Home ದೇಶ ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ ಮತ್ತು ಕಿರುಕುಳ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ದಲಿತ ಪಿಎಚ್‌ಡಿ ಸಂಶೋಧಕಿ ಅನಘಾ...

ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ ಮತ್ತು ಕಿರುಕುಳ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ದಲಿತ ಪಿಎಚ್‌ಡಿ ಸಂಶೋಧಕಿ ಅನಘಾ ಶಶಿ

0

ತಿರುವನಂತಪುರಂ: ಕೇರಳದ ತುಂಚತ್ ಎಳುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆ ವಿರುದ್ಧ ಕಳೆದ 22 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ದಲಿತ ಪಿಎಚ್‌ಡಿ ಸಂಶೋಧಕಿ ಅನಘಾ ಶಶಿ, ಇದೀಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಮಾರ್ಚ್ 2024ರಲ್ಲಿ ಪರಿಸರ ವಿಜ್ಞಾನ ವಿಭಾಗದಲ್ಲಿ ಸಂಶೋಧನೆಗೆ ಸೇರಿದ ಅನಘಾ, ನಿಗದಿತ ಕೋರ್ಸ್‌ವರ್ಕ್ ಪೂರ್ಣಗೊಳಿಸಿದ ಹೊರತಾಗಿಯೂ ಡಾಕ್ಟರಲ್ ಸಮಿತಿಯನ್ನು ಕರೆಯದೆ, ವಾರ್ಷಿಕ ಪ್ರಗತಿ ವರದಿಯನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ಕೇರಳ ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯಿಂದ ತಮಗೆ ಸಿಗಬೇಕಾದ ಫೆಲೋಶಿಪ್‌ಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.

ತಮಗೆ ಸಂಶೋಧನೆಗೆ ಸೂಕ್ತ ಕುರ್ಚಿ ಅಥವಾ ಕೆಲಸದ ಸ್ಥಳವನ್ನು ನೀಡದೆ ಕಚೇರಿ ಕಸ ಗುಡಿಸುವುದು, ಹಳೆಯ ದಾಖಲೆಗಳನ್ನು ಜೋಡಿಸುವುದು ಮುಂತಾದ ಅನ್ಯ ಕೆಲಸಗಳನ್ನು ಹೇರಲಾಗುತ್ತಿತ್ತು ಎಂದು ಅವರು ದೂರಿದ್ದಾರೆ. “ಕುರ್ಚಿ ಇಲ್ಲದಿದ್ದರೆ ಕಾರಿಡಾರ್‌ನಲ್ಲಿ ನಿಂತುಕೋ” ಎಂದು ಸಂಶೋಧನಾ ಮಾರ್ಗದರ್ಶಿ ಅರುಣ್ ಬಾಬು ವಿ. ಅವಮಾನಿಸಿದ್ದರು ಹಾಗೂ ಯುಜಿಸಿ-ನೆಟ್ ಅರ್ಹತೆ ಮತ್ತು ಫೆಲೋಶಿಪ್ ಪಡೆದಾಗ ಜಾತಿ ಆಧಾರಿತ ನಿಂದನೆಗಳನ್ನು ಮಾಡಿ, ಪಿಎಚ್‌ಡಿ ಅರ್ಧಕ್ಕೆ ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ವಿಶ್ವವಿದ್ಯಾಲಯವು ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಕೇರಳದ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ಅವರು ವಿದ್ಯಾರ್ಥಿನಿಯೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಕ್ರಮದ ಭರವಸೆ ನೀಡಿದ್ದಾರೆ. ಆದರೆ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ರೋಹಿತ್ ವೇಮುಲಾ ಕಾಯ್ದೆಯ ಮಾದರಿಯ ಕಾನೂನು ಜಾರಿಗೊಳಿಸಬೇಕು ಮತ್ತು ಜಾತಿ ತಾರತಮ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂಬ ತಮ್ಮ ಬೇಡಿಕೆಗಳು ಈಡೇರುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಅನಘಾ ಶಶಿ ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version