ಪ್ರಜೆಗಳ ಕುಂದುಕೊರತೆ ಪರಿಹಾರಕ್ಕೆ ಪ್ರಜಾಸೇವಾ ಕಾನೂನು ಚೌಕಟ್ಟು ರೂಪಿಸಿರುವುದು ಸ್ವತಂತ್ರ ಭಾರತದಲ್ಲೇ ಮೊದಲು: ಕೆ. ಎಂ. ಶಿವಲಿಂಗೇಗೌಡ

ಸಕಲೇಶಪುರ, ಸೆ.19: ಬರದ ನಾಡಿನವರು ಮಳೆ ವೀಕ್ಷಣೆಗೆ ಸಕಲೇಶಪುರಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ಸಕಲೇಶಪುರದಲ್ಲೇ ಮಳೆ ಕೊರತೆ ಉಂಟಾಗಿದೆ. ಬೆಳೆ ನಷ್ಟವಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಕಲೇಶಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು, ಶೀಘ್ರದಲ್ಲೇ ಬರ ಪರಿಹಾರ ಒದಗಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಭರವಸೆ ನೀಡಿದರು.

ಸಕಲೇಶಪುರ ತಾಲ್ಲೂಕು ಮಟ್ಟದ ಪ್ರಜಾಸೇವಾ ಆಂದೋಲನದ ಸಭೆಯಲ್ಲಿ ಮಾತನಾಡಿದ ಕೆ. ಎಂ. ಶಿವಲಿಂಗೇಗೌಡ ಅವರು ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡುವ ಮೂಲಕ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ತಾಲ್ಲೂಕಿನ ರೈತರ ಹಿತಕಾಪಾಡಬೇಕು ಎಂದರು.

ಸ್ವಕ್ಷೇತ್ರ ಅರಸೀಕೆರೆಯಲ್ಲಿ ಜನರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆ. ಇದಕ್ಕೆ ಪೂರಕ ಎಂಬಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಪ್ರಜಾಸೇವಾ ಆಂದೋಲನವನ್ನು ಘೋಷಿಸಿದಾಗ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಅಭಿನಂದನೆ ಸಲ್ಲಿಸಿದ್ದೆ. ಪ್ರಜೆಗಳ ಸಂಕಷ್ಟಗಳನ್ನು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ನೇರವಾಗಿ ಜನರ ಅಹವಾಲುಗಳನ್ನು ಸ್ವೀಕರಿಸಿ, ನಿಗದಿತ ಸಮಯಲ್ಲಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಕಾನೂನನ್ನು ಜಾರಿಗೊಳಿಸಿರುವುದು ಸ್ವತಂತ್ರ ಭಾರತದಲ್ಲೇ ಮೊದಲಾಗಿದೆ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು. ಈ ನಿಟ್ಟಿನಲ್ಲಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದಾಗಿ ಪ್ರಜೆಗಳ ಹಿತವನ್ನು ಕಾಪಾಡುವ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಸಭೆಯಲ್ಲಿ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಮಂಜುನಾಥ್, ಜಿಲ್ಲಾಧಿಕಾರಿ ಲತಾಕುಮಾರಿ, ಸಕಲೇಶಪುರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮುರಳಿ ಮೋಹನ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು