Home ದೇಶ ಮತ್ತೆ ರಾಜ್ಯಸಭಾ ವಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆಗೆ ಪಟ್ಟ; ಕಾಂಗ್ರೆಸ್ ನಾಯಕತ್ವಕ್ಕೆ ಅಧಿಕೃತ ಮನ್ನಣೆ

ಮತ್ತೆ ರಾಜ್ಯಸಭಾ ವಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆಗೆ ಪಟ್ಟ; ಕಾಂಗ್ರೆಸ್ ನಾಯಕತ್ವಕ್ಕೆ ಅಧಿಕೃತ ಮನ್ನಣೆ

0

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ (LoP) ಸ್ಥಾನವನ್ನು ಮತ್ತೆ ಅಧಿಕೃತವಾಗಿ ನೀಡಲಾಗಿದೆ. ಈ ಕುರಿತು ರಾಜ್ಯಸಭೆಯ ಸಚಿವಾಲಯ ಸಂಸದೀಯ ಬುಲೆಟಿನ್ ಮೂಲಕ ಪ್ರಕಟಣೆ ಹೊರಡಿಸಿದೆ.

ಜೂನ್ 29, 2026ರಂದು ಪ್ರಕಟವಾದ ರಾಜ್ಯಸಭೆಯ ಬುಲೆಟಿನ್ ಸಂಖ್ಯೆ 66453ರ ಪ್ರಕಾರ, ಖರ್ಗೆ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಜೂನ್ 25ರಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರು ಜೂನ್ 26ರಿಂದ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಮುಕ್ತರಾಗಿದ್ದರು. ಸದಸ್ಯತ್ವ ಅವಧಿ ಮುಕ್ತಾಯವಾದ ಕಾರಣ ತಾಂತ್ರಿಕವಾಗಿ ಅವರ LoP ಸ್ಥಾನವೂ ತೆರವಾಗಿತ್ತು.

ಆದರೆ, ರಾಜ್ಯಸಭೆಗೆ ಮರು ಆಯ್ಕೆಯಾದ ನಂತರ ಖರ್ಗೆ ಅವರನ್ನು ಮತ್ತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕರಾಗಿ ಗುರುತಿಸಲಾಗಿದೆ. ಜೂನ್ 26, 2026ರಿಂದಲೇ ಜಾರಿಗೆ ಬರುವಂತೆ ಈ ಮಾನ್ಯತೆಯನ್ನು ರಾಜ್ಯಸಭೆಯ ಸಭಾಪತಿಗಳು ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಸತ್ತಿನ ವಿರೋಧ ಪಕ್ಷದ ನಾಯಕರ ವೇತನ ಮತ್ತು ಭತ್ಯೆಗಳ ಕಾಯ್ದೆ-1977ರ ಸೆಕ್ಷನ್ 2ರ ಅನ್ವಯ ಈ ಮಾನ್ಯತೆ ನೀಡಲಾಗಿದೆ ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದರೊಂದಿಗೆ ಖರ್ಗೆ ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಮುಂದುವರಿಸುವುದರ ಜೊತೆಗೆ, ಮೇಲ್ಮನೆಯಲ್ಲಿ ವಿರೋಧ ಪಕ್ಷಗಳ ಪ್ರಮುಖ ಮುಖಂಡರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಮುಂಬರುವ ಸಂಸತ್ ಅಧಿವೇಶನಗಳಲ್ಲಿ ಸರ್ಕಾರದ ನೀತಿಗಳು ಹಾಗೂ ಪ್ರಮುಖ ಮಸೂದೆಗಳ ಕುರಿತು ಪ್ರತಿಪಕ್ಷಗಳ ನಿಲುವನ್ನು ಮಂಡಿಸುವಲ್ಲಿ ಖರ್ಗೆ ಅವರ ಪಾತ್ರ ಮತ್ತಷ್ಟು ಮಹತ್ವ ಪಡೆದುಕೊಳ್ಳುವ ನಿರೀಕ್ಷೆಯಿದೆ.

You cannot copy content of this page

Exit mobile version