Saturday, March 15, 2025

ಸತ್ಯ | ನ್ಯಾಯ |ಧರ್ಮ

ʼಕಾಶ್ಮೀರ್ ಫೈಲ್ಸ್ ಅಶ್ಲೀಲ ಮತ್ತು ಪ್ರಾಪಗಂಡ ಸಿನೆಮಾʼ ; ಮತ್ತೆ ಮುನ್ನೆಲೆಗೆ ಬಂದ ಚರ್ಚೆ, ದೂರು ದಾಖಲು

ಪ್ರಾಪಗಂಡ ಅಡಿಯಲ್ಲಿ ನಿರ್ಮಾಣವಾದ ಚಿತ್ರ ಎಂದೇ ರಾಷ್ಟ್ರಾದ್ಯಂತ ಹೆಚ್ಚು ಪ್ರಚಾರ ಪಡೆದಿದ್ದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನೆಮಾ ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯಂತ ಕೆಟ್ಟ ಅಭಿರುಚಿ ಮತ್ತು ಅಶ್ಲೀಲ ಉದ್ದೇಶದ ಚಿತ್ರ ಎಂದು ತೀರ್ಪುಗಾರರು ಅಭಿಪ್ರಾಯ ಪಟ್ಟು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ನಾಯಕರಿಂದ ವ್ಯಾಪಕ ಪ್ರಚಾರಕ್ಕೆ ಬಂದಿದ್ದ ಈ ಸಿನಿಮಾ ಈಗ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಕಡೆಯಿಂದ ಅತ್ಯಂತ ಕೆಟ್ಟ ಅಭಿರುಚಿ ಮತ್ತು ಅಶ್ಲೀಲ ಉದ್ದೇಶ ಹೊಂದಿರುವ ಸಿನೆಮಾ ಎಂದು ಅಭಿಪ್ರಾಯ ಹೊರಬಿದ್ದಿದೆ. ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರ ಸಮಿತಿಯ ಮುಖ್ಯಸ್ಥರಾದ ಇಸ್ರೇಲ್ ಮೂಲದ ನಿರ್ಮಾಪಕ ನಾದವ್ ಲ್ಯಾಪಿಡ್ (Nadav Lapis) ಈ ಸಿನೆಮಾದ ಬಗ್ಗೆ ಈ ರೀತಿಯಾಗಿ ವೇದಿಕೆಯಲ್ಲೇ ಸಿನೆಮಾ ಬಗ್ಗೆ ಅಭಿಪ್ರಾಯ ಹೊರ ಹಾಕಿದ್ದಾರೆ.

ಸಹಜವಾಗಿಯೇ ಇದು ಬಿಜೆಪಿ ಪಕ್ಷ ಅಥವಾ ಬಲಪಂಥೀಯ ಹಿನ್ನೆಲೆಯವರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತ ದೇಶದ ಇಸ್ರೇಲ್ ಅಂಬಾಸಿಡರ್ ಆಗಿರುವ ನೋರ್ ಗಿಲೋನ್ (Naor Gilon) ಅವರು ಮುಂದಿನ ರಾಜಕೀಯ ಮತ್ತು ದೇಶಗಳ ನಡುವಿನ ಬಾಂಧವ್ಯದ ದೃಷ್ಟಿಯಿಂದ ಇದು ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ‘ನಾದವ್ ಲ್ಯಾಪಿಡ್ ಅವರೇ.. ನೀವೇನೋ ನಿಮ್ಮ ಅಭಿಪ್ರಾಯವನ್ನು ಧೈರ್ಯದಿಂದ ಪ್ರಸ್ತುತಪಡಿಸಿ ಹೋದಿರಿ. ಆದರೆ ಅದರ ಪರಿಣಾಮವನ್ನು ನಾವು ಎದುರಿಸಬೇಕು. ಇದು ನನಗೆ ತೀವ್ರ ಮುಜುಗರ ಮತ್ತು ಸಮಸ್ಯೆಗೆ ಕಾರಣವಾಗಲಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದರ ನಡುವೆ ಸುಪ್ರೀಂಕೋರ್ಟ್ ವಕೀಲರಾದ ವಿನೀತ್ ಜಿಂದಾಲ್ ಎಂಬುವವರು ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ ನಿರ್ಮಾಪಕ ನಾದವ್ ಲ್ಯಾಪಿಡ್ ಮೇಲೆ ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಮತ್ತು ಸಮಾಜ ಒಡೆಯುವ ಹೇಳಿಕೆ ನೀಡಿದ ಆರೋಪದ ಮೇಲೆ ಸೆಕ್ಷನ್ 153 ಮತ್ತು 295 ಅಡಿಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಬಲಪಂಥೀಯ ಮೂಲದ ವ್ಯಕ್ತಿಗಳೂ ಸಹ ಇಸ್ರೇಲ್ ದೇಶದ ನಿರ್ಮಾಪಕರ ಮೇಲೆ ಮಾಧ್ಯಮಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಒಬ್ಬ ತೀರ್ಪುಗಾರನಾಗಿ ನಾದವ್ ಲ್ಯಾಪಿಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಅವರ ಆಯ್ಕೆಯ ಸ್ವಾತಂತ್ರ್ಯ. ಈಗಾಗಲೇ ಈ ಸಿನೆಮಾ ಹಲವಷ್ಟು ರಾಜಕೀಯ ಉದ್ದೇಶಗಳನ್ನು ಹೊಂದಿದ ಬಗ್ಗೆಯೂ ಈ ಹಿಂದೆ ದೇಶದ ಒಳಗೇ ಹಲವಷ್ಟು ಪರ ವಿರೋಧದ ಚರ್ಚೆಗಳಾಗಿವೆ. ಆದರೆ ಈಗ ನಡಾವ್ ಲ್ಯಾಪಿಡ್ ಅವರ ಈ ಅಭಿಪ್ರಾಯದ ಮೂಲಕ ಮತ್ತೆ ಚರ್ಚೆ ಮುನ್ನಲೆಗೆ ಬಂದಿದೆ.

ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಅಡಿಯಲ್ಲಿ ಮೂಡಿಬಂದ ಈ ಸಿನಿಮಾ ದೇಶದ ಪ್ರತಿಯೊಬ್ಬರೂ ನೋಡಬೇಕು ಎಂದು ಬಿಜೆಪಿ ಪಕ್ಷದ ನಾಯಕರು ಖುದ್ದು ಪ್ರಚಾರ ಕೈಗೊಂಡಿದ್ದರು. ಹಾಗಾಗಿಯೇ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲೂ ಈ ಸಿನೆಮಾಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಜೊತೆಗೆ ಆಯಾ ರಾಜ್ಯಗಳ ಬಿಜೆಪಿ ನಾಯಕರೇ ಸಿನೆಮಾ ನೋಡುವಂತೆ ಪ್ರಚಾರ ಕೈಗೊಂಡಿದ್ದರು.

ಈ ನಡುವೆ ಇಸ್ರೇಲ್ ದೇಶದ ಅಂಬಾಸಿಡರ್ ಆಗಿರುವ ನೋರ್ ಗಿಲೋನ್ ಅವರ ವಿರೋಧದ ಅಭಿಪ್ರಾಯ ಜಾಗತಿಕವಾಗಿ ಬಲಪಂಥೀಯ ಟ್ರೋಲ್‌ಗಳು ಹೇಗೆ ಅಭಿಪ್ರಾಯಗಳನ್ನು ನಿಯಂತ್ರಣ ಮಾಡುತ್ತವೆ ಎಂಬುದಕ್ಕೆ ಸಾಕ್ಷಿಯಂತಿದೆ. ಜೊತೆಗೆ ಈ ಹೇಳಿಕೆಯಿಂದ ಭಾರತೀಯ ಮೂಲದಿಂದ ಎದುರಾಗಬಹುದಾದ ಹಲವಷ್ಟು ಸಮಸ್ಯೆಗಳನ್ನು ತಾನು ಎದುರಿಸಬೇಕು ಎಂಬುದನ್ನು ನೋರ್ ಗಿಲೋನ್ ಪರೋಕ್ಷವಾಗಿ ಹೇಳಿದಂತಿದೆ.

ನಡಾವ್ ಲ್ಯಾಪಿಡ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಬಾಲಿವುಡ್ ನಟ ಅನುಪಮ್ ಖೇರ್ ಸೇರಿದಂತೆ ಹಲವು ನಟರು, ನಿರ್ದೇಶಕರು ಆಕ್ರೋಶ ಹೊರಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page