Thursday, June 20, 2024

ಸತ್ಯ | ನ್ಯಾಯ |ಧರ್ಮ

ಪುತ್ತೂರು ಗಡೀಪಾರು ನೋಟಿಸ್‌ | ಆ ಕಾರ್ಯಕರ್ತರನ್ನಲ್ಲ ನನ್ನನ್ನು ಗಡಿಪಾರು ಮಾಡಿ: ಕಟೀಲ್

ಮಂಗಳೂರು: ನೈತಿಕ ಪೊಲೀಸ್‌ಗಿರಿ ಮಾಡಿದ ಆರೋಪದಡಿ ಐವರು ಬಜರಂಗದಳ ಕಾರ್ಯಕರ್ತರನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸದ ನಳಿನ್‌ಕುಮಾರ್‌ ಕಟೀಲ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬಜರಂಗದಳದ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಅವರಿಗೆ ಪುತ್ತೂರು ಸಹಾಯಕ ಪೊಲೀಸ್ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ಇದೇ ತಿಂಗಳ 22ರಂದು ಕಮಿಷನರೇಟ್‌ಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಲತೇಶ್ ಗುಂಡ್ಯ ಹೊರತುಪಡಿಸಿ ಉಳಿದ ನಾಲ್ವರ ವಿರುದ್ಧ ಒಂದೇ ರೀತಿಯ ಪ್ರಕರಣವಿದೆ. ಆದರೆ, ಸಂಸದರು ಗಡೀಪಾರು ನೋಟಿಸ್ ನೀಡಿರುವುದು ಗಂಭೀರ ವಿಷಯವೆಂದು ಪ್ರತಿಕ್ರಿಯಿಸಿದ್ದಾರೆ.

ಆರೋಪಿಗಳು ಗುರುವಾರ ಸಂಸದರನ್ನು ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದರು. ಸಂಸದ ಕಟೀಲು ನೇರವಾಗಿ ಸಹಾಯಕ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಗಡೀಪಾರು ಮಾಡುವುದಾಗಿ ಹೇಳುವುದು ಸರಿಯಲ್ಲ ಎಂದರು. ಒಂದು ವೇಳೆ ಹಾಗೆ ಮಾಡುವುದಾದರೆ ಮೊದಲು ನನ್ನನ್ನು ಜಿಲ್ಲೆಯಿಂದ ಹೊರಹಾಕಲಿ ಎಂದರು.

ಜಿಲ್ಲಾ ಪೊಲೀಸರು ಕಾಂಗ್ರೆಸ್‌ ನಾಯಕರ ತಾಳಕ್ಕೆ ಕುಣಿಯುತ್ತಿದ್ದಾರೆಂದು ಕಟೀಲ್‌ ಆರೋಪಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧವೂ ಪ್ರಕರಣಗಳಿವೆ ಅವರನ್ನು ಗಡೀಪಾರು ಮಾಡಲಾಗಿದೆಯೇ ಎಂದು ಅವರು ಪ್ರಶ್ನಿಸಿದರು. ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗುವಾಗ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಹಿಂದೂ ಸಂಘಟನೆಯವರನ್ನೇ ಗುರಿ ಮಾಡಿ ಇಲಾಖೆ ಶಿಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು. ಇದು ಹೀಗೆ ಮುಂದುವರೆದರೆ ಪ್ರತಿಭಟಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು