Monday, June 17, 2024

ಸತ್ಯ | ನ್ಯಾಯ |ಧರ್ಮ

ಪ್ರಚಾರ ಗೀತೆ: ಕೇಂದ್ರದ ಭ್ರಷ್ಟ ಸರ್ಕಾರವನ್ನು ಬೀಳಿಸುವಂತೆ ಕರೆ ಕೊಟ್ಟ ಕೇರಳ ಬಿಜೆಪಿ!

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಭಾರೀ ಮುಖಭಂಗವಾಗಿದ್ದು, ಪಕ್ಷದ ಕೇರಳ ರಾಜ್ಯ ಘಟಕವು ಬಿಡುಗಡೆ ಮಾಡಿರುವ ಪ್ರೋಮೋ ಸಾಂಗ್‌ನಲ್ಲಿ ‘ಭ್ರಷ್ಟಾಚಾರಕ್ಕೆ ಹೆಸರಾಗಿರುವ ಕೇಂದ್ರದ ಸರ್ಕಾರವನ್ನು’ ಸೋಲಿಸುವಂತೆ ಜನರಿಗೆ ಕರೆ ನೀಡಲಾಗಿದೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ರಾಜ್ಯ ಪಕ್ಷದ ನಾಯಕತ್ವದ ಗಮನಕ್ಕೆ ಬಂದಿದ್ದು, ರಾಜ್ಯ ನಾಯಕತ್ವವು ಈ ತಪ್ಪಿಗೆ ಕಾರಣರಾದವರಿಂದ ವಿವರಣೆಯನ್ನು ಕೇಳಿದೆ.

ಮೂಲಗಳನ್ನು ಉಲ್ಲೇಖಿಸಿ, ಪ್ರೋಮೋ ವಿಡಿಯೋದಲ್ಲಿ ಬಳಸಲಾದ ಆಡಿಯೊ (ಹಾಡು) ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ದಿನಗಳ ಹಿಂದಿನದು ಎಂದು ಪತ್ರಿಕೆಯೊಂದು ಹೇಳಿದೆ. 2014ರ ಚುನಾವಣೆಗೆ ಪೂರ್ವಭಾವಿಯಾಗಿ ಈ ಹಾಡನ್ನು ಸಿದ್ಧಪಡಿಸಲಾಗಿತ್ತು.

ಮತ್ತೊಂದೆಡೆ, ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಫೆಬ್ರವರಿ 20ರಂದು ‘ಎಸ್‌ಸಿ ಮತ್ತು ಎಸ್‌ಟಿ ನಾಯಕರೊಂದಿಗೆ’ ಊಟ ಮಾಡಲಿದ್ದಾರೆ ಎಂಬ ಪೋಸ್ಟರ್‌ನ ವಿವಾದವೂ ಭುಗಿಲೆದ್ದಿದೆ. ಪೋಸ್ಟರನ್ನು ಟೀಕಿಸಿದವರು ಪೋಸ್ಟರ್ ಬಿಜೆಪಿ ನಾಯಕತ್ವದ ‘ಮೇಲ್ಜಾತಿ ಮನಸ್ಥಿತಿ’ಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಆದರೆ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳು ಬಿಜೆಪಿಗೆ ಹತ್ತಿರವಾಗುತ್ತಿದೆ. ಇದರಿಂದ ಕಂಗಾಲಾಗಿರುವ ವಿರೋಧ ಪಕ್ಷಗಳು ಸೃಷ್ಟಿಸುತ್ತಿರುವ ಅನಗತ್ಯ ವಿವಾದ ಎಂದು ಸುರೇಂದ್ರನ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಕೇರಳದ ಮೇಲೆ ತನ್ನ ದೃಷ್ಟಿ ನೆಟ್ಟಿದೆ, ರಾಜ್ಯದಲ್ಲಿ ಚುನಾವಣಾ ಗೆಲುವು ದೀರ್ಘಕಾಲದಿಂದ ಪಕ್ಷಕ್ಕೆ ಲಭಿಸುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಕೇರಳದ ದೇವಾಲಯಗಳಿಗೆ ಭೇಟಿ ನೀಡಿರುವುದು ಮತ್ತು ರಾಜ್ಯದಲ್ಲಿ ಸುಮಾರು 20% ಕ್ರಿಶ್ಚಿಯನ್ ಸಮುದಾಯಕ್ಕೆ ಪಕ್ಷದ ಸಂಪರ್ಕ ಕಾರ್ಯಕ್ರಮಗಳೊಂದಿಗೆ, ಈ ಬಾರಿ ಚುನಾವಣಾ ಸೋಲನ್ನು ದಾಟಿಕೊಳ್ಳಲು ಪಕ್ಷವು ಆಶಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು