Wednesday, February 18, 2026

ಸತ್ಯ | ನ್ಯಾಯ |ಧರ್ಮ

ಕೋಮುವಾದ–ಹೂಡಿಕೆ ವಿಚಾರದಲ್ಲಿ ಖರ್ಗೆ–ಪೈ ವಾಗ್ವಾದ ತೀವ್ರ

ಕರಾವಳಿ ಪ್ರದೇಶದ ಹೂಡಿಕೆ ವಾತಾವರಣ ಕುರಿತು ಉಂಟಾದ ಹೇಳಿಕೆ ಇದೀಗ ರಾಜಕೀಯ ಹಾಗೂ ಕೈಗಾರಿಕಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ಕೋಮುವಾದದ ವಾತಾವರಣದಿಂದ ಮಂಗಳೂರಿಗೆ ಹೂಡಿಕೆದಾರರು ಮುಂದೆ ಬರುತ್ತಿಲ್ಲ” ಎಂಬ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಉದ್ಯಮಿ ಮೋಹನ್ ದಾಸ್ ಪೈ ತೀವ್ರ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿರುವ ಪೈ, ಸಚಿವರ ಹೇಳಿಕೆಯನ್ನು “ದೊಡ್ಡ ಸುಳ್ಳು ಮತ್ತು ಕೆಟ್ಟ ಜೋಕ್” ಎಂದು ಟೀಕಿಸಿದ್ದಾರೆ. “ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ ರಾಜ್ಯದ ಎರಡನೇ ಅತಿ ಹೆಚ್ಚು ಆದಾಯ ತಂದುಕೊಡುವ ಜಿಲ್ಲೆ. ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುತ್ತಾರೆ. ಪರಿಸ್ಥಿತಿ ಕೆಟ್ಟದ್ದಾಗಿದ್ದರೆ ಪೋಷಕರು ಮಕ್ಕಳನ್ನು ಇಲ್ಲಿ ಕಳುಹಿಸುತ್ತಿದ್ದರೇ?” ಎಂದು ಅವರು ಪ್ರಶ್ನಿಸಿದ್ದಾರೆ. ಸಚಿವ ಸ್ಥಾನದಲ್ಲಿರುವವರಿಂದ ಇಂತಹ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದು ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, “ಸಮಸ್ಯೆಗಳ ಬಗ್ಗೆ ಕಣ್ಣುಮುಚ್ಚಿದರೆ ವಾಸ್ತವ ಬದಲಾಗುವುದಿಲ್ಲ” ಎಂದು ಹೇಳಿದ್ದಾರೆ. ರಾಜ್ಯದ ಒಟ್ಟು ಜಿಡಿಪಿಯಲ್ಲಿ ಸುಮಾರು 40 ಶೇಕಡಾ ಕೊಡುಗೆ ಬೆಂಗಳೂರು ನೀಡುತ್ತದೆ. ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡದ ಪಾಲು ಕೇವಲ 5.4 ಶೇಕಡಾ ಮಾತ್ರ ಎಂದು ಅವರು ಉಲ್ಲೇಖಿಸಿದ್ದಾರೆ. “ಈ ವ್ಯತ್ಯಾಸವೇ ಪರಿಸ್ಥಿತಿಯನ್ನೂ ತೋರಿಸುತ್ತದೆ. ನನ್ನ ಹೇಳಿಕೆ ತಪ್ಪಾಗಿದ್ದರೆ ಸ್ಥಳೀಯ ವಾಣಿಜ್ಯ ವಲಯವೇ ಈ ವಿಷಯ ಚರ್ಚೆ ನಡೆಸುವುದೇಕೆ?” ಎಂದು ಪ್ರಶ್ನಿಸಿದ್ದಾರೆ. ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಈ ಹೇಳಿಕೆ-ಪ್ರತಿಹೇಳಿಕೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೂಡಿಕೆ ಪರಿಸ್ಥಿತಿ, ಆರ್ಥಿಕ ಕೊಡುಗೆ ಹಾಗೂ ಸಾಮಾಜಿಕ ಸಮನ್ವಯದ ಪ್ರಶ್ನೆಗಳು ಮತ್ತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page