Home ಅಪಘಾತ ಚಲಿಸುತ್ತಿದ್ದ ಕಾರಿನಲ್ಲೇ ಚಾಕುವಿನಿಂದ ದಾಳಿ, ಪೆಟ್ರೋಲ್ ಬಾಂಬ್‌ನಿಂದ ಕಾರು ಸ್ಪೋಟ, ಯುವಕ ಸ್ಥಳದಲ್ಲೇ ಸಾ*ವು

ಚಲಿಸುತ್ತಿದ್ದ ಕಾರಿನಲ್ಲೇ ಚಾಕುವಿನಿಂದ ದಾಳಿ, ಪೆಟ್ರೋಲ್ ಬಾಂಬ್‌ನಿಂದ ಕಾರು ಸ್ಪೋಟ, ಯುವಕ ಸ್ಥಳದಲ್ಲೇ ಸಾ*ವು

0

ತುಮಕೂರು: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ನಡೆದ ಭೀಕರ ಘಟನೆಯೊಂದು ಆತಂಕ ಸೃಷ್ಟಿಸಿದೆ. ಚಲಿಸುತ್ತಿದ್ದ ಕಾರಿನೊಳಗೆ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಯುವಕನೊಬ್ಬ, ಬಳಿಕ ಕಾರಿನಲ್ಲೇ ಸಂಭವಿಸಿದ ಸ್ಫೋಟದಲ್ಲಿ ಸಜೀವ ದಹನವಾಗಿದ್ದು, ಯುವತಿ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮೃತನನ್ನು ಬೆಂಗಳೂರಿನ ನಾಗೇಂದ್ರ (30) ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ಯುವತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಮ್ಯಾ ಉಲ್ಲಾಸ್ (23) ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ರಮ್ಯಾ ಮತ್ತು ನಾಗೇಂದ್ರ ಬೆಂಗಳೂರಿನಿಂದ ಅಂಕೋಲಾಕ್ಕೆ ತೆರಳಲು ಖಾಸಗಿ ಕಾರೊಂದನ್ನು ಬಾಡಿಗೆಗೆ ಪಡೆದು ಪ್ರಯಾಣಿಸುತ್ತಿದ್ದರು. ಕಾರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ತಲುಪುತ್ತಿದ್ದಂತೆ ಇಬ್ಬರ ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ಆರಂಭಗೊಂಡಿದೆ ಎನ್ನಲಾಗಿದೆ.

ಜಗಳ ತೀವ್ರ ಸ್ವರೂಪ ಪಡೆದುಕೊಂಡ ವೇಳೆ ನಾಗೇಂದ್ರ, ತನ್ನ ಬಳಿ ಇದ್ದ ಚಾಕುವಿನಿಂದ ರಮ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಾಯಗೊಂಡ ರಮ್ಯಾ, ಜೀವ ಉಳಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ಕಾರಿನಿಂದಲೇ ಹೊರಗೆ ಜಿಗಿದಿದ್ದಾರೆ ಎನ್ನಲಾಗಿದೆ.

ಈ ದೃಶ್ಯ ಕಂಡ ಚಾಲಕ ತಕ್ಷಣ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾನೆ. ಇದೇ ವೇಳೆ ಕಾರಿನೊಳಗಿದ್ದ ನಾಗೇಂದ್ರ ಎಲ್ಲಾ ಬಾಗಿಲುಗಳನ್ನು ಲಾಕ್ ಮಾಡಿಕೊಂಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಕಾರಿನೊಳಗೆ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ವಾಹನ ಹೊತ್ತಿ ಉರಿದಿದೆ.

ಪೊಲೀಸರ ಪ್ರಾಥಮಿಕ ಶಂಕೆಯಂತೆ, ನಾಗೇಂದ್ರ ತನ್ನೊಂದಿಗೆ ತಂದಿದ್ದ ದಹನಕಾರಿ ವಸ್ತು ಅಥವಾ ಪೆಟ್ರೋಲ್ ಆಧಾರಿತ ಸ್ಫೋಟಕವನ್ನು ಬಳಸಿರಬಹುದು. ಬೆಂಕಿ ಕ್ಷಣಾರ್ಧದಲ್ಲಿ ಕಾರನ್ನು ಆವರಿಸಿದ್ದರಿಂದ ನಾಗೇಂದ್ರ ಹೊರಬರಲು ಸಾಧ್ಯವಾಗದೇ ಕಾರಿನಲ್ಲೇ ಸಾವನ್ನಪ್ಪಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ರಮ್ಯಾ ಅವರನ್ನು ತಕ್ಷಣ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ನಡುವಿನ ಸಂಬಂಧ, ಜಗಳದ ನಿಖರ ಕಾರಣ ಹಾಗೂ ಘಟನೆಯ ಹಿಂದಿನ ಉದ್ದೇಶಗಳ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

You cannot copy content of this page

Exit mobile version