Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕೊಂದು ಬದುಕುಳಿದವರುಂಟೇ?!

ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದುಹಾಕಬೇಕು” ಎಂಬ ಸಚಿವ ಅಶ್ವಥ್‌ ನಾರಾಯಣ ಅವರ ಹೇಳಿಕೆ ಮುಂದಿನ ರಕ್ತಸಿಕ್ತ ಚುನಾವಣೆಗೆ ಮುನ್ನುಡಿ ಬರೆದಂತಿದೆ. ಆಡಳಿತಾರೂಢ ಪಕ್ಷ ತನ್ನ ಸಾಧನೆಗಳ ಮೂಲಕ ಜನರ ಮುಂದೆ ಮತಯಾಚನೆ ಮಾಡಲಾಗದೆ  ಸ್ವಯಂ ಸಾರ್ವಕರ್ ಗಳನ್ನು, ಗೋಡ್ಸೆಗಳನ್ನು ಮರು ಸೃಷ್ಟಿಸ ಹೊರಟಿದೆ. ಕೊಂದು ಬದುಕುಳಿದವರುಂಟೇ? ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಪತ್ರಕರ್ತ ಎನ್‌ ರವಿಕುಮಾರ್.

ನಮ್ಮ ಮಾಧ್ಯಮಗಳು ಅದರಲ್ಲೂ ನ್ಯೂಸ್ ಚಾನಲ್ ಗಳು ಪ್ರಜಾಪ್ರಭುತ್ವ ದ ಹಬ್ಬವೆಂದೆ ಕರೆಯಬಹುದಾದ ಚುನಾವಣೆಗಳನ್ನು ಯುದ್ಧ ವೆಂದೂ, ಮತಕ್ಷೇತ್ರಗಳನ್ನು  ರಣರಂಗ ವೆಂದೂ, ಹುರಿಯಾಳು ನಾಯಕರುಗಳಿಗೆ ಅತಿಮಾನುಷ ಶಕ್ತಿಗಳನ್ನು   ಲೇಪಿಸಿ 

ಚಾಣಕ್ಯ , ಸಾಮ್ರಾಟ,  ಯೋಧ, ರಣಧೀರ, ರಣವಿಕ್ರಮ, ಬಾಹುಬಲಿ, ರಣ ಬೇಟೆಗಾರ.. ವೀರಪರಾಕ್ರಮಿ…ಹೀಗೆ ನಾನಾ ರೋಚಕ ಪರಿಭಾಷೆಗಳಿಂದ ಕಟ್ಟಿಕೊಡುತ್ತಿವೆ. 

ಇವೆಲ್ಲವೂ ತಾಮಸ ಗುಣಗಳಡಗಿದ ಹಿಂಸೆಯು ಹೊಂದಿರಬಹುದಾದ ರೂಪಗಳೆ ಆಗಿರುತ್ತವೆ. ಮತ್ತು ಸಾಮಾನ್ಯರಾದವರೂ ಈ ವಿಶೇಷಣಗಳಿಂದ ಉದ್ದೀಪನಗೊಂಡು ‘ನಾಗವಲ್ಲಿ’ ಪಾತ್ರದ ರೂಪದಂತೆ ಆಡಬಲ್ಲರು. ಯುದ್ಧದಾಹಿ ಶ್ರೀರಾಮನಂತೆಯೂ, ಲಂಕೆಸುಟ್ಟ ಹನುಮನಂತೆಯೂ  ಮುಂದುವರೆದು  ಆಡಳಿತಾರೂಢ ಪಕ್ಷ ತನ್ನ ಸಾಧನೆಗಳ ಮೂಲಕ ಜನರ ಮುಂದೆ ಮತಯಾಚನೆ ಮಾಡಲಾಗದೆ ಸ್ವಯಂ ಸಾರ್ವಕರ್ ಗಳನ್ನು,  ಗೋಡ್ಸೆಗಳನ್ನು ಮರು ಸೃಷ್ಟಿಸ ಹೊರಟಿದ್ದಾರೆ. ಈ ಅತಿರೇಕಗಳನ್ನು ನಿಯಂತ್ರಿಸಬೇಕಾದ ಮಾಧ್ಯಮಗಳು ಹೊಣೆಗಾರಿಕೆ ಮೆರೆತು ಅವುಗಳನ್ನು  ವಿಜೃಂಭಿಸುವ ಮೂಲಕ ಪ್ರೋತ್ಸಾಹಿಸುತ್ತಿವೆ ಎನ್ನಬಹುದು. 

ಅಹಿಂಸೆ,ಸತ್ಯವನ್ನೆ  ಬದುಕಾಗಿಸಿದ ಗಾಂಧಿಯ ಸ್ಮೃತಿ ಮಾಧ್ಯಮಗಳಿಗೆ ಅಪಥ್ಯವಾಗಿರುವುದರಿಂದ ಯಾರನ್ನೂ ಗಾಂಧಿ ಪ್ರೇಣಿತಗೊಳಿಸಲಾಗುತ್ತಿಲ್ಲ. ಹಾಗೇಯೇ ಬುದ್ಧ – ಬಸವ ಪ್ರಭಾವವನ್ನೂ ಕೂಡ.  

ಕೆಡುಕು ಮತ್ತು ನಕಾರಾತ್ಮಕ ಪಾತ್ರಗಳು ಮನುಷ್ಯರನ್ನು ಬಹುಬೇಗ ಆವರಿಸಿಕೊಳ್ಳುತ್ತವೆ. ಅದರಲ್ಲೂ ನವಮಾಧ್ಯಮಗಳ ಈ ಕಾಲದಲ್ಲಿ ಈ ಪ್ರಭಾವ ಸಲೀಸಾಗಿ ಕೆಲಸ ಮಾಡುತ್ತಿದೆ. 

ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಸ್ವಯಂ  ಟಿಪ್ಪುವನ್ನು ಕೊಂದ  ನಂಜೇಗೌಡ- ಉರಿಗೌಡ( ಕಲ್ಪಿತ. ಇತಿಹಾಸದಲ್ಲಿ ಇಲ್ಲದ ಪಾತ್ರಗಳು) ರುಗಳನ್ನೆ  ಮೈದುಂಬಿಕೊಂಡು ಪ್ರಚೋದನಾತ್ಮಕ ಮಾತುಗಳನ್ನು ಆಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊಡೆದಾಕಿ ಎಂಬ ಮಾತು   ಅವರ ಬೌದ್ಧಿಕತೆಯ ಮಿತಿಯನ್ನೂ, ಅವಿವೇಕವನ್ನೂ ಜಗಜ್ಜಾಹೀರುಗೊಳಿಸಿದೆ. ಕಾನೂನು ಭಾಗದಿಂದ ಇದೊಂದು ಅಪರಾಧ ಕ್ರಿಯೆ ಎಂದಾದರೂ. ಸಾಂವಿಧಾನಿಕ ಸ್ಥಾನಮಾನದಲ್ಲಿರುವ ಅಶ್ವಥ್ ನಾರಾಯಣ ಅವರು ಸಂವಿಧಾನದ ಪ್ರಮಾಣಕ್ಕೆ ಬಗೆದ ದ್ರೋಹ ಎಂಬುದು ಮುಖ್ಯವಾಗುತ್ತದೆ. 

ʼಇನ್ನೊಬ್ಬರನ್ನು ಕೊಂದವರಾದರೂ ಉಳಿದರೆʼ ಎಂಬ ಕಾಲಸತ್ಯದ ಅರಿವಿಲ್ಲದೆ ಆಡುವ ಮಾತುಗಳು  ಅಜ್ಞಾನಿಗಳಿಗಷ್ಟೆ ಸಾಧ್ಯ.

ಆದರೆ  ಅಶ್ವತ್ ನಾರಾಯಣ ಅವರನ್ನು ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸಿದ್ದರಾಮಯ್ಯ ಅವರನ್ನು ಚಿತ್ರನಟ ದರ್ಶನ್ ಅವರಿಗೆ ರೂಪಾಂತರಿಸಿ ಕೈಗೆ ಮಚ್ಚುಕೊಟ್ಟು ನಿಲ್ಲಿಸಿದ್ದಾರೆ. ಇದು ಅಶ್ವಥ್ ನಾರಾಯಣ ರ ಮಾತಿನಷ್ಟೆ ಸಮನಾದದ್ದು. 

ಕಳೆದ ದಿನಗಳಲ್ಲಿ ದೇಶದ ರೈತರು ನಡೆಸಿದ ಚಳವಳಿ ಮತ್ತು ಇತ್ತೀಚೆಗೆ ರಾಹುಲ್ ಗಾಂಧಿ  ಕೈಗೊಂಡ ಭಾರತ್ ಜೋಡೋ ಯಾತ್ರೆ ಹಿಂಸೆ- ದ್ವೇಷವನ್ನು ವಿರೋಧಿಸುವುದಕ್ಕೆ ಹೊಸ ಮಾದರಿಯನ್ನೆ ಕೊಟ್ಟಿದ್ದನ್ನು   ಯಾರೂ ಮರೆಯುವಂತಿಲ್ಲ.

ಹಿಂಸೆ ಎಂಬುದು ಕ್ರಿಯೆಯೇ ಆಗಿರಬೇಕಿಲ್ಲ. ಅದು ನಮ್ಮೊಳಗೆ ಚಲನೆ ಮತ್ತು ಯೋಚನೆ ರೂಪದಲ್ಲಿದ್ದರೂ ಅದು ಅಪಾಯಕಾರಿ.  ಮನುಷ್ಯ ಮೂಲತಃ ಒಳ್ಳೆಯವನು/ ಳು. ಪ್ರೀತಿ, ಕರುಣೆ, ಕ್ಷಮೆ ‌ಎಲ್ಲವೂ ಜನ್ಮದಾತ ಗುಣಗಳೆ ಆಗಿರುತ್ತವೆ. ಮತ್ತು ಸಂಘಜೀವಿ ಕೂಡ. ಆದರೆ ನಮ್ಮ ಸಾಮಾಜಿಕ, ರಾಜಕೀಯ ವಾತಾವರಣಗಳು ಮನುಷ್ಯನೊಳಗೆ ಕೇಡು, ಹಿಂಸೆ, ದುರಾಸೆಗಳನ್ನು ತುಂಬುತ್ತಿವೆ. ಇವು ಹೊರಗಿನಿಂದ ಬಂದ ಗುಣಗಳು. ಇವುಗಳ ವಶವಾಗದೆ ತನ್ನ ಮೂಲ ಗುಣಗಳೊಂದಿಗೆ ಬದುಕುವುದೆ ನಮಗಿರುವ ಸವಾಲು. ಈ ಸವಾಲನ್ನು ಎದುರಿಸುವ ಶಕ್ತಿಯನ್ನು ಮತ್ತು ಬಿತ್ತುವ ಕರ್ತವ್ಯವನ್ನು ಮಾಧ್ಯಮಗಳು ಮಾಡಬೇಕಾಗುತ್ತವೆ. 

ಅಶೋಕ ಚಕ್ರವರ್ತಿಗೆ ಮನುಷ್ಯತ್ವದ ಮಹತ್ವ  ಅರಿವಾಗಬೇಕಾದರೆ ಕಳಿಂಗದ ಘನಘೋರ ಯುದ್ಧ ನಡೆಯಬೇಕಾಯಿತು. ಗುಜರಾತ್ ನ ಮಾರಣಹೋಮದಿಂದ  ಕಾರಣಕರ್ತರು  ಮನುಷ್ಯತ್ವದ ಕಡೆಗೆ ಬದಲಾಗಿದ್ದೇ ಆದರೆ ಸಬ್ ಕಾ  ಸಾಥ್ ಎಂಬ ಘೋಷಣೆಗೆ  ಘನತೆಯ ಹೆಜ್ಜೆಗಳು  ಮೂಡಬಲ್ಲವು 

“ಕೊಲ್ಲಬೇಡ ಮತ್ತು ಹತ್ಯೆಗೆ ನೀನು‌ ಕಾರಣನಾಗಬೇಡ”  ಎಂಬ ಬುದ್ಧಗುರುವಿನ ಮಾತು ಎಲ್ಲಾ ಕಾಲಕ್ಕೂ ಎದೆಯ ಕೋಣೆಯ ಬೆಳಕಾಗಬೇಕಾದ, ಬೆಳಕಾಗಿಸಬೇಕಾದ  ವಿವೇಕ.

ಎ‌ನ್.ರವಿಕುಮಾರ್

ಪತ್ರಕರ್ತರು.

Related Articles

ಇತ್ತೀಚಿನ ಸುದ್ದಿಗಳು