Wednesday, December 24, 2025

ಸತ್ಯ | ನ್ಯಾಯ |ಧರ್ಮ

ಕೆಎಂಎಫ್ ವತಿಯಿಂದ ರೈತರಿಂದಲೇ ನೇರವಾಗಿ ಮೆಕ್ಕೆ ಜೋಳ ಖರೀದಿ ಮಾಡಿ – ಹೆಚ್.ಡಿ. ರೇವಣ್ಣ ಆಗ್ರಹ

ಹಾಸನ: ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅತಿ ಹೆಚ್ಚು ಮಳೆಯಿಂದ ಶೇ. 50 ರಷ್ಟು ಮೆಕ್ಕೆ ಜೋಳ ನಷ್ಟವಾಗಿದ್ದು ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಪರ ನಿಲ್ಲಬೇಕಾದ ಸರ್ಕಾರ ಖಾಸಗಿಯವರಿಗೆ ಅನುಕೂಲವಾಗುವ ರೀತಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಎಂಎಫ್ ವತಿಯಿಂದ ಖಾಸಗಿಯವರ ಬಳಿ 29 ಸಾವಿರ‌ ಮೆಟ್ರಿಕ್ ಟನ್ ಜೋಳ ಖರೀದಿ ಮಾಡಿದ್ದಾರೆ.‌ ರೈತರ ಬಳಿ ಕೇವಲ ಹತ್ತು ಸಾವಿರ ಮೆಟ್ರಿಕ್ ಟನ್ ಖರೀದಿ ಮಾಡಲು ಮುಂದಾಗಿದ್ದಾರೆ. ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಖಾಸಗಿಯವರನ್ನು ಹತ್ತಿರ ಕೂಡ ಸುಳಿಯಲು ಬಿಟ್ಟಿರಲಿಲ್ಲ. ಖಾಸಗಿ ಪಶು ಆಹಾರ ಘಟಕಗಳನ್ನು ಮುಚ್ಚಿಸಿದ್ದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಹಕಾರಿ ಸಚಿವ ರಾಗಿರುವುದರಿಂದ ಕ್ವಿಂಟಾಲ್‌ಗೆ 24 ಸಾವಿರದಂತೆ ರೈತರಿಂದಲೇ ಮೆಕ್ಕೆ ಜೋಳ ಖರೀದಿ ಮಾಡಬೇಕು ಜೊತೆಗೆ ಪಶು ಆಹಾರಕ್ಕೆ ಅಗತ್ಯವಿರುವ ವಸ್ತುಗಳನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು. ಹಾಸನ ಜಿಲ್ಲೆಯಲ್ಲಿ ಹಿಂದೆ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದರು. ನಾನು ಕೂಡ 40 ಎಕರೆಯಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದೆ ಇಂದು ಮಳೆ ಹೆಚ್ಚಳ, ಅಂಗಮಾರಿ ರೋಗ ಕಾರಣಕ್ಕೆ ಇಂದು ಕೇವಲ 8 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಇಳಿದಿದೆ. ಇದೀಗ ಜಿಲ್ಲೆಯಲ್ಲಿ 2.20 ಲಕ್ಷ ಹೆಕ್ಟೇರ್ ನಲ್ಲಿ ಮೆಕ್ಕೆ ಜೋಳ ಬೆಳೆದಿದ್ದಾರೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಖಾಸಗಿಯವರಿಂದ ಮೆಕ್ಕೆ ಜೋಳ ಖರೀದಿಸುವ‌ ಬದಲು ರೈತರಿಂದಲೇ ನೇರವಾಗಿ ಖರೀದಿಸಲು ಏನು ಸಮಸ್ಯೆ? ಖಾಸಗಿಯವರು ಒಂದೂವರೆ ತಿಂಗಳ ಹಿಂದೆಯೇ ರೈತರಿಂದ ಒಂದೂವರೆ ಸಾವಿರಕ್ಕೆ ಖರೀದಿಸಿ ಈಗ 2500 ರೂ. ಗಳಿಗೆ ಕೆಎಂಎಫ್ ಗೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ರೇವಣ್ಣ, ಡಿಸಿ ದಿನನಿತ್ಯ ಕೇವಲ ಮೀಟಿಂಗ್ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಯಾವ ಅಧಿಕಾರಿಗಳನ್ನು ಕೇಳಿದರು ಡಿಸಿ ಮೀಟಿಂಗ್ ನಲ್ಲಿ ಇದ್ದೇನೆ ಎಂದು ಹೇಳುತ್ತಾರೆ. ಆದರೆ ಅಭಿವೃದ್ಧಿ ‌ಮಾತ್ರ ಆಗುತ್ತಿಲ್ಲ ಎಂದು ಕಿಡಿಕಾರಿದರು.

ಯಗಚಿ – ಕಾಮಸಮುದ್ರ ನಾಲೆ ಕೆಲಸ ಪೂರ್ಣಗೊಳ್ಳದ ಕಾರಣ ಎಂಟು ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಆಗುತ್ತಿಲ್ಲ. ಮುಖ್ಯಮಂತ್ರಿಗಳು ದಯಮಾಡಿ ಈ ಕಡೆ ಕಣ್ಣು ಬಿಡಿ, ಎತ್ತಿನಹೊಳೆ, ಮೇಕೆದಾಟು ಆಮೇಲೆ ಮಾಡಿಕೊಳ್ಳಿ. ಭೂ ಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಭೂ ಸ್ವಾಧೀನಕ್ಕೆ ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page