Sunday, June 16, 2024

ಸತ್ಯ | ನ್ಯಾಯ |ಧರ್ಮ

 ಕೇರಳ ಸ್ಟೋರಿ: ʼಇಸ್ಲಾಮೊಫೋಬಿಯಾʼ ದುರುದ್ದೇಶದ ಸುಳ್ಳಿನ ಕಂತೆ

1925ರಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬರೆದ, ಮೈನ್ ಕಾಂಫ್ (ನನ್ನ ಹೊರಾಟ) ಎನ್ನುವ ಪುಸ್ತಕದಲ್ಲಿ ಆತ ದ ಬಿಗ್ ಲೈ ಎನ್ನುವ ಒಂದು ಪ್ರೊಪಗ್ಯಾಂಡಾ ತಂತ್ರದ ಬಗ್ಗೆ ವಿವರಣೆ ಇದೆ.  ‘ಪ್ರೊಪಗ್ಯಾಂಡಾ’ ಎಂದರೆ, ಒಬ್ಬ ರಾಜಕೀಯ ನಾಯಕ, ಪಕ್ಷ, ಸಿದ್ಧಾಂತ ಇತ್ಯಾದಿಗಳಿಗೆ ಬೆಂಬಲವನ್ನು ಗಳಿಸಲು ಬಳಸಲಾಗುವ ಸುಳ್ಳು ಅಥವಾ ಉತ್ಪ್ರೇಕ್ಷಿತ ಮಾಹಿತಿ ಮತ್ತು ವಿಚಾರಗಳನ್ನು ಪ್ರಚಾರ ಮಾಡುವ ಒಂದು ವ್ಯವಸ್ಥಿತ ಯೋಜನೆ.

ಈ ಕುರಿತು ಬರೆಯುತ್ತಾ ಅಡಾಲ್ಫ್ ಹಿಟ್ಲರ್ ಹೇಳುತ್ತಾನೆ, ‘ಜನರನ್ನು ಮರಳು ಮಾಡಲು ಎಷ್ಟು ದೊಡ್ಡ ಸುಳ್ಳು ಹೇಳಬೇಕು ಎಂದರೆ, ‘ಆಯ್, ಇಷ್ಟು ದೊಡ್ಡ ಸುಳ್ಳು ಯಾರ‍್ರೀ ಹೇಳ್ತಾರೆ, ಇವರು ಹೇಳ್ತಾರೆ ಅಂದಮೆಲೆ ಇದು ನಿಜಾನೇ ಇರಬೇಕು’ ಅಂತ ಜನ ನಂಬುವುದಕ್ಕೆ ಶುರು ಮಾಡಬೇಕು. ಸುಳ್ಳು ದೊಡ್ಡದಾಗಿರಬೇಕು, ಅಷ್ಟೇ ಅಲ್ಲ, ಅದನ್ನು ಯಾವುದೇ ಎಗ್ಗಿಲ್ಲದೇ, ಆತ್ಮವಿಶ್ವಾಸದಿಂದ ಹೇಳಬೇಕು. ಆಗ ಜನ ಅದನ್ನು ನಿಜ ಅಂತ ನಂಬ್ತಾರೆ! ತಾವೂ ಅದನ್ನು ಇನ್ನಷ್ಟು ಜನರಿಗೆ ಹೇಳ್ತಾರೆ. ಸುಳ್ಳು ಹರಡುತ್ತಾ ಕ್ರಮೇಣ ಸತ್ಯ ಆಗಿಬಿಡುತ್ತೆ. ಇದನ್ನೇ ಅನುಸರಿಸಿ ಹಿಟ್ಲರನ ಪ್ರಚಾರ ಖಾತೆ ಮಂತ್ರಿ ಗೊಬೆಲ್ಸ್ ಹೇಳುವ ಇನ್ನೊಂದು ಪ್ರೊಪಗಾಂಡಾ ತಂತ್ರವೆಂದರೆ, ‘ಹೇಳಿದ್ದನ್ನು ಮತ್ತೆ ಮತ್ತೆ ಹೇಳುವುದೂ ಬಹಳ ಮುಖ್ಯ. ಮತ್ತೆ ಮತ್ತೆ ಅದನ್ನು ಕೇಳುವುದರಿಂದ ಜನ ಅದನ್ನು ಕೊನೆಗೂ ನಂಬುತ್ತಾರೆ. ಇನ್ನು ನಾಲ್ಕೈದು ಬೇರೆ ಬೇರೆ ಮೂಲಗಳಿಂದ ಕೇಳಿಸಿಕೊಂಡರಂತೂ ಜನ ಅದನ್ನು ಅಧಿಕೃತ ಸತ್ಯ ಎಂದು ನಂಬಿಬಿಡುತ್ತಾರೆ”

ಅವರ ಪ್ರಕಾರ ಇದಕ್ಕೆ ಪೂರಕವಾದ ಇನ್ನೊಂದು ತಂತ್ರವಿದೆ; ಬರೀ ದೊಡ್ಡದೊಡ್ಡ ಸುಳ್ಳುಗಳನ್ನಷ್ಟೇ ಹೇಳುತ್ತಿದ್ದರೆ ಯಾವತ್ತಾದರೂ ಜನರಿಗೆ ಅನುಮಾನ ಬರಬಹುದು. ಅದ್ದರಿಂದ, ನಡನಡುವೆ ಕೆಲವು ಅರ್ಧ ಸತ್ಯಗಳನ್ನೂ ಸೇರಿಸಿ ಹೇಳಬೇಕು. ಆಗ ಅವುಗಳನ್ನೂ ಸೇರಿಸಿ ಜನ ಎಲ್ಲವನ್ನು ನಂಬಿಬಿಡುತ್ತಾರೆ.

ಇದನ್ನು ಯಾರಿಗೇ ಹೇಳಿನೋಡಿ ಅವರ ಮನಸ್ಸಿನಲ್ಲಿ ಈಗಾಗಲೇ ಒಬ್ಬ ವ್ಯಕ್ತಿಯ ಚಿತ್ರ ಮೂಡುತ್ತಿರುತ್ತದೆ; ಒಂದು ಪಕ್ಷದ ಕಾರ್ಯತಂತ್ರದ ಸುಳಿವು ಸಿಗುತ್ತಿರುತ್ತದೆ. ಭಾರತದ ಮುಸ್ಲಿಮರ ವಿರುದ್ಧ ದ್ವೇಷವನ್ನು ಕಾರುವಂತೆ ಮಾಡಲು ಒಂದು ರಾಜಕೀಯ ಪಕ್ಷ ಮತ್ತು ಅದಕ್ಕೆ ಸೇರಿದ ಸಾಧಾರಣ ಕಾರ್ಯಕರ್ತರಿಂದ ಹಿಡಿದು ಪ್ರಧಾನ ನಾಯಕರವರೆಗೆ ದೇಶದಲ್ಲಿ ಕೋಮು ಧ್ರುವೀಕರಣ ಮಾಡಲು ಸಂವಹನದ ಈ “ದೊಡ್ಡ ಸುಳ್ಳು” ತಂತ್ರವನ್ನು ವ್ಯವಸ್ಥಿತವಾಗಿ ಬಳಸುತ್ತಿರುವುದನ್ನು ನಾವು ಕಾಣುತ್ತೇವೆ. ನಾವೀನ ಮಾತಾಡಲು ಹೊರಟಿರುವ “ಕೇರಳ ಸ್ಟೋರಿ” ಸಿನಿಮಾ ಕೂಡ ಇದೇ ಸೂತ್ರವನ್ನು ಬಳಸುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಹೌ ಟ್ರೂ ಇಸ್ ದ ಕೇರಳ ಸ್ಟೋರಿ.

ಹರಿಯಾಣದಲ್ಲಿ ಹುಟ್ಟಿ ಈಗ ಜರ್ಮನಿಯಲ್ಲಿಯಲ್ಲಿ ನೆಲೆಸಿರುವ ಧೃವ್ ರಾಠಿ ಒಬ್ಬ ನಾಸ್ತಿಕವಾದಿ. ಇವರು ಸೂಕ್ಷ್ಮ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಅಧಿಕೃತ ಅಂಕಿ ಅಂಶಗಳ ಸಹಿತ ವಿಶ್ಲೇಷಣೆ ಮಾಡುವ ಮೂಲಕ ಖ್ಯಾತ ಯುಟ್ಯೂಬರ್ ಆಗಿದ್ದಾರೆ.  ತಮ್ಮ ‘ಹೌ ಟ್ರೂ ಇಸ್ ದ ಕೇರಳ ಸ್ಟೋರಿ’ ಎಂಬ ಕಾರ್ಯಕ್ರಮದಲ್ಲಿ, ಕೇರಳ ಸ್ಟೋರಿ ಎಂಬ ಸಿನಿಮಾದಲ್ಲಿ ಜನರನ್ನು ಹಾದಿತಪ್ಪಿಸಲು ಈ ಮೂರೂ ತಂತ್ರಗಳನ್ನು ಬಳಸಲಾಗಿದೆ ಎನ್ನುತ್ತಾರೆ.

ನಾನು ಇಲ್ಲಿ ಸುದೀಪ್ತೋ ಸೇನ್ ನಿರ್ದೇಶನದ, ಸನ್‌ಶೈನ್ ಪಿಕ್ಚರ್ಸ್ ನಿರ್ಮಾಣದ ಹಿಂದಿ ಸಿನಿಮಾ, “ಕೇರಳ ಸ್ಟೋರಿ”ಯ ಕಲಾತ್ಮಕತೆ, ತಾಂತ್ರಿಕತೆ, ಅಭಿನಯ ಇತ್ಯಾದಿಗಳ ಕುರಿತು ಮಾತಾಡಲು ಹೋಗುತ್ತಿಲ್ಲ. ಬದಲಿಗೆ ಇದೊಂದು ಹಸಿಹಸಿ ರಾಜಕೀಯ ಅಜೆಂಡಾವನ್ನು ಪೂರೈಸಿಕೊಳ್ಳಲೆಂದೇ ಸೃಜನಶೀಲ ಸ್ವಾತಂತ್ರ್ಯ ಎಂಬ ಸೋಗಿನಲ್ಲಿ, ‘ಇಸ್ಲಾಮಾಫೋಬಿಯಾ’ವನ್ನು ಬಿತ್ತುವ ಉದ್ದೇಶದಿಂದ ತಯಾರಿಸಿರುವ ಒಂದು ಚಿತ್ರ ಎಂಬುದನ್ನು ಕೆಲವು ಅಧ್ಯಯನಗಳ ಹಿನ್ನೆಲೆಯಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತಿದ್ದೇನೆ.

ಇಡೀ ಚಿತ್ರ ನಿಂತಿರುವುದೇ ಅದರ ನಾಯಕಿ ಪಾತ್ರ, ಪಾತಿಮಾಳ, “ನನ್ನಂಥ ೩೨,೦೦೦ ಯುವತಿಯರು ಸಿರಿಯಾ ಮತ್ತು ಯಮನ್ ಮರುಳುಗಾಡಿನಲ್ಲಿ ಸಮಾಧಿಯಾಗಿದ್ದಾರೆ.” ಎನ್ನುವ ಹೇಳಿಕೆಯ ಮೇಲೆ. ಬಲವಂತವಾಗಿ ಮತಾಂತರಕ್ಕೆ ಒಳಗಾಗಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅಂಡ್ ಸಿರಿಯಾ (ಐಸಿಸ್) ಸೇರಿ, ಕೊನೆಯಲ್ಲಿ ವಿಶ್ವಸಂಸ್ಥೆಯ ಸೆರೆಮನೆಯೊಂದರಲ್ಲಿ ತನ್ನ ಹೇಳಿಕೆಯನ್ನು ದಾಖಲಿಸುವಾಗ, ‘ಕೇರಳ ಇಸ್ಲಾಮಿಕ್ ಸ್ಟೇಟ್ ಆಗಿಬಿಡುತ್ತದೆ, ದಯವಿಟ್ಟು ತಡೆಯಿರಿ’ ಎಂದು ಆಕೆ ಬೇಡಿಕೊಳ್ಳುವುದರ ಮೇಲೆ.

ಈ ಚಿತ್ರದ ನಿರ್ದೇಶಕ ಈ ದೇಶದಲ್ಲಿ ಬಿಜೆಪಿ ಮತ್ತು ಅದರ ಸಂಘಪರಿವಾರವು ಹುಟ್ಟುಹಾಕಿರುವ ‘ಲವ್ ಜಿಹಾದ್’ ಎಂಬ ಹುಸಿ ಸಿದ್ಧಾಂತ ಮತ್ತು ಅದಕ್ಕೆ ಪೂರಕವಾಗಿ ಕಟ್ಟಿಕೊಡುವ ರೋಚಕ ಕಥನಗಳನ್ನೇ ಪ್ರತಿಪಾದಿಸುವ ರೀತಿಯಲ್ಲಿ ಕೇರಳ ಸ್ಟೋರಿ ಮಾಡಿದ್ದಾನೆ. ದೇಶದಲ್ಲಿ, ಮುಖ್ಯವಾಗಿ ಕೇರಳದಲ್ಲಿ, ಮುಸ್ಲಿಮ್ ಯುವಕರು ಅಮಾಯಕ ಹಿಂದು ಹುಡುಗಿಯರನ್ನು ಪ್ರೀತಿಪ್ರೇಮದ ಬಲೆಯಲ್ಲಿ ಕೆಡವಿಕೊಂಡು, ಮತಾಂತರಗೊಳಿಸಿ, ಮದುವೆಯಾಗಿ ಕೊನೆಗೆ ಅವರನ್ನು ಐಸಿಸ್ ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪಿಗೆ ಒಪ್ಪಿಸಿಬಿಡುತ್ತಾರೆ ಎನ್ನುವುದು ಇವರ ಪ್ರತಿಪಾದನೆ. ದೇಶದಲ್ಲಿ ಪ್ರೇಮ ವಿವಾಹಗಳು, ಅಂತರಜಾತಿ, ಅಂತರಧರ್ಮೀಯ ವಿವಾಹಗಳು ಅಪರೂಪವೇನಲ್ಲ, ಮದುವೆಯಾಗುತ್ತೇನೆ ಎಂದು ಹೇಳಿ ಮಾಡುವ ವಂಚನೆಗಳಿಗೂ ಕಡಿಮೆ ಏನಿಲ್ಲ. ಆದರೆ, ಹುಡುಗಿ ಹಿಂದೂ ಆಗಿದ್ದು, ಹುಡುಗ ಮುಸ್ಲಿಮ್ ಆಗಿದ್ದರೆ ಅದನ್ನು ‘ಲವ್ ಜಿಹಾದ್’ ಪಿತೂರಿಯ ಅಂಗವ ಎಂದು ಬಿಂಬಿಸಲಾಗುತ್ತದೆ. ಇದು ಹಿಂದುತ್ವವಾದಿಗಳು ಮುಸಲ್ಮಾನರ ಮೇಲೆ ಕಾರುತ್ತಿರುವ ದ್ವೇಷದ ಒಂದು ವಿಕೃತರೂಪವಾಗಿದೆ.

ನಾವು ಕೇರಳ ಸ್ಟೋರಿ ತನ್ನ ಸಂದೇಶಕ್ಕೆ ಬಲ ನೀಡಲು ಉಲ್ಲೇಖಿಸಿರುವ ಅಂಕಿ ಅಂಶಗಳು: ಚಿತ್ರದ ಟೀಸರಿನಲ್ಲಿಯೇ ಎದ್ದುಕಾಣುವ ಹಾಗೆ ಹೇಳಿದ್ದು, ಕೇರಳವೊಂದರಿಂದಲೇ ಒಟ್ಟು ೩೨,೦೦೦ ಹಿಂದೂ ಯುವತಿಯರು ವಂಚನೆಗೆ ಒಳಗಾಗಿ ಐಸಿಸ್ ಸೇರಿದ್ದಾರೆ ಎಂದು. ವಾಸ್ತವವಾಗಿ ಇಡೀ ಐಸಿಸ್‌ನ ಸಂಖ್ಯಾಬಲವೂ ಅಷ್ಟಿಲ್ಲ ಎಂದು ಬಲ್ಲವರು ಹೇಳುತ್ತಾರೆ, ಆ ಮಾತು ಬೇರೆ. ನಿರ್ದೇಶಕ ಸುದೀಪ್ತೋ ಸೇನ್ ೨೦೧೮ರಲ್ಲಿಯೇ ಈ ಕುರಿತು ಒಂದು ಸಾಕ್ಷಚಿತ್ರವನ್ನು ಮಾಡಿ ೩೨,೦೦೦ ಯುವತಿಯರು ಕೇರಳದಿಂದ ಕಣ್ಮರೆಯಾಗಿರುವ ಕುರಿತು ಹೇಳಿ ಇದನ್ನು ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ‘ಅಂತರರಾಷ್ಟ್ರೀಯ ಪಿತೂರಿ’ ಎಂದು ಬಣ್ಣಿಸಿದ್ದರು.

ರಾಜಕೀಯ ಪರ-ವಿರೋಧ: ಚಿತ್ರವು ಇಡೀ ದೇಶದಲ್ಲಿ ಪರ-ವಿರೋಧಿ ಅಲೆಗೆ ಪ್ರೇರಕವಾಯಿತು. ನಿರೀಕ್ಷೆಯಂತೆ, ಆಡಳಿತಾರೂಢ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಇತರ ಹಿಂದೂವಾದಿ ಸಂಘಟನೆಗಳು ಕೇರಳ ಸ್ಟೋರಿಯನ್ನು ಹಾಡಿಹೊಗಳಿದರು. ಎಷ್ಟರ ಮಟ್ಟಿಗೆ ಎಂದರೆ, ಅದನ್ನಿನ್ನೂ ನೋಡಿರದ ಮೋದಿಯವರು ಕರ್ನಾಟಕದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಈ ಚಿತ್ರವನ್ನು ಉಲ್ಲೇಖಿಸಿ, ‘ದಕ್ಷಿಣ ರಾಜ್ಯಗಳಲ್ಲಿ ಭಯೋತ್ಪಾದನೆ ಪಿತೂರಿಗಳು ಇರುವುದನ್ನು ಕೇರಳ ಸ್ಟೋರಿ ಬಹಿರಂಗಪಡಿಸಿದೆ. ಭಯೋತ್ಪಾದಕ ಮನಸ್ಥಿತಿ ಹೊಂದಿರುವ ಜನರೊಂದಿಗೆ ಕಾಂಗ್ರೆಸ್ ರಹಸ್ಯವಾಗಿ ರಾಜಕೀಯ ಮಾಡುತ್ತಿದೆ,’ ಎಂದು ಆಪಾದಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಿತ್ರದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿ ವಿಶೇಷವಾಗಿ ಹಿಂದೂ ಹುಡುಗಿಯರನ್ನು ತಮ್ಮೊಂದಿಗೆ ಕರೆದೊಯ್ದು ಸಿನಿಮಾ ತೋರಿಸಿದರು. ಬಿಜೆಪಿ ಆಡಳಿತದ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಯಿತು. ಆರ್‌ಎಸ್‌ಎಸ್ ಮುಖವಾಣಿಯಾದ ಆರ್ಗನೈಜರ್ ಈ ಸಿನಿಮಾವನ್ನು “ಅಪಾಯಕಾರಿ ಸತ್ಯ” ಎಂದು ವರ್ಣಿಸಿತು.

ಕೇರಳದಲ್ಲಿ ಸಿಪಿಐ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಈ ಚಿತ್ರವು ಸಂಘಪರಿವಾರದ ಅಜೆಂಡಾಕ್ಕೆ ಅನುಗುಣವಾಗಿ ‘ಕೋಮುವಾದಿ ತಪ್ಪು ಮಾಹಿತಿಯನ್ನು ಹಬ್ಬಿಸಲು ನೋಡುತ್ತಿದೆ’ ಎಂದು ಆಕ್ಷೇಪಿಸಿವೆ. ಆದರೆ ಕೇರಳ ಸರಕಾರ ಇದನ್ನು ನಿಷೇದಿಸಲಿಲ್ಲ. ತಮಿಳುನಾಡಿನಲ್ಲಿ, ನಾಮ್ ತಮಿಳರ್ ಕಚ್ಚಿ ಮತ್ತು ಹಲವಾರು ಮುಸ್ಲಿಮ್ ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆಯನ್ನು ಮಾಡಿದವು. ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾದೀತೆಂಬ ಭೀತಿಯಿಂದ ತಮಿಳುನಾಡು ಮಲ್ಟಿಪ್ಲೆಕ್ಸ್ ಸಂಘವು ತಮ್ಮ ಚಿತ್ರಮಂದಿರಗಳಿಂದ ಪ್ರದರ್ಶನವನ್ನು ಹಿಂದಕ್ಕೆ ಪಡೆಯಿತು. ಪಶ್ಚಿಮ ಬಂಗಾಲದಲ್ಲಿ ಪ್ರದರ್ಶನವನ್ನು ಬ್ಯಾನ್ ಮಾಡಲಾಯಿತು.

ಕೋಮುಸೌಹಾರ್ದವನ್ನು ಕದಡಬಹುದಾದ ಆಧಾರದ ಮೇಲೆ ಮದ್ರಾಸ್, ಕೇರಳ ಹೈಕೋರ್ಟು ಮತ್ತು ಭಾರತದ ಸುಪ್ರೀಂ ಕೋರ್ಟುಗಳಲ್ಲಿ ಇದರ ನಿಷೇಧವನ್ನು ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾದವು. ನಿರ್ಮಾಪಕರೂ ಇದರ ವಿರುದ್ಧ ದಾವೆಯನ್ನು ಹೂಡಿದರು.ಆದರೆ ಕೋರ್ಟುಗಳು ಇದನ್ನು ಬ್ಯಾನ್ ಮಾಡಲಿಲ್ಲ. ಕೆಲವು ಷರತ್ತುಗಳನ್ನು ಹಾಕಿದವು. ‘ಇದು ಕೆಲವು ಘಟನೆಗಳ ಕಾಲ್ಪನಿಕ ಆವೃತ್ತಿ’ ಮತ್ತು ‘ಮತಾಂತರಗೊಂಡ ಯುವತಿಯರ ಸಂಖ್ಯೆ 32000 ಎನ್ನುವುದಕ್ಕೆ ಯಾವುದೇ ವಾಸ್ತವ ಅಂಕಿಅಂಶಗಳ ಆಧಾರವಿಲ್ಲ’ ಎಂಬ ಸೂಚನೆಗಳನ್ನು ಸಿನಿಮಾದ ಆರಂಭದಲ್ಲಿ ಹಾಕಬೇಕು. ಸೆನ್ಸಾರ್ ಬೋರ್ಡ್ ಈ ಚಿತ್ರವನ್ನು ವೀಕ್ಷಿಸಿ ಇದಕ್ಕೆ ‘ವಯಸ್ಕರಿಗೆ ಮಾತ್ರ’ ಎನ್ನುವ ‘ಎ’ ಪ್ರಮಾಣಪತ್ರವನ್ನು ನೀಡಿದೆ.

ತಿರುಚಲಾದ ಸತ್ಯ

ಚಿತ್ರದಲ್ಲಿ ನಿರ್ದೇಶಕ ಸುದೀಪ್ತೋ ಸೇನ್ ಚಿತ್ರಕ್ಕಾಗಿ ತಾನು ಮಾಡಿದ ಸಂಶೋಧನೆಯ ಅಂಗವಾಗಿ ಕೇರಳದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.

ಕೇರಳದ ಮಾಜಿ ಮುಖ್ಯ ಮಂತ್ರಿ ಓಮನ್ ಚಾಂಡಿಯವರು ೨೦೧೨ರಲ್ಲಿ ರಾಜ್ಯದ ವಿಧಾನ ಸಭೆಯಲ್ಲಿ ಹೇಳಿದ ಪ್ರಕಾರ, 2006 ಮತ್ತು 201ರ ನಡುವೆ, 2667 ಮಹಿಳೆಯರು ಇಸ್ಲಾಮಿಗೆ ಪರಿವರ್ತನೆಯಾಗಿದ್ದರು. ಆದರೆ, ಈ ಹೇಳಿಕೆಯಲ್ಲಿ ಅವರು ಎಲ್ಲಿಯೂ ‘ಬಲವಂತದ ಮತಾಂತರ’ ಎಂದು ಹೇಳಿರಲಿಲ್ಲ. ತಮ್ಮ ರಾಜ್ಯದಲ್ಲಿ ಬಲವಂತದ ಮತಾಂತರಕ್ಕಾಗಲೀ, ‘ಲವ್ ಜಿಹಾದ್’ ಎಂಬ ಆಪಾದನೆಯನ್ನು ಮಾಡಿ ಮುಸ್ಲಿಮರ ವಿರುದ್ಧ ದ್ವೇಷದ ಪ್ರಚಾರಗಳನ್ನುಮಾಡುವುದಕ್ಕಾಗಲೀ ಅವಕಾಶವಿಲ್ಲ ಎಂದು ಅವರು ಹೇಳಿದ್ದರು. ಇನ್ನು, ಈ ಹೆಣ್ಣು ಮಕ್ಕಳು ಐಸಿಸ್‌ನ್ನು ಸೇರುತ್ತಿದ್ದಾರೆ ಎಂದಂತೂ ಅವರು ಹೇಳಿಯೇ ಇರಲಿಲ್ಲ. 

ಎರಡನೆಯ ಉಲ್ಲೇಖವನ್ನು ನೋಡೋಣ. ಮಾಜಿ ಮುಖ್ಯ ಮಂತ್ರಿ ವಿ.ಎಸ್.ಅಚ್ಯುತಾನಂದನ್. ಅವರು   2006 ರಿಂದ 2011

ವರೆಗೆ ಕೇರಳದ ಮುಖ್ಯ ಮಂತ್ರಿಯಾಗಿದ್ದರು. ಆಗ ನೀಡಿದ್ದ ಸಂದರ್ಶನದ ವಿಡಿಯೋವನ್ನು ಕೇರಳ ಸ್ಟೋರಿ ಸಿನಿಮಾದ ನಿರ್ಮಾಪಕರು ಇದನ್ನು ತಮ್ಮ ಪ್ರಚಾರಕ್ಕೆ ಪೂರಕವಾಗಿ ಮತ್ತೊಮ್ಮೆ ಅಪಲೋಡ್ ಮಾಡಿದ್ದಾರೆ. ಇದರಲ್ಲಿ ಅಳವಡಿಸಲಾಗಿರುವ ಸಬ್-ಟೈಟಲುಗಳು ತಪ್ಪು ಅರ್ಥ ಕೊಡುವಂತೆ ಇವೆ. ಅಲ್ಲದೇ, ಇಲ್ಲಿ ವಿ.ಎಸ್.ಅಚ್ಯುತಾನಂದನ್‌ ಅವರು ಇದು ಇತರ ಧರ್ಮಗಳ ಯುವಜನರ ದುಷ್ಪರಿಣಾಮ ಬೀರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಮುಸ್ಲಿಮ್ ಯುವತಿಯರನ್ನು ಮದುವೆಯಾಗುವಂತೆ ಪ್ರೇರೇಪಿಸಲು ಅವರಿಗೆ ಹಣ ಕೊಡುತ್ತಿದ್ದಾರೆ ಎಂದಿದ್ದಾರೆ. ಇಲ್ಲಿ ಐಸಿಸ್‌ನ ಉಲ್ಲೇಖವೇ ಇಲ್ಲ.

ಸಮಸ್ಯೆ ಇದ್ದರೂ ಎಷ್ಟು ದೊಡ್ಡದು?

ಕೇರಳ ಸ್ಟೋರಿಯ ಪ್ರಕಾರ, ಕೇರಳದಲ್ಲಿ ಈ ಲವ್‌ಜಿಹಾದ್ ವಂಚನೆಗೆ ಗುರಿಯಾಗಿರುವ ಅಮಾಯಕ ಯುವತಿಯರ ಸಂಖ್ಯೆ 32000. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಕೆಲವು ಅಧಿಕೃತ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸೋಣ.

ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಕೌಂಟರ್ ಟೆರಿರಿಸಂ, ಅಂಡರ್‌ ಸೆಕ್ರಟರಿ ಜನರಲ್, ಲಾದಿಮಿರ್ ವೊರೊನ್‌ಕೋವ್ ಹೇಳುವ ಪ್ರಕಾರ, ಜಗತ್ತಿನ ಸುಮಾರು 110 ದೇಶಗಳಿಂದ ಸುಮಾರು 40000 ವಿದೇಶೀ ಭಯೋತ್ಪಾಕ ಹೋರಾಟಗಾರು ಸಂಘರ್ಷದಲ್ಲಿ ಸೇರಿಕೊಳ್ಳಲು ಸಿರಿಯಾ ಮತ್ತು ಇರಾಕಿಗೆ ಹೋಗಿದ್ದಾರೆ. ಇನ್ನೊಂದು ಲಂಡನ್ನಿನ ಕಿಂಗ್ಸ್ ಕಾಲೇಜಿನ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಸ್ಟಡಿ ಆಫ್ ರ‍್ಯಾಡಿಕಲೈಜೇಷನ್ ನಡೆಸಿದ ಅಧ್ಯಯನದ ಪ್ರಕಾರ, ಐಸಿಸ್ ಜೊತೆಗೆ ನಂಟನ್ನು ಹೊಂದಿರುವವರ ಸಂಖ್ಯೆ 80 ವಿಭಿನ್ನ ದೇಶಗಳ 41490 ಜನ. ಅವರಲ್ಲಿ 79% ಜನ ಪುರುಷರು.

ಈ ಎರಡು ವರದಿಗಳನ್ನು ಆಧರಿಸಿ ನಾನು, ಇಡೀ ಜಗತ್ತಿನಿಂದ ಐಸಿಸ್ ಸೇರಿರುವ ಭಯೋತ್ಪಾದಕರ ಸಂಖ್ಯೆಯು 40000-42000 ಎಂದು ಅಂದಾಜಿಸಬಹುದು.ಇವರಲ್ಲಿ ಭಾರತೀಯರು ಎಷ್ಟು?   

ಯುಎಸ್‌ನ ಬ್ಯುರೋ ಆಫ್ ಕೌಂಟರ್ ಟೆರರಿಸಮ್ ಪ್ರಕಟಿಸಿದ ವರದಿಗಳ ಪ್ರಕಾರ. ಸೆಪ್ಟೆಂಬರ್ 2020ರವರೆಗೆ, ಎನ್‌ಐಎ ಭಾರತದಲ್ಲಿ ಐಸಿಸ್‌ಗೆ ಸಂಬಂಧಿಸಿದ ಭಯೋತ್ಪಾದನೆಯ 34 ಪ್ರಕರಣಗಳ ತನಿಖೆಯನ್ನು ನಡೆಸಿತು, 160 ಜನರನ್ನು ಬಂಧಿಸಿತು.

ಮುಂದಿನ ಪ್ರಶ್ನೆ ಇವುಗಳಲ್ಲಿ ಕೇರಳಕ್ಕೆ ಸಂಬಂಧಿಸಿದ ಪ್ರಕರಣಗಳು ಎಷ್ಟು ಎಂಬುದು. ಭಾರತಕ್ಕೆ ಸಂಬಂಧಿಸಿದ ಒಟ್ಟು 180-200 ಪ್ರಕರಣಗಳಲ್ಲಿ 40 ಪ್ರಕರಣಗಳು ಕೇರಳಕ್ಕೆ ಸಂಬಂಧಿಸಿದವು ಎಂದು ಹೇಳಲಾಗುತ್ತದೆ. ಈ ಸಂಖ್ಯೆ ಐಸಿಸ್ ಜೊತೆ ವಿವಿಧ ರೀತಿಯಲ್ಲಿ ಸಂಪರ್ಕವನ್ನು ಹೊಂದಿರುವ ಜನರು ಆಗಿರುವುದರಿಂದ ಇವುಗಳಲ್ಲಿ ಎಷ್ಟು ಜನ ಐಸಿಸ್ ಸೇರಲು ಹೋದರು ಎಂಬುದು ಗೊತ್ತಾಗುವುದಿಲ್ಲ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವರದಿ ಪ್ರಕಾರ ನವೆಂಬರ್ 2020ರ ಹೊತ್ತಿಗೆ ಐಸಿಸ್ ಜೊತೆ ನಂಟನ್ನು ಹೊಂದಿರುವ ಭಾರತೀಯ ಮೂಲದ ಹೋರಾಟಗಾರರು ಸುಮಾರು 66 ಜನ. ಇವರಲ್ಲಿ ಮಹಿಳೆಯರು ಸುಮಾರು 13 ಜನ ಮಾತ್ರ. ಇವರಲ್ಲಿ ಕೇರಳದವರು ಕೇವಲ 6 ಜನ. ಈ ಆರರಲ್ಲಿ ಇತರ ಧರ್ಮಗಳಿಂದ ಇಸ್ಲಾಮಿಗೆ ಮತಾಂತರಗೊಂಡವರ ಸಂಖ್ಯೆ 3. ಈ ಮೂರವರಲ್ಲಿ ಇಬ್ಬರು ಕ್ರಿಶ್ಚಿಯನ್ ಮತ್ತು ಒಬ್ಬರು ಮಾತ್ರ ಹಿಂದು.

ಕೇರಳ ಸ್ಟೋರಿಯಲ್ಲಿ ತೋರಿಸಲಾದ ಘಟನೆಗಳು ನಿಜಜೀವನದಲ್ಲಿ ನಡೆದಿದ್ದು ಕೇವಲ 3 ಮಹಿಳೆಯರ ಜೊತೆ, ಅದೂ ಇಲ್ಲಿ ತೋರಿಸಿದ ರೀತಿಯಲ್ಲಿ ಅಲ್ಲ. ಆದರೂ ಸಿನಿಮಾ ಇಂಥ ವಂಚನೆ ನಡೆದಿದ್ದು 32000 ಮಹಿಳೆಯರ ಜೊತೆ ಎಂದು ತೋರಿಸುತ್ತದೆ. ಇದು ದೊಡ್ಡ ಸುಳ್ಳು. ಇದನ್ನು ಕೇಳಿದ ಜನಸಾಮಾನ್ಯರು 32000 ಅಲ್ಲದಿದ್ದರೂ ಕೆಲವು ಸಾವಿರವಾದರೂ ಇರಬಹುದು ಎಂದು ತಾವೇ ಲೆಕ್ಕ ಹಾಕಿಕೊಳ್ಳುತ್ತಾರೆ. ಈ ಸುಳ್ಳನ್ನು ಹಲವರು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಭಾರತದಲ್ಲಿ ಸಂಘ ಪರಿವಾರದವರು ಎಬ್ಬಿಸಿದ ಈ ಹುಯಿಲಿನಲ್ಲಿ ಅನೇಕ ಮುಗ್ಧ ಯುವಕ ಯುವತಿಯರು, ಚಿಂತಿತ ಪೋಷಕರು ಭಾಗವಹಿಸಿ ಮನಸ್ಸನ್ನು ಕಹಿಗೊಳಿಸಿಕೊಂಡರು. ಆದರೂ, ಈಗಾಗಲೇ ಇವರ ಮುಸ್ಲಿಮ್ ವಿರೋಧೀ ಧೋರಣೆಯ ಪರಿಚಯವಿದ್ದ ಪ್ರಜ್ಞಾವಂತರು ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸಿದರು.

ಆ್ಯಂಟಿ ಕ್ಲೈಮ್ಯಾಕ್ಸ್‌

ಭೂಪಾಲ್‌ನ 19 ವರ್ಷದ ಒಬ್ಬ ಹಿಂದೂ ಹುಡುಗಿ ಒಬ್ಬ ಮುಸ್ಲಿಮ್ ಹುಡುಗನನ್ನು ಪ್ರೀತಿಸುತ್ತಿದ್ದಳು. ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಠಾಕುರ್ ಆ ಮುಸ್ಲಿಮ್ ಹುಡುಗನಿಂದ ದೂರವಿರುವಂತೆ ಆಕೆಗೆ ಬುದ್ಧಿ ಹೇಳಿದಳು. ಈ ಹುಡುಗಿಗೆ ಗೊತ್ತಾಗಲೀ ಎಂದು ಆಕೆಯನ್ನು ಕರೆದುಕೊಂಡು ಹೋಗಿ ಕೇರಳ ಸ್ಟೋರಿ ಸಿನಿಮಾ ತೋರಿಸಿದರು. ಅದಾದ ಒಂದು ವಾರದಲ್ಲಿ ಆ ಹುಡುಗಿ ತನ್ನ ಮುಸ್ಲಿಮ್ ಪ್ರೇಮಿಯೊಂದಿಗೆ ಓಡಿಹೋದಳು. ಅದು ಲವ್ ಜಿಹಾದೂ ಆಗಿರಲಿಲ್ಲ, ಆಕೆಯನ್ನು ಐಸಿಸ್‌ಗೆ ಸೇರಿಸಿಯೂ ಇಲ್ಲ.

ಅಬ್ದುಲ್‌ ರೆಹಮಾನ್‌ ಪಾಷ, ಹಿರಿಯ ಲೇಖಕರು

(ಈ ಲೇಖನ “ಹೊಸತು” ಮಾಸಿಕದಲ್ಲಿ ಪ್ರಕಟವಾಗಿದೆ.)

Related Articles

ಇತ್ತೀಚಿನ ಸುದ್ದಿಗಳು