ತುಮಕೂರು/ಹಾಸನ, ಸೆ. 18: ರಾಜ್ಯದಲ್ಲಿ ಬರಪರಿಸ್ಥಿತಿ ಇರುವುದರಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳು ಸಮರೋಪಾದಿಯಾಗಿ ಪೂರ್ಣಗೊಳ್ಳಬೇಕು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಇಂದು ಕೆ. ಎಂ. ಶಿವಲಿಂಗೇಗೌಡ ಅವರು ಜಲಸಂಪನ್ಮೂಲ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ಜೊತೆ ಎತ್ತಿನಹೊಳೆ ಯೋಜನೆ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಮೂಲಕ ನೀರಿನ ನಿರೀಕ್ಷೆಯಲ್ಲಿರುವ ಜನರಿಗೆ ಸಹಕರಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದ ಕೆಲಸಗಳು ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಶಿವಲಿಂಗೇಗೌಡ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕೋಲಾರ, ಚಿಕ್ಕಬಳ್ಳಾಪುರದ ಜನರು ಕುಡಿಯುವ ನೀರಿನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪರಿಷ್ಕರಿಸಿದ ಚರಂಡಿ ನೀರನ್ನು ಉಪಯೋಗಿಸುತ್ತಿದ್ದಾರೆ. ಹೇಗಾದರೂ ಮಾಡಿ ಉಭಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂಬ ಸದುದ್ದೇಶದಿಂದ ಸುಮಾರು 4.20 ಸಾವಿರ ಕೋಟಿ ರೂ. ಮೊತ್ತವನ್ನು ವಿನಿಯೋಗಿಸುತ್ತಿದ್ದೇವೆ. ಜೊತೆಗೆ ಅರಸೀಕೆರೆ, ತುಮಕೂರಿನ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಸುವ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಸ್ಥಳೀಯರು, ರಾಜ್ಯ ಸರ್ಕಾರ ಹಾಗೂ ಒಕ್ಕೂಟ ಸರ್ಕಾರಗಳು ಜೊತೆಯಾಗಿ ಕೆಲಸ ಮಾಡಿದರೆ ಶೀಘ್ರದಲ್ಲೇ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ. ನಮ್ಮ ಬಹು ವರ್ಷಗಳ ಕನಸು ನನಸಾಗಲಿದೆ ಎಂದರು.
ತುಮಕೂರು ಜಿಲ್ಲಾ ಪ್ರವಾಸ:
ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಂಚಿಗಾನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಗುರುತ್ವ ಕಾಲುವೆ ಪ್ಯಾಕೇಜ್ 11ರ ಕಾಮಗಾರಿ ಹಾಗೂ ತಿಪಟೂರು ತಾಲ್ಲೂಕಿನ ಚೌಡ್ಲಾಪುರದಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಗುರುತ್ವ ಕಾಲುವೆ ಪ್ಯಾಕೇಜ್-18ರ ಕಾಮಗಾರಿ ಹಾಗೂ ತಿಪಟೂರು ಬೈಪಾಸ್ ಎಲಿವೇಟೆಡ್ ಟ್ರಫ್ (Elevated Trough) ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಹಾಸನ ಜಿಲ್ಲಾ ಪ್ರವಾಸ:
ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ತಳಲುತೊರೆಯಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಗುರುತ್ವ ಕಾಲುವೆ ಪ್ಯಾಕೇಜ್-8ರ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಶೀಘ್ರದಲ್ಲೇ ತಾಲ್ಲೂಕಿನ ಜನತೆ ನದಿ ನೀರನ್ನು ನೋಡುವ ದಿನಗಳು ಬರಲಿವೆ. ಕುಡಿಯುವ ನೀರು ಸಿಗಲಿದೆ, ಕೆರೆಗಳು ತುಂಬಲಿವೆ, ಅಂತರ್ಜಲ ವೃದ್ಧಿಸಿ ಕೊಳವೆಬಾವಿಗಳಲ್ಲಿ ನೀರು ಸಿಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಬಳಿಕ ಅರಸಿಕೆರೆ ತಾಲ್ಲೂಕಿನ ನಾಯ್ಕನಕೆರೆ ಕಾವಲ್ ನಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಗುರುತ್ವ ಕಾಲುವೆ ಪ್ಯಾಕೇಜ್-6ರ ಕಾಮಗಾರಿ, ಬೇಲೂರು ತಾಲ್ಲೂಕಿನ ಐದಳ್ಳ ಕಾವಲ್ ನಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಗುರುತ್ವ ಕಾಲುವೆ ಪ್ಯಾಕೇಜ್ 4, 5 ಮತ್ತು 6ರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರದಲ್ಲಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆ ಹಂತ 1ರ ಏತಕಾಮಗಾರಿಯ ವಿತರಣ ತೊಟ್ಟಿ 3 ಹಾಗೂ 4ರ ಕಾಮಗಾರಿ ವೀಕ್ಷಿಸಿದರು. ಬಳಿಕ ಮಾರನಹಳ್ಳಿಯ 8 ವಿಂಡ್ ವೇರ್ ಗಳನ್ನು, ಬೃಹತ್ ಪಂಪ್‌ಹೌಸ್‌ಗಳು ಮತ್ತು ವಿದ್ಯುತ್ ಮೋಟಾರ್‌ಗಳನ್ನು ವೀಕ್ಷಿಸಿದರು.
