ಸತತ ಎರಡನೇ ವರ್ಷವೂ ಕರ್ನಾಟಕವು ಹಾವಿನ ಕಡಿತದಿಂದ ಸಂಭವಿಸುವ ಸಾವುಗಳಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳವು ಅತಿ ಹೆಚ್ಚು ಹಾವಿನ ಕಡಿತದ ಘಟನೆಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ 2025ರಲ್ಲಿ ಹಾವಿನ ಕಡಿತದಿಂದ ಬಲಿಬಿದ್ದವರ ಸಂಖ್ಯೆ 160ಕ್ಕೆ ಏರಿಕೆಯಾಗಿದ್ದು, 2024ರಲ್ಲಿ 101 ಸಾವುಗಳು ವರದಿಯಾಗಿದ್ದವು. ದೇಶದ ಮತ್ಯಾವ ರಾಜ್ಯದಲ್ಲೂ ಹಾವಿನ ಕಡಿತದ ಸಾವುಗಳ ಸಂಖ್ಯೆ ನೂರರ ಗಡಿ ದಾಟಿಲ್ಲ ಎಂಬುದು ಗಮನಾರ್ಹ.
2025ರಲ್ಲಿ ಒಟ್ಟು 27,471 ಹಾವಿನ ಕಡಿತದ ಘಟನೆಗಳೊಂದಿಗೆ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (16,805), ತಮಿಳುನಾಡು (15,837), ಒಡಿಶಾ (15,815) ಮತ್ತು ಅಸ್ಸಾಂ (11,817) ನಂತರದ ಸ್ಥಾನಗಳಲ್ಲಿವೆ. ಆದರೆ ಈ ರಾಜ್ಯಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆ ಕರ್ನಾಟಕಕ್ಕಿಂತ ಅತ್ಯಂತ ಕಡಿಮೆಯಿದ್ದು, ಪಶ್ಚಿಮ ಬಂಗಾಳದಲ್ಲಿ 65, ತಮಿಳುನಾಡಿನಲ್ಲಿ 26, ಒಡಿಶಾದಲ್ಲಿ 23 ಹಾಗೂ ಅಸ್ಸಾಂನಲ್ಲಿ 13 ಸಾವುಗಳು ಸಂಭವಿಸಿವೆ.
2024ರಲ್ಲೂ ಇದೇ ಮಾದರಿಯ ಅಂಕಿಅಂಶಗಳು ಕಂಡುಬಂದಿದ್ದವು. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಅಂದರೆ 20,888 ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕ (13,235), ಒಡಿಶಾ (16,682), ತಮಿಳುನಾಡು (16,142) ಮತ್ತು ಅಸ್ಸಾಂ (10,424) ಪ್ರಕರಣಗಳನ್ನು ವರದಿ ಮಾಡಿದ್ದವು.
ದೇಶಾದ್ಯಂತ ವರದಿಯಾದ ಪ್ರಕರಣಗಳ ಆಧಾರದ ಮೇಲೆ ರಾಜ್ಯಸಭೆಯಲ್ಲಿ ಮಂಡಿಸಲಾದ ಈ ಅಂಕಿಅಂಶಗಳು, ಆರೋಗ್ಯ ಸಚಿವಾಲಯದ ನೈಜ ಅಂದಾಜುಗಳಿಗಿಂತ ಬಹಳ ಕಡಿಮೆಯಿವೆ.
“ಭಾರತದಲ್ಲಿ ಪ್ರತಿ ವರ್ಷ ಅಂದಾಜು 30 ರಿಂದ 40 ಲಕ್ಷ ಹಾವಿನ ಕಡಿತದ ಘಟನೆಗಳು ಸಂಭವಿಸುತ್ತಿದ್ದು, ಸುಮಾರು 50,000 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಜಾಗತಿಕ ಮಟ್ಟದ ಒಟ್ಟು ಹಾವಿನ ಕಡಿತದ ಸಾವುಗಳಲ್ಲಿ ಅರ್ಧದಷ್ಟಾಗಿದೆ. ಸಂತ್ರಸ್ತರ ಪೈಕಿ ಅತಿ ಸಣ್ಣ ಪ್ರಮಾಣದಷ್ಟು ಜನರು ಮಾತ್ರ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿರುವುದರಿಂದ ನೈಜ ಪ್ರಮಾಣದ ಘಟನೆಗಳು ಸರಿಯಾಗಿ ದಾಖಲಾಗುತ್ತಿಲ್ಲ,” ಎಂದು ಸಚಿವಾಲಯವು ಹಾವಿನ ವಿಷಪ್ರಾಶನ ತಡೆಗಟ್ಟುವ ಕುರಿತ ತನ್ನ 2023ರ ರಾಷ್ಟ್ರೀಯ ವರದಿಯಲ್ಲಿ ಉಲ್ಲೇಖಿಸಿತ್ತು.
ಇದಕ್ಕೆ ವ್ಯತಿರಿಕ್ತವಾಗಿ, 2025ರಲ್ಲಿ ಇಡೀ ದೇಶದಿಂದ ಕೇವಲ 1,40,302 ಹಾವಿನ ಕಡಿತದ ಪ್ರಕರಣಗಳು ಮತ್ತು 429 ಸಾವುಗಳು ಮಾತ್ರ ಅಧಿಕೃತವಾಗಿ ವರದಿಯಾಗಿವೆ. 2024ರಲ್ಲಿ ಈ ಸಂಖ್ಯೆ 1,20,982 ಪ್ರಕರಣಗಳು ಹಾಗೂ 375 ಸಾವುಗಳಾಗಿತ್ತು.
ಹಾವಿನ ಕಡಿತದ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಆರೋಗ್ಯ ನಿರ್ವಹಣೆಯನ್ನು ಉತ್ತಮಪಡಿಸಲು, ಇದನ್ನು ‘ಸೂಚಿಸಬೇಕಾದ ಕಾಯಿಲೆ’ (Notifiable Disease) ಎಂದು ಕಾನೂನಿಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಕರ್ನಾಟಕ ಸೇರಿದಂತೆ ದೇಶದ ಕೇವಲ 12 ರಾಜ್ಯಗಳು ಮಾತ್ರ ಇಲ್ಲಿಯವರೆಗೆ ಈ ಕ್ರಮ ಕೈಗೊಂಡಿವೆ.
ಉಳಿದಂತೆ ಅಸ್ಸಾಂ, ತಮಿಳುನಾಡು, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಕೇರಳ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಹಾವಿನ ಕಡಿತವನ್ನು ಕಡ್ಡಾಯವಾಗಿ ವರದಿ ಮಾಡಬೇಕಾದ ಕಾಯಿಲೆಯಾಗಿ ಘೋಷಿಸಿವೆ.
ಫೆಬ್ರವರಿ 2024ರಲ್ಲಿ ಕರ್ನಾಟಕ ಸರ್ಕಾರವು ಹಾವಿನ ಕಡಿತವನ್ನು ‘ಸೂಚಿಸಬೇಕಾದ ಕಾಯಿಲೆ’ ಎಂದು ಘೋಷಿಸಿದ ನಂತರ ರಾಜ್ಯದ ಅಂಕಿಅಂಶಗಳ ವರದಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. 2023ರಲ್ಲಿ ರಾಜ್ಯದಲ್ಲಿ ಕೇವಲ 6,596 ಪ್ರಕರಣಗಳು ಹಾಗೂ 19 ಸಾವುಗಳು ಮಾತ್ರ ದಾಖಲಾಗಿದ್ದವು.
ದೇಶದಲ್ಲಿ ಸಂಭವಿಸುವ ಶೇಕಡಾ 90 ರಷ್ಟು ಹಾವಿನ ಕಡಿತದ ಘಟನೆಗಳಿಗೆ ನಾಲ್ಕು ಪ್ರಮುಖ ಅಪಾಯಕಾರಿ ಹಾವುಗಳಾದ – ನಾಗರಹಾವು (Indian Cobra), ಕಟ್ಟುಹಾವು (Common Krait), ಕೊಳಕುಮಂಡಲ (Russell’s Viper) ಮತ್ತು ಗರಸೆ ಮಂಡಲ (Saw-scaled Viper) ಕಾರಣವಾಗಿವೆ.
“ಶೇಕಡಾ 80 ರಷ್ಟು ಪ್ರಕರಣಗಳಲ್ಲಿ ‘ಆಂಟಿ-ಸ್ನೇಕ್ ವೆನಮ್’ (ವಿಷನಿರೋಧಕ) ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗಿದೆ. ಆದರೆ, ಹಾವಿನ ಕಡಿತಕ್ಕೆ ಸೂಕ್ತ ಚಿಕಿತ್ಸೆ ನೀಡಲು ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಹಾಗೂ ಸುಸಜ್ಜಿತ ಆರೋಗ್ಯ ಕೇಂದ್ರಗಳ ಕೊರತೆಯಿರುವುದು ಇಂದಿಗೂ ಆತಂಕಕಾರಿ ವಿಷಯವಾಗಿದೆ” ಎಂದು ಮೂಲಗಳು ತಿಳಿಸಿವೆ.
