Tuesday, January 14, 2025

ಸತ್ಯ | ನ್ಯಾಯ |ಧರ್ಮ

ಭಾರತಕ್ಕೆ ಕರೆತರಲು ಸತತ ಮನವಿ ಮಾಡಿದ್ದ ರಷ್ಯಾದ ಸೇನೆಯಲ್ಲಿರುವ ಕೇರಳದ ವ್ಯಕ್ತಿ ರಷ್ಯಾ-ಉಕ್ರೇನ್‌ ಯುದ್ದದಲ್ಲಿ ಸಾವು

ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಭಾರತಕ್ಕೆ ವಾಪಾಸು ಕರೆತರಲು ನೆರವಾಗುವಂತೆ ಹಲವಾರು ಮನವಿಗಳನ್ನು ಮಾಡಿದ್ದ ರಷ್ಯಾದ ಸೇನೆಯಲ್ಲಿ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ರಷ್ಯಾ ಮತ್ತು ಉಕ್ರೇನ್ ಯುದ್ಧದ ಮುಂಚೂಣಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮೃತ ವ್ಯಕ್ತಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿ ನಿವಾಸಿ 32 ವರ್ಷದ ಬಿನಿಲ್ ಟಿಬಿ ಎಂದು ಗುರುತಿಸಲಾಗಿದೆ. ಇದೇ ದಾಳಿಯಲ್ಲಿ ಬಿನಿಲ್ ಅವರ ಸಂಬಂಧಿ 27 ವರ್ಷದ ಜೈನ್ ಟಿಕೆ ಕೂಡ ಗಾಯಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಡ್ರೋನ್ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂಬ ಸಂದೇಶ ಬಿನಿಲ್ ಕುಟುಂಬಕ್ಕೆ ಬಂದಿತ್ತು. ಕುಟುಂಬಕ್ಕೆ ಬಿನಿಲ್ ಅಥವಾ ಜೈನ್ ರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ ನಂತರ ಬಿನಿಲ್ ಅವರ ಪತ್ನಿ ಜೋಯ್ಸಿ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ, ಬಿನಿಲ್ ಮತ್ತು ಜೈನ್ ಟಿಕೆ ಮನೆಗೆ ವಾಪಾಸು ಬರಲು ಪ್ರಯತ್ನಿಸಿ ಹತಾಶರಾಗಿದ್ದರು. ಬಿನಿಲ್ ಕಳೆದ ತಿಂಗಳಷ್ಟೇ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಸರಣಿ ಧ್ವನಿ ಸಂದೇಶಗಳ ಮೂಲಕ ಮಾತನಾಡಿದ್ದರು ಎಂದು ಆ ಪತ್ರಿಕೆ ಉಲ್ಲೇಖಿಸಿದೆ.

“ಮನೆಗೆ ಮರಳುವ ಪ್ರಯತ್ನದಲ್ಲಿ ಸೆಪ್ಟೆಂಬರ್‌ನಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಬಾಗಿಲುಗಳನ್ನು ಬಡಿದು ವಿಫಲರಾಗಿದ್ದೇವೆ ಎಂದು ಬಿನಿಲ್ ಹೇಳಿದ್ದಾರೆ” ಎಂದು ವರದಿ ಹೇಳಿದೆ.

“ಮಾನಸಿಕವಾಗಿ ಮತ್ತು ದೈಹಿಕವಾಗಿ ನಾವು ದಣಿದಿದ್ದೇವೆ” ಎಂದು ಬಿನಿಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ತಮ್ಮ ಕೊನೆಯ ಸಂದೇಶದಲ್ಲಿ ಬಿನಿಲ್ ಅವರು ತನ್ನನ್ನು ಯುದ್ಧದ ಮುಂಚೂಣಿಗೆ ತೆರಳಲು ಒತ್ತಾಯಿಸುತ್ತಿದ್ದಾರೆ ಎಂದಿರುವುದು ವರದಿಯಾಗಿದೆ.

“ನಾವು ಈಗ ರಷ್ಯಾ ಆಕ್ರಮಿತ ಉಕ್ರೇನ್ ಪ್ರದೇಶದಲ್ಲಿ ಕಷ್ಟಕರವಾದ ಭೂಪ್ರದೇಶದಲ್ಲಿದ್ದೇವೆ. ಒಪ್ಪಂದವು ಒಂದು ವರ್ಷಕ್ಕೆ ಇತ್ತು ಎಂದು ನಮ್ಮ ಕಮಾಂಡರ್ ಹೇಳುತ್ತಾರೆ. ನಮ್ಮ ಬಿಡುಗಡೆಗಾಗಿ ನಾವು ಸ್ಥಳೀಯ ಕಮಾಂಡರ್‌ಗಳಿಗೆ ಮನವಿ ಮಾಡುತ್ತಿದ್ದೇವೆ. ರಷ್ಯಾದ ಸೇನೆ ನಮಗೆ ಪರಿಹಾರ ನೀಡದ ಹೊರತು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ಅಭಿಪ್ರಾಯಪಟ್ಟಿದೆ. ರಾಯಭಾರ ಕಚೇರಿಯು ನಮ್ಮನ್ನು ರಷ್ಯಾದ ಪ್ರದೇಶಕ್ಕೆ ಹಿಂತಿರುಗಿಸಬೇಕೆಂದು ಹೇಳುತ್ತದೆ,” ಎಂದು ಅವರು ಹೇಳಿದ್ದರು.

ಘಟನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಡಿಸೆಂಬರ್ 6, 2024 ರಂದು ಸಂಸತ್ತಿನ ಉತ್ತರದಲ್ಲಿ, ರಷ್ಯಾದಲ್ಲಿ ಇಲ್ಲಿಯವರೆಗೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ . ಅವರಲ್ಲಿ ತಲಾ ಇಬ್ಬರು ಉತ್ತರ ಪ್ರದೇಶ ಮತ್ತು ಗುಜರಾತ್‌ನವರು; ಹರಿಯಾಣ, ಪಂಜಾಬ್, ಉತ್ತರಾಖಂಡ, ತೆಲಂಗಾಣ, ಕೇರಳ ಮತ್ತು ಒಡಿಶಾದಿಂದ ತಲಾ ಒಬ್ಬರು. ಇದು 11ನೇ ಸಾವು ಆಗಿರುವ ಸಾಧ್ಯತೆ ಇದೆ.

ಕಳೆದ ವರ್ಷ ಜುಲೈನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ರಷ್ಯಾದ ಸೈನ್ಯದಲ್ಲಿ ಹೋರಾಡುತ್ತಿರುವ ಭಾರತೀಯರ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ನಂತರ, ರಷ್ಯಾ ತನ್ನ ಸೇನೆಯಲ್ಲಿ ಹೋರಾಡುತ್ತಿರುವ ಅಂತಹ ಎಲ್ಲ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತೀಯರು ಉದ್ದೇಶಪೂರ್ವಕವಾಗಿ ರಷ್ಯಾದ ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ರಷ್ಯಾದ ಹೇಳಿಕೆಯನ್ನು ಸರ್ಕಾರ ಅನುಮೋದಿಸುವುದಿಲ್ಲ ಎಂದು ಆಗಸ್ಟ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸತ್ತಿನಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಷ್ಯಾದ ರಾಯಭಾರ ಕಚೇರಿಯು ಭಾರತೀಯ ನಾಗರಿಕರನ್ನು ಮಿಲಿಟರಿ ಸೇವೆಗೆ ಸೇರಿಸಿಕೊಳ್ಳಲು ತಾನು ಯಾವುದೇ ನೇಮಕಾತಿ ಪ್ರಯತ್ನಗಳಲ್ಲಿ, ವಿಶೇಷವಾಗಿ “ಮೋಸದ ಯೋಜನೆಗಳಲ್ಲಿ” ತೊಡಗಿಸಿಕೊಂಡಿಲ್ಲ ಎಂದು ಹೇಳಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಏಪ್ರಿಲ್ 2024 ರಿಂದ “ಭಾರತ ಸೇರಿದಂತೆ ಹಲವಾರು ವಿದೇಶಿ ದೇಶಗಳ ನಾಗರಿಕರನ್ನು ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಮಿಲಿಟರಿ ಸೇವೆಗೆ ಸೇರಿಸುವುದನ್ನು ನಿಲ್ಲಿಸಿದೆ” ಎಂದು ಹೇಳಿಕೊಂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page