಮಾಸಿಕ ₹15,000 ಮನೆ ಖರ್ಚಿಗೆ ಹಾಗೂ ₹5,000 ಮೌಲ್ಯದ ದಿನಸಿ ಸಾಮಗ್ರಿಗಳನ್ನು ನೀಡುವುದಾಗಿಯೂ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ನಂತರ ಸುದೀಪ್ ಬಜ್ಪೆಯ ಕಿನ್ನಿಪದವು ಪ್ರದೇಶದ ವ್ಯಕ್ತಿಯೊಬ್ಬರ ಭಾವಚಿತ್ರವನ್ನು ವಾಟ್ಸಾಪ್ ಮೂಲಕ ಕಳುಹಿಸಿ, ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಅಭಿಷೇಕ್‌ಗೆ ಸೂಚಿಸಿದ್ದ.

ಅಭಿಷೇಕ್ ಮತ್ತು ಆತನ ಸ್ನೇಹಿತ ಕೀರ್ತನ್ ಸ್ಕಾರ್ಪಿಯೋ ವಾಹನದಲ್ಲಿ ತೆರಳಿ ಆ ಪ್ರದೇಶದಲ್ಲಿ ರೆಕ್ಕಿ ನಡೆಸಿದ್ದರು. ಡೀಸೆಲ್ ಮತ್ತು ಇತರ ಖರ್ಚುಗಳಿಗಾಗಿ ಸುದೀಪ್ ಯುಪಿಐ ಮೂಲಕ ₹2,000 ಹಣ ವರ್ಗಾಯಿಸಿದ್ದ ಎಂದು ತಿಳಿಸಲಾಗಿದೆ. ಈ ಕೃತ್ಯಕ್ಕಾಗಿ ತನ್ನ ಮನೆಯಿಂದ ಎರಡು ತಲವಾರುಗಳನ್ನು ತಂದು ಸಿದ್ಧವಾಗಿಟ್ಟುಕೊಂಡಿದ್ದಾಗಿಯೂ ಅಭಿಷೇಕ್ ಒಪ್ಪಿಕೊಂಡಿದ್ದಾರೆ.

ಆದರೆ, ಇತ್ತೀಚೆಗೆ ತನ್ನ ಪತ್ನಿಗೆ ಹೆರಿಗೆಯಾದ ಕಾರಣ ತಾನು ಈ ಸಂಚಿನಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಸುದೀಪ್ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದರಿಂದ ಭಯಗೊಂಡು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಅವರು, ಈ ಸಂಚಿಗೆ ಸಂಬಂಧಿಸಿದ ವಾಟ್ಸಾಪ್ ಸಂಭಾಷಣೆಗಳು ಮತ್ತು ಸ್ಕ್ರೀನ್‌ಶಾಟ್‌ಗಳು ತನ್ನ ಮೊಬೈಲ್‌ನಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 55 ಮತ್ತು 61(2)(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯನ್ನು ಸಿಸಿಬಿಗೆ (ಕೇಂದ್ರ ಅಪರಾಧ ವಿಭಾಗ) ಹಸ್ತಾಂತರಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

2025ರ ಮೇ 1ರಂದು ಮಂಗಳೂರಿನ ಬಜ್ಪೆ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ ಸುಹಾಸ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡು, 11 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೀಗ ಅದೇ ಹತ್ಯೆಗೆ ಪ್ರತೀಕಾರವಾಗಿ ನಡೆದಿದೆ ಎನ್ನಲಾದ ಈ ಹೊಸ ಕೊಲೆ ಸಂಚನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version