Wednesday, November 6, 2024

ಸತ್ಯ | ನ್ಯಾಯ |ಧರ್ಮ

ಮಂಗಳಮುಖಿಯರಿಂದ ಕರ್ನಾಟಕ ಸ್ವಾಭಿಮಾನ ನಡಿಗೆ; ವಿವಿಧ ಸಂಘಟನೆಗಳು, ಸಾಹಿತಿಗಳು, ಸಂಘ ಸಂಸ್ಥೆಗಳಿಂದ ಬೆಂಬಲ

ಹಾಸನ: ಕರ್ನಾಟಕವನ್ನು ವಿವಿಧ ಸಮುದಾಯಗಳು ಸೌಹಾರ್ದತೆಯಿಂದ ಬಾಳುವ ಶಾಂತಿಯ ತೋಟವನ್ನಾಗಿ ಮಾಡೋಣ ಘೋಷಣೆಯೊಂದಿಗೆ ಬುಧವಾರದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಸ್ವಾಭಿಮಾನ ನಡಿಗೆಯ ಮೆರವಣಿಗೆಯಲ್ಲಿ ವಿವಿಧ ಸಂಘಟನೆ, ಸಾಹಿತಿಗಳು, ಸಂಘ ಸಂಸ್ಥೆಗಳಿಂದ ಬೆಂಬಲ ದೊರಕಿದ್ದು, ನಗರದ ಮಹಾರಾಜ ಪಾರ್ಕ್‌ನಿಂದ ಆರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿತು.

ಪ್ರಕೃತಿ ಸೇವಾ ಸಂಸ್ಥೆಯ ಅಧ್ಯಕ್ಷೆ ವರ್ಷ ಹಾಸನ್ ಮಾತನಾಡಿ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಬೆಳಕಿಗೆ ತರಲು ಮತ್ತು ಅವರ ವಿಮೋಚನೆಗಾಗಿ ಆಗಿದೆ. ಜೂನ್ ೨೯, ೧೯೬೯ ರಂದು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಹೆಚ್ಚಾಗಿ ಬರುವ ಅಮೆರಿಕ ದೇಶದ ನ್ಯೂಯಾರ್ಕ್ ನಗರದ ಗ್ರೀನ್ವಿಚ್ ನಲ್ಲಿರುವ ಸ್ಟೋನ್ವಾಲ್ ಇನ್ ಎನ್ನುವ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದರು. ಪೊಲೀಸರ ದಾಳಿಯಿಂದ ಕೆರಳಿ ಮತ್ತು ಪೊಲೀಸರ ಸದಾ ಕಿರುಕುಳದಿಂದ ಬೇಸತ್ತು, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಪೊಲೀಸ್ ದಾಳಿಯನ್ನು ಪ್ರಬಲವಾಗಿ ವಿರೋಧಿಸಿದರು. ಆ ಘಟನೆಯು ’ಗಲಭೆ’ ಎಂದು ಕರೆಯಲ್ಪಟ್ಟಿತು. ಆದರೆ ವಿಶ್ವದಾದ್ಯಂತದ ಸಮುದಾಯದ ಹೆಚ್ಚಿನ ಭಾಗವು ಇದನ್ನು ’ಗಲಭೆ’ ಎನ್ನಲು ನಿರಾಕರಿಸಿ ಇದನ್ನು ’ದಂಗೆ’ಯ ದಿನವೆಂದು ಪರಿಗಣಿಸುತ್ತದೆ ಏಕೆಂದರೆ ಸ್ಟೋನ್ಸಾಲ್ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಧುನಿಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಚಳುವಳಿಯ ಹುಟ್ಟು ಎಂದು ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅವರ ಬೆಂಬಲಿಗರು ಪ್ರೈಡ್ (ಸ್ವಾಭಿಮಾನ) ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಸ್ಟೋನ್ಸಾಲ್ ದಂಗೆಯ ದಿನವನ್ನು ಆಚರಿಸಲು ವಿಶ್ವದಾದ್ಯಂತ ನಗರಗಳ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ ಮತ್ತು ಇದು ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಯ ಹಬ್ಬವಾಗಿದೆ. ಈ ವರ್ಷ ಕರ್ನಾಟಕದ ಹಲವು ಸ್ಥಳಗಳಲ್ಲಿ ಸ್ವಾಭಿಮಾನ ನಡಿಗೆ ಗಳನ್ನು ಆಯೋಜಿಸಲಾಗಿದೆ. ಸತತ ಹೋರಾಟದ ಫಲವಾಗಿ ಕಳೆದ ದಶಕದಲ್ಲಿ ಒಂದೇ ಲಿಂಗದ ವ್ಯಕ್ತಿಗಳ ನಡುವಿನ ಸಮ್ಮತಿಯ ಲೈಂಗಿಕ ವರ್ತನೆಯ ನಿರಪರಾಧೀಕರಣ, ಲಿಂಗತ್ವ ಅಲ್ಪಸಂಖ್ಯಾತರ ಲಿಂಗತ್ವ ಮತ್ತು ಹಕ್ಕುಗಳ ಮಾನ್ಯತೆ ಮತ್ತು ಕರ್ನಾಟಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ೧% ಮೀಸಲಾತಿ ಸೇರಿದಂತೆ ಪ್ರಮುಖ ಕಾನೂನು ಬದಲಾವಣೆಗಳು ಸಂಭವಿಸಿವೆ. ಕರ್ನಾಟಕದಲ್ಲಿ ಸತತ ರಾಜ್ಯ ಸರ್ಕಾರಗಳು ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿ ಮತ್ತು ಕೆಲವು ಜನರಿಗೆ ಉದ್ಯಮಶೀಲತೆಯ ಸಹಾಯದ ರೂಪದಲ್ಲಿ ಬೆಂಬಲವನ್ನು ನೀಡುತ್ತಿವೆ. ಪ್ರಸ್ತುತ ರಾಜ್ಯ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಒದಗಿಸುತ್ತಿದೆ ಮತ್ತು ಅವರನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಸೇರಿಸಲು ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಸಾಹಿತಿ ರೂಪ ಹಾಸನ್ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರು ಇಂದು ದೌರ್ಜನ್ಯಕ್ಕೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯ. ತಮ್ಮ ಹಕ್ಕುಗಳಿಗೆ ದಶಕಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದಾರೆ. ನಮ್ಮ ಸಹಕಾರ ಬೆಂಬಲ ಇರುತ್ತದೆ ಎಂದು ಹೇಳಿದರು.

ಸಂಗಮ ಸಂಸ್ಥೆಯ ನಿಶಾ ಅವರು ಮಾತನಾಡಿ, ಪ್ರಮುಖ ನಾಗರಿಕ ಸಮಾಜ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳನ್ನು ಬೆಂಬಲಿಸುತ್ತವೆ. ಅವುಗಳಲ್ಲಿ ಹಲವು ಸಂಸ್ಥೆಗಳು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಬೆಂಬಲಿಸುತ್ತವೆ. ಈ ಬೆಳವಣಿಗೆಗಳು ಸ್ವಾಗತಾರ್ಹವಾದರೂ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಇನ್ನೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಮಾಜ ಮತ್ತು ಕುಟುಂಬವು ಒಪ್ಪಿಕೊಳ್ಳದ ಕಾರಣ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಮುಕ್ತವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಸಲಿಂಗಕಾಮಿಗಳು ಪರಲಿಂಗಕಾಮಿ ವಿವಾಹಗಳಿಗೆ ತಳ್ಳಲ್ಪಟ್ಟಿದ್ದಾರೆ. ಇದು ಅವರನ್ನು ತಪ್ಪಿತಸ್ಥ ಭಾವನೆಗಳೊಂದಿಗೆ ಅತೃಪ್ತಿ ಮತ್ತು ಗುಪ್ತ ಜೀವನವನ್ನು ನಡೆಸುವಂತೆ ಮಾಡುತ್ತಿದೆ. ಈ ಬಲವಂತದ ಮದುವೆಗಳು ಅವರ ಹೆಂಡತಿ / ಗಂಡ ಮತ್ತು ಮಕ್ಕಳ ಜೀವನವನ್ನೂ ಕಷ್ಟಕರವಾಗಿಸುತ್ತಿವೆ. ? ಹೆಚ್ಚಿನ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರೀತಿಸುವ ಜೀವನ ಸಂಗಾತಿ ಸಿಗುವುದು ಅಸಾಧ್ಯವೆಂದು ತೋರುತ್ತದೆ ಎಂದರು. ಹೆಚ್ಚಿನ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ವಸತಿ ಒಂದು ಪ್ರಮುಖ ಸಮಸ್ಯೆಯಾಗಿದೆ ಏಕೆಂದರೆ ಅವರ ಕುಟುಂಬಗಳು ಅವರನ್ನು ತಿರಸ್ಕರಿಸಿದ ನಂತರ ತಾವೇ ಸ್ವಂತವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೆಚ್ಚಿನ ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ಅಥವಾ ಲೈಂಗಿಕವೃತ್ತಿಯ ಮೂಲಕ ಜೀವನ ಸಾಗಿಸಬೇಕಾಗಿದೆ. ಅವರು ಪೊಲೀಸ್, ಗೂಂಡಾಗಳು ಮತ್ತು ’ಭಿಕ್ಷುಕರ ಕಾಲೋನಿ’ ಅಧಿಕಾರಿಗಳಿಂದ ನಿರಂತರ ಕಿರುಕುಳ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಆತಂಕವ್ಯಕ್ತಪಡಿಸಿದರು. ಲಿಂಗತ್ವ ದೃಢೀಕರಿಸಲಾಗದ ಮಕ್ಕಳು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಹಿಂಸೆಯನ್ನು ಎದುರಿಸುತ್ತಿದ್ದಾರೆ, ಇದು ಅವರ ಶಿಕ್ಷಣವನ್ನು ಸ್ಥಗಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರು ಸಮಾಜದಲ್ಲಿ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಇದೆ ವೇಳೆ ಪ್ರಕೃತಿ ಸಮುದಾಯ ಸೇವಾ ಸಂಸ್ಥೆ, ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ, ಸಂಗಮ, ಕರ್ನಾಟಕ ಸಂಘರ್ಷ ಸಮಿತಿ (ಭೀಮವಾದ), ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ), ಯಶಸ್ವಿನಿ ಶ್ರೇಯೋಭಿವೃದ್ಧಿ ಸಂಸ್ಥೆ, ಜೀವನಾಶ್ರಯ ನೆಟ್‌ವರ್ಕ್, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕ್ರಿಸ್ಟೋ ಕ್ರೈಸ್ತೋ ಕಾರಿಡಾಸ್ ಸಂಸ್ಥೆ (ಟಿ ಐ) ಮತ್ತು ಕಲಾ ತಂಡ, ಪ್ರಗತಿಪರ ಚಿಂತಕರು ಇದರಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆ ಇದೆ ವೇಳೆ ಸಂಗಮ ಸಂಸ್ಥೆಯ ಉಪಾಧ್ಯಕ್ಷೆ ಆರಾಧ್ಯಾ, ಆರ್ಯಾ, ಅಶ್ವತ್, ಸಂಗಮ್, ರವೀಶ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸತಿಶ್ ಪಟೇಲ್, ವೆಂಕಟೇಶ್. ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page