ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಜೂನ್ 1ರವರೆಗೆ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಅವರು ಜೂನ್ 2ರಂದು ಶರಣಾಗಬೇಕು.
ಕೇಜ್ರಿವಾಲ್ ಅವರು ತಮ್ಮ ಅರ್ಜಿಯಲ್ಲಿ ತಮ್ಮ ಬಂಧನದ ನಂತರ 7 ಕೆಜಿ ತೂಕವನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೀಟೋನ್ ಲೆವೆಲ್ ಕೂಡ ಹೆಚ್ಚಿದೆ ಈ ರೋಗಲಕ್ಷಣಗಳು ಗಂಭೀರವಾಗಿರಬಹುದು. ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಅವರನ್ನು ಪರೀಕ್ಷಿಸಿದ್ದಾರೆ. ಈಗ PET-CT ಸ್ಕ್ಯಾನ್ ಮತ್ತು ಅನೇಕ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಹೀಗಾಗಿ ಸಿಎಂ ಕೇಜ್ರಿವಾಲ್ ಈ ಪರೀಕ್ಷೆ ನಡೆಸಲು 7 ದಿನಗಳ ಕಾಲಾವಕಾಶ ಕೋರಿದ್ದಾರೆ.
ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ದೆಹಲಿ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಡಿ ಬಂಧಿಸಿತ್ತು. ಕೇಜ್ರಿವಾಲ್ ತಮ್ಮ ಬಂಧನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 10ರಿಂದ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅವರು ಜೂನ್ 2ರಂದು ಶರಣಾಗಬೇಕು.
ಮೇ 17 ರಂದು, ಜಾರಿ ನಿರ್ದೇಶನಾಲಯವು (ಇಡಿ) ಕೇಜ್ರಿವಾಲ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು. ಈ ವೇಳೆ ಸಾಮಾನ್ಯ ಜಾಮೀನಿಗಾಗಿ ಕೆಳ ನ್ಯಾಯಾಲಯವನ್ನು ಸಂಪರ್ಕಿಸಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿತ್ತು.
ಕೇಜ್ರಿವಾಲ್ ಅಲ್ಲದೆ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನಿಖಾ ಸಂಸ್ಥೆ ಮನೀಶ್ ಸಿಸೋಡಿಯಾ ಅವರನ್ನು ಕೂಡ ಬಂಧಿಸಿದೆ. ಅವರು ಈಗ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನೂ ಬಂಧಿಸಲಾಗಿತ್ತು. ಆದರೆ, ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ.