ಇ-20 ವಿರುದ್ಧ ಇಂದು ಮೋದಿ ಮನೆಗೆ ಮಾರ್ಚ್: ಎಎಪಿ ಮುಖ್ಯಸ್ಥ ಕೇಜ್ರಿವಾಲ್ ಘೋಷಣೆ

ದೆಹಲಿ: ಇ-20 ಪೆಟ್ರೋಲ್ ವಿರುದ್ಧ ಇಂದು ನೂರು ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಮಾರ್ಚ್ ನಡೆಸಿ ಮನವಿ ಪತ್ರಗಳನ್ನು ಸಲ್ಲಿಸುವುದಾಗಿ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದೇಶದಲ್ಲಿ ಇ-20 ಪೆಟ್ರೋಲ್ ಮಾರಾಟ ಮಾಡುವುದರಿಂದ ಗ್ರಾಹಕರಿಗೆ ತೀವ್ರ ನಷ್ಟವಾಗುತ್ತಿದೆ. ಮೈಲೇಜ್ ಕಡಿಮೆಯಾಗುತ್ತಿದ್ದು, ಎಂಜಿನ್‌ಗಳು ರಿಪೇರಿಗೆ ಬರುತ್ತಿವೆ. 2023 ಕ್ಕಿಂತ ಹಳೆಯ ವಾಹನಗಳ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಇ-20 ಬಳಕೆಯನ್ನು ಮುಂದುವರಿಸುತ್ತಿರುವುದರ ಹಿಂದೆ ರಹಸ್ಯ ಕಾರ್ಯಸೂಚಿಯಿದೆ (ಎಜೆಂಡಾ),” ಎಂದು ಆರೋಪಿಸಿದರು.

“ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಒತ್ತಡಕ್ಕೆ ಮಣಿದು ಭಾರತವು ಯುಎಸ್‌ನಿಂದ ಎಥನಾಲ್ ಖರೀದಿಸುತ್ತಿದೆ. ನಾನು ಪತ್ರ ಬರೆದರೂ ಮೋದಿ ಸ್ಪಂದಿಸಲಿಲ್ಲ. ಅದಕ್ಕಾಗಿಯೇ ಅವರ ಮನೆಗೆ ತೆರಳಿ ದೂರು ನೀಡಲಿದ್ದೇನೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಶುದ್ಧ (ಪ್ಯೂರ್) ಪೆಟ್ರೋಲ್ ಜೊತೆಗೆ ಇ-5 ಮತ್ತು ಇ-10 ಪೆಟ್ರೋಲ್ ಕೂಡ ಮಾರಾಟ ಮಾಡಬೇಕು ಎಂಬುದೇ ನಮ್ಮ ಬೇಡಿಕೆ,” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಇ-20 ಪೆಟ್ರೋಲ್ ದರ ಕಡಿಮೆ ಇರಬೇಕಿತ್ತಾದರೂ, ಇತರ ದೇಶಗಳಲ್ಲಿ ಸಿಗುವ ಶುದ್ಧ ಪೆಟ್ರೋಲ್‌ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ತಾವು ಮೋದಿಯವರಿಗೆ ಸಲ್ಲಿಸಲಿರುವ ಮನವಿ ಪತ್ರಗಳಿಗೆ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರು ಸಹಿ ಹಾಕಿದ್ದು, ಇದನ್ನು ನೋಡಿಯಾದರೂ ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿರುವ ಸಾರ್ವಜನಿಕ ವಿರೋಧವನ್ನು ಸರ್ಕಾರ ಅರ್ಥೈಸಿಕೊಳ್ಳಬೇಕು ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು