ಕೋಗಿಲು ಲೇಔಟ್ ವಿವಾದ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಸರ್ಕಾರದ ಕ್ರಮಗಳ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, “ವಲಸಿಗರಿಗೆ ಯಾಕೆ ಮಣೆ?” ಎಂದು ವಾಗ್ದಾಳಿ ನಡೆಸಿವೆ. ಈ ನಡುವೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳೊಂದಿಗೆ ವಿಪಕ್ಷ ನಾಯಕ ಆರ್. ಅಶೋಕ್ ಸಭೆ ನಡೆಸಿ, ಒತ್ತುವರಿ ತೆರವು ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಜಿಬಿಎ ಘನತ್ಯಾಜ್ಯ ನಿರ್ವಹಣೆ ಎಂಡಿ ಕರೀಗೌಡ ಹಾಗೂ ಬೆಂಗಳೂರು ಉತ್ತರ ವಲಯದ ತಹಶೀಲ್ದಾರ್ ಮಧುರಾಜ್ ಅವರೊಂದಿಗೆ ಆರ್. ಅಶೋಕ್ ಚರ್ಚೆ ನಡೆಸಿದ್ದು, ಬಳಿಕ ಬೆಂಗಳೂರು ಜಿಲ್ಲಾಧಿಕಾರಿಯವರನ್ನೂ ಭೇಟಿಯಾಗಿ ವಿಷಯದ ವಿವರಗಳನ್ನು ತಿಳಿದುಕೊಂಡಿದ್ದಾರೆ.
ಪುನರ್ವಸತಿ ನಿರ್ಧಾರಕ್ಕೆ ಆಕ್ಷೇಪ
ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ನಿರ್ಧರಿಸಿದ್ದು, ಬೈಯಪ್ಪನಹಳ್ಳಿಯಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ಸುನೀಲ್ ಕುಮಾರ್, “ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡವರಿಗೆ ತೆರಿಗೆದಾರರ ಹಣದಲ್ಲಿ ಪುನರ್ವಸತಿ ಕಲ್ಪಿಸುವುದೇ ಅಕ್ರಮ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ರೀತಿಯ ನಿರ್ಧಾರ ಕೈಗೊಂಡರೆ, ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೂ ಇದೇ ನ್ಯಾಯ ಅನ್ವಯಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ 94(ಸಿ) ಅಡಿ ಸಲ್ಲಿಸಿದ್ದ ಲಕ್ಷಾಂತರ ಅರ್ಜಿಗಳನ್ನು ವಜಾಗೊಳಿಸಿದೆ ಎಂದು ಉಲ್ಲೇಖಿಸಿದ ಅವರು, ಗ್ರಾಮಾಂತರ ಪ್ರದೇಶಗಳ ಸಮಸ್ಯೆಯನ್ನು ವರ್ಷಗಳ ಕಾಲ ಬಾಕಿ ಇಟ್ಟಿರುವ ಕಾಂಗ್ರೆಸ್ ಸರ್ಕಾರ, ಅಕ್ರಮ ವಲಸಿಗರ ವಿಚಾರದಲ್ಲಿ ಉದಾರತೆ ತೋರುತ್ತಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ನಿಜವಾಗಿಯೂ ವಲಸಿಗರ ಸಮಸ್ಯೆ ಬಗೆಹರಿಸುವ ಮನಸ್ಸಿದ್ದರೆ ಮಾನವೀಯತೆ ತೋರಬೇಕು ಎಂದ ಅವರು, ವಕ್ಫ್ ಭೂಮಿಯಲ್ಲಿ ಪುನರ್ವಸತಿ ಕಲ್ಪಿಸುವ ಬಗ್ಗೆ ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರು. “ವಕ್ಫ್ ಭೂಮಿ ಬಡವರಿಗಾಗಿ ಇರುವುದಲ್ಲವೇ?” ಎಂದು ಪ್ರಶ್ನಿಸಿದ ಅವರು, ತೆರಿಗೆದಾರರ ಹಣದಿಂದ ನಡೆಯುವ ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಇತರ ಕಲ್ಯಾಣ ಯೋಜನೆಗಳಲ್ಲಿ ಅವಕಾಶ ನೀಡಿದರೆ, 94(ಸಿ) ಅರ್ಜಿದಾರರಿಗೂ ಅದೇ ರೀತಿಯ ಪುನರ್ವಸತಿ ನೀಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಸಮಪಾಲು ತತ್ವಕ್ಕೆ ವಿರುದ್ಧವಾಗಿವೆ ಎಂದು ಟೀಕಿಸಿದ ಸುನೀಲ್ ಕುಮಾರ್, ಎಲ್ಲರಿಗೂ ಸಮಾನ ನ್ಯಾಯ ಅನ್ವಯಿಸಬೇಕು ಎಂಬುದಾಗಿ ಒತ್ತಾಯಿಸಿದರು.
