ಹೊಸದೆಹಲಿ: ದೆಹಲಿ ಲಿಕ್ಕರ್ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಲಕ್ಷಿಸಿದ್ದಾರೆ.
ಇಡಿ ವಿಚಾರಣೆಗೆ ಅವರು ಗೈರು ಹಾಜರಾಗಿದ್ದರು. ಬದಲಾಗಿ, ಅವರು ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಇಡಿ ತನಿಖೆಗೆ ಹಾಜರಾಗುವಂತೆ ನೀಡಿರುವ ಸಮನ್ಸ್ ಹಿಂಪಡೆಯಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಇಡಿ ಅವರಿಗೆ ನೀಡಿದ ಸಮನ್ಸ್ ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಅವರು ಆರೋಪಿಸಿದರು. ಇಡಿ ಸಮನ್ಸ್‌ಗೆ ಪ್ರತಿಯಾಗಿ ಕೇಜ್ರಿವಾಲ್ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ತಡೆಯುವ ಉದ್ದೇಶದಿಂದ ಇಡಿ ಸಮನ್ಸ್ ಜಾರಿ ಮಾಡಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿಯ ಪ್ರಚೋದನೆಯ ಮೇರೆಗೆ ಇಡಿ ತಮಗೆ ಸಮನ್ಸ್ ನೀಡಿದೆ ಎಂದೂ ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ಇಡಿ ಕಚೇರಿಯಲ್ಲಿ ಕೇಜ್ರಿವಾಲ್ ಹಾಜರಿರುವ ಉದ್ದೇಶದಿಂದ ದೆಹಲಿಯ ಇಡಿ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಎಎಪಿ ಕಾರ್ಯಕರ್ತರು ಇಡಿ ಕಚೇರಿ ಬಳಿ ಸೇರದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.