Saturday, June 15, 2024

ಸತ್ಯ | ನ್ಯಾಯ |ಧರ್ಮ

NCERT ಅಳಿಸಿದ್ದ ಗಾಂಧಿ ಹತ್ಯೆಯ ವಿವರಗಳನ್ನು ಮರಳಿ ಪಠ್ಯದಲ್ಲಿ ಸೇರಿಸಿದ ಕೇರಳ

ತಿರುವನಂತಪುರ: ಮಹಾತ್ಮಾ ಗಾಂಧಿ ಹತ್ಯೆ, 2022ರ ಗುಜರಾತ್ ಗಲಭೆ ಮತ್ತು ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ 11 ಮತ್ತು 12ನೇ ತರಗತಿ ಪಠ್ಯಕ್ರಮದಿಂದ ರಾಷ್ಟ್ರೀಯ ಶೈಕ್ಷಣಿಕ ತರಬೇತಿ ಮತ್ತು ಸಂಶೋಧನಾ ಮಂಡಳಿ (ಎನ್‌ಸಿಇಆರ್‌ಟಿ) ಅಳಿಸಿರುವ ಅಧ್ಯಾಯಗಳನ್ನು ಮರುಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಲು ಕೇರಳ ಸರ್ಕಾರ ನಿರ್ಧರಿಸಿದೆ.

ಆಗಸ್ಟ್ 23 ರಂದು ಇಲ್ಲಿನ ಕಾಟನ್ ಹಿಲ್ ಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಲಿದ್ದಾರೆ ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಗುರುವಾರ ಬಹಿರಂಗಪಡಿಸಿದ್ದಾರೆ. 11 ಮತ್ತು 12ನೇ ತರಗತಿಗಳ ಪಠ್ಯಕ್ರಮದಿಂದ ಎನ್‌ಸಿಆರ್‌ಟಿ ತೆಗೆದುಹಾಕಿರುವ ಈ ಅಧ್ಯಾಯಗಳನ್ನು ಮರು-ಸಂಯೋಜಿಸಲು ಕೇರಳ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ.

ಎನ್‌ಸಿಇಆರ್‌ಟಿಯ ಆಶ್ರಯದಲ್ಲಿ, ರಾಷ್ಟ್ರಮಟ್ಟದಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗಿನ ಪಠ್ಯಪುಸ್ತಕಗಳಿಂದ ಹಲವು ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳ ಮೇಲಿನ ಪಠ್ಯಪುಸ್ತಕಗಳ ಹೊರೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಸಿಇಆರ್‌ಟಿ ಈ ಹಿಂದೆ ಘೋಷಿಸಿತ್ತು. ಆದರೆ ಈ ತೆಗೆದುಹಾಕುವಿಕೆಯ ನಿಜವಾದ ಉದ್ದೇಶವು ವಿದ್ಯಾರ್ಥಿಗಳ ಹೊರೆ ಇಳಿಸುವುದಾಗಿರದೆ, ಕೆಲವು ಸ್ವಾರ್ಥಿ ಶಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡುವುದು ಎಂದು ಯಾರಾದರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದು ಶಿವನ್‌ಕುಟ್ಟಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಕೇರಳವೇ ಸಿದ್ಧಪಡಿಸಲಿದ್ದು, 6ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಎನ್‌ಸಿಇಆರ್‌ಟಿ ಮಾಡಿರುವ ಬದಲಾವಣೆಗಳು ಕೇರಳದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದರು. ಆದರೆ 11 ಮತ್ತು 12ನೇ ತರಗತಿ ಪಠ್ಯಪುಸ್ತಕಗಳು ಕೇರಳಕ್ಕೆ ಉಪಯುಕ್ತವಾಗಿರುವುದರಿಂದ ತೆಗೆದುಹಾಕಿರುವ ಅಧ್ಯಾಯಗಳನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದರು.

ಸಂವಿಧಾನದ ಮೂಲಭೂತ ತತ್ವಗಳು, ದೇಶದ ಇತಿಹಾಸ ಮತ್ತು ದೇಶ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ರಾಜಕೀಯ ದುರುದ್ದೇಶದಿಂದ ಈ ಪಠ್ಯಕ್ರಮವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು