Wednesday, July 3, 2024

ಸತ್ಯ | ನ್ಯಾಯ |ಧರ್ಮ

ಟಿ 20 ಆವೃತ್ತಿಯಿಂದ ಕೊಹ್ಲಿ ನಿವೃತ್ತರಾಗಬೇಕು ; ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅಭಿಪ್ರಾಯ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ, ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯವರನ್ನು ಹಾಡಿ ಹೊಗಳಿದ್ದಾರೆ. T20 ವಿಶ್ವಕಪ್ ನ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಜೊತೆಗಿನ ಪಂದ್ಯದ ಕೊನೆಯ ಘಟ್ಟದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದನ್ನು ಸ್ಮರಿಸಿ ಹೊಗಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ‘ವಿರಾಟ್ ಕೊಹ್ಲಿಯವರು ತಮ್ಮ ಅಬ್ಬರದ ಆಟದಿಂದ ಮತ್ತೆ ತಾನು ಎಂತಹ ಪಂದ್ಯದಲ್ಲಿ ಆಡಲೂ ಶಕ್ತ ಎಂಬುದನ್ನ ತೋರಿಸಿದ್ದಾರೆ. ಆದರೆ ಆಟಗಾರನೊಬ್ಬ ರ್ಯಾಂಕಿಂಗ್ ಪಟ್ಟಿಯ ಉನ್ನತ ಶ್ರೇಣಿಯಲ್ಲಿ ಇದ್ದಾಗಲೇ ಆತ ಆ ಆವೃತ್ತಿಯಿಂದ ನಿವೃತ್ತರಾಗಬೇಕು” ಎಂದು ಸಲಹೆ ಕೂಡಾ ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡುತ್ತಾ ಅನಿರೀಕ್ಷಿತವಾಗಿ ಕೊಹ್ಲಿ ಆಟದ ಬಗ್ಗೆ ಪ್ರಸ್ತಾಪಿಸಿ ಈ ಮಾತನ್ನು ಹೇಳಿದ್ದಾರೆ. “ಏಕೆಂದರೆ ವಿರಾಟ್ ಕೊಹ್ಲಿ ತನ್ನ ಸಂಪೂರ್ಣ ಶಕ್ತಿಯನ್ನು ಕೇವಲ T20 ಕ್ರಿಕೆಟ್‌ಗೆ ಹಾಕುವುದನ್ನು ನಾನು ಬಯಸುವುದಿಲ್ಲ. ಮೊನ್ನೆಯ ಪಂದ್ಯದಂತೆ ಇದೇ ರೀತಿಯ ಬದ್ಧತೆಯೊಂದಿಗೆ, ಅವರು ಏಕದಿನ ಸರಣಿಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರೆ ತ್ರಿಶತಕಗಳನ್ನು ಗಳಿಸುವಷ್ಟು ಕೊಹ್ಲಿ ಸಮರ್ಥರಿದ್ದಾರೆ.” ಎಂದು ಅಖ್ತರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

“ಒಬ್ಬ ವ್ಯಕ್ತಿ ಕೆಳಗೆ ಬಿದ್ದಾಗ ತನ್ನ ಆತ್ಮ ವಿಶ್ವಾಸದಿಂದ ಪುನರುಜ್ಜೀವನಗೊಳಿಸಬೇಕು. ಆ ಆತ್ಮವಿಶ್ವಾಸವನ್ನು ಕ್ರೋಢೀಕರಿಸಿದಾಗ ಅದು ಮುಂದುವರೆಯುತ್ತದೆ‌. ವಿರಾಟ್ ಕೊಹ್ಲಿ ಅದೇ ರೀತಿಯ ವ್ಯಕ್ತಿತ್ವದವರಾಗಿದ್ದಾರೆ.” ಎಂದು ಅಖ್ತರ್ ಹೇಳಿದ್ದಾರೆ. “ಭಾರತ ಪಾಕಿಸ್ತಾನದ ಪಂದ್ಯದಲ್ಲಿ ಅವರು ತಮ್ಮ ಜೀವನದ ದೊಡ್ಡ ಇನ್ನಿಂಗ್ಸ್ ಆಡಿದರು. ಅವರು ಇನ್ನು ಮುಂದೆಯೂ ಅಬ್ಬರದ ಬ್ಯಾಟಿಂಗ್ ಅನ್ನು ಆಡಬಹುದು. ಏಕೆಂದರೆ ಅವರು ಆತ್ಮ ವಿಶ್ವಾಸದ ವ್ಯಕ್ತಿತ್ವ ಹೊಂದಿದ್ದಾರೆ” ಎಂದು ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಅಖ್ತರ್ ಅವರು ಪಾಕಿಸ್ತಾನ ತಂಡದ ಪ್ರದರ್ಶನವನ್ನು ಕೂಡ ಹೊಗಳಿ, ಪಾಕಿಸ್ತಾನ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. “ಪಾಕಿಸ್ತಾನ ಅದ್ಭುತವಾಗಿ ಉತ್ತಮ ಪ್ರದರ್ಶನ ನೀಡಿದೆ. ನಿರಾಶೆಗೊಳ್ಳಬೇಡಿ, ನೀವೆಲ್ಲರೂ ನಿಜವಾಗಿಯೂ ಚೆನ್ನಾಗಿ ಆಡಿದ್ದೀರಿ. ಭಾರತ ಕೂಡ ಉತ್ತಮ ಪ್ರದರ್ಶನ ನೀಡಿದೆ. ಕೊನೆಯ ಹಂತದಲ್ಲಿ ಅವರು ಇತಿಹಾಸದಲ್ಲಿ ಅತ್ಯುತ್ತಮ ಪಂದ್ಯಗಳಲ್ಲಿ ಒಂದನ್ನು ಗೆದ್ದರು. ಇದು ಪರಿಪೂರ್ಣವಾದ ಒಂದು ವಿಶ್ವಕಪ್ ಪಂದ್ಯವಾಗಿತ್ತು. ಅದು ಎಲ್ಲವನ್ನೂ ಹೊಂದಿತ್ತು‌. ಕ್ಯಾಚ್, ರನ್ ಔಟ್, ನೋ ಬಾಲ್, ವಿವಾದಗಳು, ಸ್ಟಂಪಿಂಗ್.. ಎಲ್ಲವೂ” ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

“ವಿಶ್ವಕಪ್ ಕ್ರಿಕೆಟ್ ಈಗಷ್ಟೇ ಪ್ರಾರಂಭವಾಗಿದೆ, ಭಾರತ-ಪಾಕಿಸ್ತಾನ ಆಡಿದಾಗ ಮಾತ್ರ ನಮಗೆ ವಿಶ್ವಕಪ್ ಪ್ರಾರಂಭವಾಗಿದೆ ಎಂಬ ಅನುಭವ ಆಗುತ್ತದೆ. ಮತ್ತು ಎರಡು ತಂಡಗಳು ಮತ್ತೆ ಮುಖಾಮುಖಿಯಾಗುತ್ತವೆ. ಇದೊಂದು ನಿರಂತರ ಪ್ರಕ್ರಿಯೆ. ಇದು ಹೀಗೆಯೇ ಮುಂದುವರೆಯಲಿ. ಪ್ರತಿಯೊಬ್ಬರಲ್ಲೂ ಸ್ಪರ್ಧಾ ಮನೋಭಾವ ಮೂಡಲಿ” ಎಂದು ತಮ್ಮದೇ ಶೈಲಿಯಲ್ಲಿ ವಿಶ್ವಕಪ್ ಮತ್ತು ಭಾರತ ಪಾಕಿಸ್ತಾನ ತಂಡದ ಆಟವನ್ನು ಶ್ಲಾಘಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು