ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ನಡುವಿನ ತೀವ್ರ ಜಗಳದ ಕಿಡಿ ಈಗ ದೆಹಲಿ ಅಂಗಳಕ್ಕೆ ತಲುಪಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ ಅವರ ಸರ್ವಾಧಿಕಾರಿ ಧೋರಣೆ ಹಾಗೂ ಏಕಪಕ್ಷೀಯ ತೀರ್ಮಾನಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅತೃಪ್ತ ಪದಾಧಿಕಾರಿಗಳು ರಾಷ್ಟ್ರೀಯ ನಾಯಕರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ.
ಅಧ್ಯಕ್ಷ ಮಂಜುನಾಥ ಗೌಡ ಹಾಗೂ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅವರ ಬೆಂಬಲಿಗರ ನಡುವೆ ಪಕ್ಷದ ಕಚೇರಿಯಲ್ಲೇ ನಡೆದಿದ್ದ ಮಾರಾಮಾರಿ ಘಟನೆಯ ಸಂಪೂರ್ಣ ವಿವರಗಳನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ತಲುಪಿಸಲಾಗಿದೆ. ಈ ಘಟನೆಗೆ ಪ್ರಮುಖ ಕಾರಣಕರ್ತರು ಯಾರು ಮತ್ತು ಇದಕ್ಕೆ ಯಾರೆಲ್ಲಾ ಪ್ರಚೋದನೆ ನೀಡಿದ್ದಾರೆ ಎಂಬ ವಿವರಗಳೊಂದಿಗೆ, ಮಂಜುನಾಥ ಗೌಡರ ವಿರುದ್ಧ ದೂರುಗಳ ಸರಮಾಲೆಯನ್ನೇ ನೀಡಲಾಗಿದೆ ಎಂದು ತಿಳಿದುಬಂದಿದೆ.
ಯುವ ಕಾಂಗ್ರೆಸ್ ಸಂಘಟನೆಯು ರಾಜ್ಯದಲ್ಲಿ ದಿನೇ ದಿನೇ ದುರ್ಬಲವಾಗುತ್ತಿರುವುದಕ್ಕೆ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ದೂರಿನಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಆಗೊಮ್ಮೆ ಈಗೊಮ್ಮೆ ಅಸಂಬದ್ಧ ಪೋಸ್ಟರ್‌ಗಳನ್ನು ಹಿಡಿದುಕೊಂಡು ತಮ್ಮ ಆಪ್ತ ವಲಯದೊಂದಿಗೆ ಪ್ರತಿಭಟನೆ ಮಾಡುವುದನ್ನು ಬಿಟ್ಟರೆ, ಸಂಘಟನಾತ್ಮಕವಾಗಿ ಯುವ ಕಾಂಗ್ರೆಸ್‌ನ ಜವಾಬ್ದಾರಿ ಏನು ಎಂಬುದನ್ನು ಅವರು ಮರೆತಿದ್ದಾರೆ ಎಂದು ಸಹೋದ್ಯೋಗಿಗಳು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ವರ್ಚಸ್ಸು ವೃದ್ಧಿಸುವ ನಿಟ್ಟಿನಲ್ಲಿ ಯಾವುದೇ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸದ ಅಧ್ಯಕ್ಷರು, ಪದಾಧಿಕಾರಿಗಳ ಮೇಲೆಯೇ ದರ್ಪ ತೋರುತ್ತಾ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಗಂಭೀರವಾಗಿ ದೂರಲಾಗಿದೆ. ಅಧ್ಯಕ್ಷರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿರುವುದರಿಂದ ರಾಜ್ಯ ಘಟಕದಲ್ಲಿ ಈಗ ಎರಡು ಸ್ಪಷ್ಟ ಗುಂಪುಗಳಾಗಿವೆ ಎಂದು ಅತೃಪ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸೋಮವಾರ ನಡೆದ ಈ ಮಾರಾಮಾರಿ ಘಟನೆಯ ಬಗ್ಗೆ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರು ತಿರುವನಂತಪುರದಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಮೂಲಕ ನೇರವಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಅವರ ಇತ್ತೀಚಿನ ನಡವಳಿಕೆಗಳ ಬಗ್ಗೆ ಹಿರಿಯ ನಾಯಕರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೈಕಮಾಂಡ್ ಈ ಕುರಿತು ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
