ಅದಾನಿಗೆ ಮತ್ತೊಂದು ಶಾಕ್ ; ಅದಾನಿ ಗ್ರೂಪ್ ನೊಂದಿಗಿನ ಎಲ್ಲಾ ವ್ಯವಹಾರ ರದ್ದುಗೊಳಿಸಿದ ಕೀನ್ಯಾ

ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗುಜರಾತ್ ಮೂಲದ ಗೌತಮ್ ಅದಾನಿ ವಿರುದ್ದ ಅಮೇರಿಕ ವಂಚನೆ ಮತ್ತು ಲಂಚದ ಆರೋಪದ ನಂತರ ಅವರೊಂದಿಗಿನ ಬಹು ಮಿಲಿಯನ್ ಡಾಲರ್ ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಇಂಧನ ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೋ ಗುರುವಾರ ಹೇಳಿದ್ದಾರೆ.

ಅಮೇರಿಕಾ ಹೆಸರು ಪ್ರಸ್ತಾಪಿಸದೇ.. ‘ತನಿಖಾ ಸಂಸ್ಥೆಗಳು ಹಾಗೂ ವಿವಿಧ ರಾಷ್ಟ್ರಗಳು ಒದಗಿಸಿದ ಇತ್ತೀಚಿನ ಮಾಹಿತಿ ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ತಮ್ಮ ನಿರ್ಧಾರದ ಬಗ್ಗೆ ರುಟೊ ಸ್ಪಷ್ಟನೆ ನೀಡಿದ್ದಾರೆ.

ಅದಾನಿ ಸಮೂಹವು ಕೀನ್ಯಾದಲ್ಲಿ 30 ವರ್ಷಗಳವರೆಗೆ ಏರ್‌ಪೋರ್ಟ್‌ ನಿರ್ವಹಿಸುವ, ಹೆಚ್ಚುವರಿ ರನ್‌ವೇ ಮತ್ತು ಟರ್ಮಿನಲ್ ನಿರ್ಮಾಣ ಸೇರಿದಂತೆ, ರಾಜಧಾನಿ ನೈರೋಬಿಯ ಏರ್‌ಪೋರ್ಟ್‌ ನವೀಕರಣ ಸಂಬಂಧ ಒಪ್ಪಂದಕ್ಕೆ ಸಹಿ ಮಾಡಿತ್ತು ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಕೀನ್ಯಾದಲ್ಲೂ ಈ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಅದಾನಿ ಸಂಸ್ಥೆಯ ವಿರುದ್ಧ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಅಲ್ಲಿನ ಏರ್‌ಪೋರ್ಟ್‌ ಸಿಬ್ಬಂದಿ ಪ್ರತಿಭಟನೆ ಕೂಡ ನಡೆಸಿದ್ದರು ಎನ್ನಲಾಗಿದೆ.

ಈ ನಡುವೆ ನಮ್ಮ ದೇಶದ ನಡುವೆ ನಡೆದ ಒಪ್ಪಂದದಲ್ಲಿ ಯಾವುದೇ ಲಂಚ ವ್ಯವಹಾರ ನಡೆದಿಲ್ಲ ಎಂದು ಕೀನ್ಯಾ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ 2 ಶತಕೋಟಿ ಅಮೆರಿಕನ್ ಡಾಲರ್‌ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವುದು ಹಾಗೂ ಅಮೆರಿಕಾ ಸೇರಿ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿರುವ ಆರೋಪ ಕೂಡ ಅದಾನಿ ಅವರ ಮೇಲಿದೆ.

Related Articles

ಇತ್ತೀಚಿನ ಸುದ್ದಿಗಳು