ಕೇರಳದಲ್ಲೂ ‘ಗ್ಯಾರಂಟಿ’ಗಳ ಮೊರೆ ಹೋದ ಕಾಂಗ್ರೆಸ್: ಕರ್ನಾಟಕ ಮಾದರಿಯಲ್ಲಿ 5 ಯೋಜನೆಗಳ ಘೋಷಣೆ

ಕೋಯಿಕ್ಕೋಡ್: ತೆಲಂಗಾಣದಲ್ಲಿ ‘ಆರು ಗ್ಯಾರಂಟಿ’ಗಳ ಭರವಸೆ ನೀಡಿ ಅಧಿಕಾರಕ್ಕೇರಿದ ಮಾದರಿಯಲ್ಲೇ, ಕೇರಳ ವಿಧಾನಸಭೆ ಚುನಾವಣೆಗೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ‘ಐದು ಗ್ಯಾರಂಟಿ’ಗಳನ್ನು ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಗುರುವಾರ ಕೊಜಿಕೋಡ್‌ನಲ್ಲಿ ಈ ಮಹತ್ವದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಈ ಪ್ರಣಾಳಿಕೆಯಲ್ಲಿ ಬಡವರ ಮಾಸಿಕ ಪಿಂಚಣಿಯನ್ನು 3,000 ರೂಪಾಯಿಗಳಿಗೆ ಏರಿಕೆ ಮಾಡುವುದು, ಪ್ರತಿ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ವಿಮೆ ನೀಡುವುದು ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ. ಅಲ್ಲದೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಮಾಸಿಕ 1,000 ರೂಪಾಯಿ ಧನಸಹಾಯ ಹಾಗೂ ನಿರುದ್ಯೋಗಿ ಯುವಕರಿಗೆ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಗಳನ್ನು ಕಾಂಗ್ರೆಸ್ ಘೋಷಿಸಿದೆ.


ಕರ್ನಾಟಕ ಮತ್ತು ತೆಲಂಗಾಣಕ್ಕೆ ಹೋಲಿಸಿದರೆ ಕೇರಳದ ಆರ್ಥಿಕ ಸ್ಥಿತಿ (GSDP) ಭಿನ್ನವಾಗಿದ್ದು, ಉಚಿತ ಬಸ್ ಪ್ರಯಾಣದಂತಹ ಯೋಜನೆಗಳು ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆಯಾಗಲಿವೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ತೆಲಂಗಾಣದಲ್ಲಿ ಇಂದಿರಮ್ಮ ಮನೆಗಳ ಹೆಸರಲ್ಲಿ ಬಡವರ ಮನೆಗಳನ್ನು ತೆರವುಗೊಳಿಸುತ್ತಿರುವ ಸರ್ಕಾರ, ಕೇರಳದಲ್ಲಿ ಯಾವ ಆಧಾರದ ಮೇಲೆ ಮತ ಕೇಳುತ್ತಿದೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಕೇರಳ ವಿಧಾನಸಭೆ ಚುನಾವಣೆ ಏಪ್ರಿಲ್ 23 ರಂದು ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು