Monday, August 4, 2025

ಸತ್ಯ | ನ್ಯಾಯ |ಧರ್ಮ

ಹರಿಯಾಣ ಐಎನ್‌ಎಲ್‌ಡಿ ಮುಖ್ಯಸ್ಥನ ಹತ್ಯೆ: ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಹಂತಕರು, ಎಫ್‌ಐಆರ್‌ನಲ್ಲಿ ಬಿಜೆಪಿ ಮುಖಂಡ ಸೇರಿ 7 ಜನರ ಹೆಸರು

ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಹರ್ಯಾಣ ಇಂಡಿಯನ್ ನ್ಯಾಷನಲ್ ಲೋಕ್ ದಳ (ಐಎನ್‌ಎಲ್‌ಡಿ) (Haryana Indian National Lok Dal (INLD) ನಫೆ ಸಿಂಗ್ ರಾಠಿ ಅವರ ವಾಹನದ ಮೇಲೆ ಗುಂಡಿನ ಮಳೆ ಸುರಿಸಿದ ಆರೋಪಿಗಳ ವಿಡಿಯೋ ತುಣುಕು ಪೊಲೀಸ್ ತನಿಖೆಯ ಸಮಯದಲ್ಲಿ ಕಣ್ಗಾವಲು ಕ್ಯಾಮೆರಾದಲ್ಲಿ ದೊರಕಿದೆ.

ಮೂಲಗಳ ಪ್ರಕಾರ, ಭಾನುವಾರ ರೈಲ್ವೇ ಕ್ರಾಸಿಂಗ್‌ನಲ್ಲಿ ರಾಠಿ ಅವರ ಕಾರು ನಿಂತಿದೆ. ಇದರ ಬೆನ್ನಲ್ಲೇ ಐಎನ್‌ಎಲ್‌ಡಿ ಪಕ್ಷದ ಮುಖ್ಯಸ್ಥರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಸುಮಾರು 70 ವರ್ಷ ವಯಸ್ಸಿನ ರಾಠಿ ಮತ್ತು ಅವರ ಸಹಾಯಕರಲ್ಲಿ ಒಬ್ಬರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಹಂತಕರು ಬಳಸಿರುವ ಶಂಕಿತ ಹುಂಡೈ ಐ10 ಕಾರನ್ನು ಪೊಲೀಸರು ಇದೀಗ ಹುಡುಕುತ್ತಿದ್ದಾರೆ. ದಾಳಿಯ ವೇಳೆ ರಾಠಿ ಮುಂಭಾಗದಲ್ಲಿ ಕುಳಿತಿದ್ದರು ಮತ್ತು ಅವರ ಸೋದರಳಿಯ ಚಾಲನೆ ಮಾಡುತ್ತಿದ್ದರು. INLD ನಾಯಕ ಜೈಕಿಶನ್ ದಲಾಲ್ ಮತ್ತು INLD ನಾಯಕನ ಭದ್ರತೆಗೆ ನಿಯೋಜಿಸಲಾದ ಗನ್ ಮ್ಯಾನ್ ಹಿಂಭಾಗದಲ್ಲಿ ಕುಳಿತಿದ್ದರು.

ಸುಮಾರು 20 ಸುತ್ತುಗಳಷ್ಟು ಗುಂಡು ಹಾರಿಸಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ರಾಠಿಯವರನ್ನು ಗುರಿಯಾಗಿಸಿಕೊಂಡಿದ್ದವು ಮೂಲಗಳು ತಿಳಿಸಿವೆ.

ಎಫ್‌ಐಆರ್‌ನಲ್ಲಿ ಬಿಜೆಪಿ ಮುಖಂಡ ಸೇರಿದಂತೆ 7 ಮಂದಿಯ ಹೆಸರಿದೆ

ಬಿಜೆಪಿ ಮುಖಂಡ ಮತ್ತು ಮಾಜಿ ಶಾಸಕ ನರೇಶ್ ಕೌಶಿಕ್ ಮತ್ತು ಬಹದ್ದೂರ್‌ಗಢ ಮುನ್ಸಿಪಲ್ ಕಾರ್ಪೊರೇಷನ್ ಅಧ್ಯಕ್ಷೆ ಸರೋಜ್ ರಾಠಿ ಅವರ ಹಲವಾರು ಕುಟುಂಬ ಸದಸ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ನಂತರ ಎಫ್‌ಐಆರ್‌ಗೆ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಳೆದ ವರ್ಷ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ರಾಠಿ ಹೆಸರು ಸುದ್ದಿಯಾಗಿತ್ತು. ಹರಿಯಾಣದ ಮಾಜಿ ಸಚಿವ ಮಂಗೇ ರಾಮ್ ನಂಬರ್‌ದಾರ್ ಅವರ ಪುತ್ರ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ರಾಠಿ ವಿರುದ್ಧ
ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ರಾಠಿ ಮತ್ತು ಅವರ ಸೋದರಳಿಯನ ವಿರುದ್ಧ ಕಿರುಕುಳ ಮತ್ತು ಭೂಕಬಳಿಕೆಯ ಆರೋಪಗಳೂ ಕೇಳಿಬಂದಿದ್ದವು. ಕಳೆದ ವರ್ಷ ಜನವರಿ 24ರಂದು ಹೈಕೋರ್ಟ್ ಈ ಐಎನ್‌ಎಲ್‌ಡಿ ನಾಯಕನಿಗೆ ನಿರೀಕ್ಷಣಾ ಜಾಮೀನು ನೀಡಿತ್ತು.

ಐಎನ್‌ಎಲ್‌ಡಿ ನಾಯಕನ ಹತ್ಯೆಯಲ್ಲಿ ನಂಬರ್‌ದಾರ್‌ನ ಕೈವಾಡವಿದೆ ಎಂದು ರಾಠಿ ಕುಟುಂಬದ ಸದಸ್ಯರು ಶಂಕಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಕೆಲವೇ ವಾರಗಳಿರುವಾಗ ನಡೆದ ಈ ದಾಳಿಯು ಬಿಜೆಪಿ ಆಡಳಿತದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದು ಆರೋಪಿಸಿ ವಿರೋಧ ಪಕ್ಷಗಳು ಕಿಡಿಕಾರಿವೆ. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಒಬ್ಬ ಆರೋಪಿಯನ್ನೂ ಬಿಡುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಐಎನ್‌ಎಲ್‌ಡಿ ನಾಯಕ ಅಭಯ್ ಚೌಟಾಲಾ ಮಾತನಾಡಿ, ರಾಠಿ ತಮ್ಮ ಜೀವಕ್ಕೆ ಬೆದರಿಕೆಯಿರುವುದನ್ನು ಉಲ್ಲೇಖಿಸಿ ಹೆಚ್ಚಿನ ಭದ್ರತೆಯನ್ನು ಕೋರಿದ್ದರು, ಆದರೆ ಅವರಿಗೆ ಭದ್ರತೆ ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page