Wednesday, June 19, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್‌ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ: ಸಾವಿರ ಮತಗಳನ್ನಷ್ಟೇ ಪಡೆದ ತರೂರ್‌

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ಪದವಿಗಾಗಿ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರಬಂದಿದ್ದು, ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಎದುರಾಳಿ ಶಶಿ ತರೂರ್‌ ಅವರನ್ನು 6,897 ಮತಗಳ ಬಹಳ ದೊಡ್ಡ ಅಂತರದಿಂದ ಸೋಲಿಸಿ ಅಧ್ಯಕ್ಷ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸೋಮವಾರ (ಅ:17)ದಂದು ಅಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಖರ್ಗೆಯವರು ಒಟ್ಟು 7,897 ಮತಗಳನ್ನು ಪಡೆದಿದ್ದರೆ, ತರೂರ್‌ ಕೇವಲ 1,000 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಚಲಾವಣೆಯಾದ 9,385 ಮತಗಳಲ್ಲಿ 416 ಮತಗಳು ಅಸಿಂಧುವಾಗಿದ್ದವು.

ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್ಸಿನ ಚುನಾವಣಾ ಅಧಿಕಾರಿಗಳಿಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆಯೆಂದು ಪತ್ರ ಬರೆದು ಕಿಡಿಕಾರಿದ್ದ ತರೂರ್‌ ಫಲಿತಾಂಶ ಘೋಷಣೆಯಾದ ನಂತರ, “ಕಾಂಗ್ರೆಸ್‌ ಅಧ್ಯಕ್ಷ ಪದವಿಯೆನ್ನುವುದು ಬಹಳ ಜವಬ್ದಾರಿಯುತ ಮತ್ತು ಗೌರವಾನ್ವಿತ ಹುದ್ದೆಯಾಗಿದ್ದು, ಆ ಹುದ್ದೆಗೆ ಆಯ್ಕೆಯಾಗಿರುವ ಖರ್ಗೆಯವರನ್ನು ಅಭಿನಂದಿಸುತ್ತೇನೆ,” ಎಂದಿದ್ದಾರೆ. ಇನ್ನೊಂದು ಹೇಳಿಕೆಯಲ್ಲಿ ತರೂರ್‌ ಅವರು “ನೆಹರೂ-ಗಾಂಧಿ ಕುಟುಂಬಕ್ಕೆ ಕಾಂಗ್ರೆಸಿಗರ ಹೃದಯಲ್ಲಿ ಉನ್ನತವಾದ ಸ್ಥಾನವಿತ್ತು, ಮುಂದೆಯೂ ಅವರು ಕಾಂಗ್ರೆಸಿನ ಹೃದಯವಾಗಿರಲಿದ್ದಾರೆ,” ಎಂದು ಹೇಳಿದ್ದಾರೆ. ನಿಕಟಪೂರ್ವ ಅಧ್ಯಕ್ಷರಿಗೆ ಕಾಂಗ್ರೆಸ್‌ ಸದಾ ಆಭಾರಿಯಾಗಿರಲಿದೆ ಎಂದು ಅವರು ಹೇಳಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಕರ್ನಾಟಕ ವಿಧಾನ ಸಭೆಯ ನಾಯಕರಾದ ಸಿದ್ಧರಾಮಯ್ಯನವರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

ಭಾರತ್‌ ಜೋಡೋ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಇಂದು ಬೆಳಿಗ್ಗೆ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಕುರಿತ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಕಾಂಗ್ರೆಸಿನಲ್ಲಿ ಅಧ್ಯಕ್ಷ ಪದವಿಯೆನ್ನುವುದು ಪರಮೋಚ್ಛವಾಗಿದ್ದು, ಮುಂದೆ ಯಾರೇ ಆಯ್ಕೆಯಾದರು ಅವರು ಪಕ್ಷವನ್ನು ಮುನ್ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು.

ಈ ಅಧ್ಯಕ್ಷೀಯ ಚುನಾವಣೆಯತ್ತ ಕಾಂಗ್ರೆಸ್‌ ಪಕ್ಷದ ಸದಸ್ಯರಲ್ಲದೆ ಬಲಪಂಥೀಯ ಪಕ್ಷಗಳ ಸಮರ್ಥಕರು ಮತ್ತು ಕಾರ್ಯಕರ್ತರೂ ಕುತೂಹಲದ ಕಣ್ಣಿಟ್ಟಿದ್ದರು. ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಕರ್ನಾಟಕದ ಮೇಲೆ ಖರ್ಗೆಯವರ ಆಯ್ಕೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವ ಕುತೂಹಲ ಜನರಲ್ಲಿ ಮನೆಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು