Home ಹವಾಮಾನ ಕೇರಳದಲ್ಲಿ ನೈಋತ್ಯ ಮುಂಗಾರು ಪ್ರವೇಶ ವಿಳಂಬ ಸಾಧ್ಯತೆ: ಜೂನ್ 11ರ ನಂತರವಷ್ಟೇ ಮಳೆ ಚುರುಕುಗೊಳ್ಳುವ ಸಾಧ್ಯತೆ

ಕೇರಳದಲ್ಲಿ ನೈಋತ್ಯ ಮುಂಗಾರು ಪ್ರವೇಶ ವಿಳಂಬ ಸಾಧ್ಯತೆ: ಜೂನ್ 11ರ ನಂತರವಷ್ಟೇ ಮಳೆ ಚುರುಕುಗೊಳ್ಳುವ ಸಾಧ್ಯತೆ

0

ನೈಋತ್ಯ ಮುಂಗಾರು ಈ ಬಾರಿ ಕೊಂಚ ಮುಂಚಿತವಾಗಿಯೇ ಆರಂಭವಾಗಬಹುದು ಎಂದು ಈ ಹಿಂದೆ ಅಂದಾಜಿಸಲಾಗಿದ್ದರೂ, ಅದರ ಇತ್ತೀಚಿನ ಮುನ್ಸೂಚನೆಯು ಮುಂಗಾರು ಪ್ರವೇಶ ವಿಳಂಬವಾಗುವ ಸೂಚನೆ ನೀಡಿದೆ. ಹೊಸ ವರದಿಯ ಪ್ರಕಾರ, ಮೇ 28 ರಿಂದ ಜೂನ್ 4 ರ ನಡುವೆ ಕೇರಳದಲ್ಲಿ ಬಹುತೇಕ ಒಣ ಹವೆ ಇರಲಿದ್ದು, ಜೂನ್ 11 ರ ನಂತರವಷ್ಟೇ ಮುಂಗಾರು ಮಳೆ ದೇಶದಲ್ಲಿ ಚುರುಕುಗೊಳ್ಳುವ ನಿರೀಕ್ಷೆಯಿದೆ.

ಕೇರಳದಲ್ಲಿ ಮುಂಗಾರು ವಿಳಂಬವಾಗಲು ಪ್ರಮುಖವಾಗಿ ಎರಡು ಜಾಗತಿಕ ಹವಾಮಾನ ಬದಲಾವಣೆಗಳು ಕಾರಣವಾಗಿವೆ. ಪಶ್ಚಿಮ ಪೆಸಿಫಿಕ್ ಮಹಾಸಾಗರದಲ್ಲಿ ತೀವ್ರಗೊಳ್ಳುತ್ತಿರುವ ತೈಫೂನ್ ಚಂಡಮಾರುತವು ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಗಣನೀಯ ಪ್ರಮಾಣದ ತೇವಾಂಶವನ್ನು ತನ್ನತ್ತ ಸೆಳೆಯುತ್ತಿದೆ. ಇದರೊಂದಿಗೆ ಲಕ್ಷದ್ವೀಪ ಪ್ರದೇಶದ ಮೇಲಿರುವ ಚಂಡಮಾರುತದ ಸುಳಿಗಾಳಿಯು ಕೇರಳದ ಭೂಭಾಗದಲ್ಲಿ ಹೆಚ್ಚಿನ ಮಳೆಯಾಗದಂತೆ ತಡೆಯುತ್ತಿದೆ.

ಸಾಮಾನ್ಯವಾಗಿ ಮುಂಗಾರು ಜೂನ್ 1 ರ ಸುಮಾರಿಗೆ ಕೇರಳವನ್ನು ಪ್ರವೇಶಿಸುತ್ತದೆ. ಹವಾಮಾನ ನಿಯಮಗಳ ಪ್ರಕಾರ, ನಿಗದಿಪಡಿಸಲಾದ 14 ಪ್ರಮುಖ ಕೇಂದ್ರಗಳ ಪೈಕಿ ಶೇಕಡಾ 60 ರಷ್ಟು ಹವಾಮಾನ ಕೇಂದ್ರಗಳಲ್ಲಿ ಸತತ ಎರಡು ದಿನಗಳ ಕಾಲ 2.5 ಮಿಮೀ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಬೇಕು. ಮಂಗಳೂರು ಸೇರಿದಂತೆ ಈ ಕೇಂದ್ರಗಳಲ್ಲಿ ಪಶ್ಚಿಮ ಮಾರುತಗಳ ತೀವ್ರತೆ ಮತ್ತು ಮೋಡ ಕವಿದ ವಾತಾವರಣ ಸ್ಥಿರವಾಗಿದ್ದಾಗ ಮುಂಗಾರು ಪ್ರವೇಶ ಅಧಿಕೃತವಾಗಿ ಘೋಷಣೆಯಾಗುತ್ತದೆ.

ಇದೇ ಅವಧಿಯಲ್ಲಿ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಸದ್ಯ ಇರುವ ತೀವ್ರ ಬಿಸಿಗಾಳಿಯ ವಾತಾವರಣವು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 31 ರವರೆಗೆ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಬಲವಾದ ಗಾಳಿಯೊಂದಿಗೆ ಸಾಧಾರಣದಿಂದ ತೀವ್ರ ಸ್ವರೂಪದ ಗುಡುಗು ಸಹಿತ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಯಿದೆ.

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ಪ್ರಸಕ್ತ ಮುಂಗಾರು ಆರಂಭವು ದುರ್ಬಲವಾಗಿರಲಿದ್ದು, ತದನಂತರವೂ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಸದ್ಯ ಮುಂಗಾರು ಪೂರ್ವ ಮಳೆ ಆಗುತ್ತಿದ್ದರೂ, ಮುಂಗಾರಿನ ಅಲೆಯನ್ನ ಮುನ್ನಡೆಸುವ ಯಾವುದೇ ಬಲವಾದ ಹವಾಮಾನ ವ್ಯವಸ್ಥೆ ಗೋಚರಿಸುತ್ತಿಲ್ಲ. ಪ್ರಸ್ತುತ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪ್ರಭಾವ ಹೆಚ್ಚಾಗುವ ಸಾಧ್ಯತೆಗಳೂ ದಟ್ಟವಾಗಿವೆ.

You cannot copy content of this page

Exit mobile version