Friday, October 4, 2024

ಸತ್ಯ | ನ್ಯಾಯ |ಧರ್ಮ

ಸಿಎಂ ನಿವಾಸವನ್ನು ಖಾಲಿ ಮಾಡಿದ ಅರವಿಂದ್ ಕೇಜ್ರಿವಾಲ್

ದೆಹಲಿ: ಆಪ್ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ನಿವಾಸವನ್ನು ಖಾಲಿ ಮಾಡಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದ 6 ಫ್ಲಾಗ್‌ ಸ್ಟಾಫ್ ರಸ್ತೆಯಲ್ಲಿರುವ ಮನೆಯಿಂದ ಶುಕ್ರವಾರ ಅವರು ತಮ್ಮ ಕುಟುಂಬದೊಂದಿಗೆ ಹೊರಗೆ ಬಂದರು.

ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಅವರು ಇನ್ಮುಂದೆ ಎಎಪಿ ಪಕ್ಷದ ಕೇಂದ್ರ ಕಚೇರಿ ಬಳಿ ಇರುವ ಬಂಗಲೆಯಲ್ಲಿ ವಾಸವಾಗಲಿದ್ದಾರೆ. ಪಂಜಾಬ್‌ನ ಎಎಪಿ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರಿಗೆ ಅಧಿಕೃತವಾಗಿ ಮಂಜೂರು ಮಾಡಲಾದ ಕಟ್ಟಡವು ಫಿರೋಜ್‌ ಶಾ ರಸ್ತೆಯಲ್ಲಿದೆ. ಮದ್ಯ ಹಗರಣ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅತಿಶಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಕೇಜ್ರಿವಾಲ್ ಇತ್ತೀಚೆಗೆ ಪಕ್ಷದ ಕಾರ್ಯಕರ್ತರ ಬಳಿ ಸಿಎಂ ನಿವಾಸವನ್ನು ಖಾಲಿ ಮಾಡುವುದಾಗಿ ಹೇಳಿದ್ದರು. ಆ ಸಂದರ್ಭದಲ್ಲಿ ಅನೇಕ ಶಾಸಕರು ಮತ್ತು ಕಾರ್ಯಕರ್ತರು ತಮ್ಮ ಮನೆಗೆ ಬಂದು ತಮ್ಮೊಂದಿಗೆ ಇರುವಂತೆ ಕೇಳಿಕೊಂಡಿದ್ದರು. 2013ರಲ್ಲಿ ಮೊದಲ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅವರು ತಿಲಕ್ ಲೇನ್‌ ಮನೆಯಲ್ಲಿ ತಂಗಿದ್ದರು. 2015ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಫ್ಲಾಗ್‌ ಸ್ಟಾಫ್ ರಸ್ತೆಯಲ್ಲಿರುವ ಮನೆಗೆ ತೆರಳಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page