Home ಬ್ರೇಕಿಂಗ್ ಸುದ್ದಿ ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ ಉಲ್ಟಾ ಹೊಡೆದ – ಫಲಹಾರಿ ಮಹಾರಾಜ್

ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ ಉಲ್ಟಾ ಹೊಡೆದ – ಫಲಹಾರಿ ಮಹಾರಾಜ್

ವೃಂದಾವನ: ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಲು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು ಹಣ ಪಡೆದಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಫಲಹಾರಿ ಮಹಾರಾಜ್ (ದಿನೇಶ್ ಶರ್ಮಾ) ಉಲ್ಟಾ ಹೊಡೆದಿದ್ದಾರೆ.

ಹೌದು.. ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಆಶ್ರಮ ಮತ್ತು ಕೊಹ್ಲಿ ದಂಪತಿಯ ಆಶ್ರಮ ಭೇಟಿಗೆ ಸಂಬಂಧಿಸಿದ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಆಶ್ರಮಕ್ಕೆ ಭೇಟಿ ನೀಡಲು ಖ್ಯಾತನಾಮರಿಗೆ ಹಣ ನೀಡಲಾಗುತ್ತಿದೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಫಲಹಾರಿ ಮಹಾರಾಜ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

2023ರಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರಿಗೆ 5 ಕೋಟಿ ರೂ ನೀಡಲಾಗಿತ್ತು ಎಂದು ನಾಲ್ಕು ದಿನಗಳ ಹಿಂದೆ ದಿನೇಶ್ ಶರ್ಮಾ ಆರೋಪಿಸಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ಫಲಹಾರಿ ಮಹಾರಾಜ್ ಹೇಳಿಕೆ ವ್ಯಾಪಕ ವಿವಾದಕ್ಕೆ ಗುರಿಯಾಗಿದ್ದು, ಈ ಸಂಬಂಧ ಆಶ್ರಮದ ವಾಸಿಗಳು ತೀವ್ರ ಕಿಡಿಕಾರಿದ್ದರು. ಅಲ್ಲದೆ ಭಕ್ತರೂ ಕೂಡ ಈ ಹೇಳಿಕೆಯನ್ನು ವಿರೋಧಿಸಿ ಫಲಹಾರಿ ಮಹಾರಾಜ್ ವಿರುದ್ಧ ಪ್ರತಿಭಟನೆ ನೀಡಿದ್ದರು.

ಸಭೆ ಬಳಿಕ ಕ್ಷಮೆಯಾಚನೆ

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಹನುಮಾನ್ ಟೆಕ್ರಿ ಆಶ್ರಮದಲ್ಲಿ ಸಂತರು ಸಭೆ ನಡೆಸಿದ್ದರು. ಈ ವೇಳೆ ಫಲಹಾರಿ ಮಹಾರಾಜ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಧ್ಯಾತ್ಮಿಕ ಗುರುಗಳು ಒತ್ತಾಯಿಸಿದ್ದರು.

ಅಲ್ಲದೆ, ಕ್ಷಮೆಯಾಚಿಸದಿದ್ದರೆ ಸಮುದಾಯದಿಂದ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸದ ಅಧ್ಯಕ್ಷರೂ ಆಗಿರುವ ದಿನೇಶ್ ಶರ್ಮಾ ಕ್ಷಮೆಯಾಚಿಸಿದ್ದಾರೆ.

ಆರೋಪ ಸಂಪೂರ್ಣ ಸುಳ್ಳು, ಆಧಾರರಹಿತ ಎಂದ ಕೊಹ್ಲಿ ಟೀಂ

ವಿರಾಟ್ ಕೊಹ್ಲಿ ಅವರಿಗೆ ಆಶ್ರಮ ಭೇಟಿಗಾಗಿ ಹಣ ನೀಡಲಾಗಿತ್ತು ಎಂಬ ಆರೋಪವನ್ನು ಅವರ ವಕ್ತಾರರು ಬುಧವಾರ ತಳ್ಳಿಹಾಕಿದ್ದರು. ಈ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಪ್ರೇಮಾನಂದ ಮಹಾರಾಜರ ಭಕ್ತರಾಗಿದ್ದು, ವೃಂದಾವನದಲ್ಲಿರುವ ಅವರ ಆಶ್ರಮಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೊಹ್ಲಿ ದಂಪತಿಯ ಆಶ್ರಮ ಭೇಟಿಗೆ ಸಂಬಂಧಿಸಿದಂತೆ ಫಲಹಾರಿ ಮಹಾರಾಜ್ ಮಾಡಿದ್ದ ಆರೋಪ ಹಾಗೂ ನಂತರದ ಕ್ಷಮೆಯಾಚನೆ ಇದೀಗ ಚರ್ಚೆಗೆ ಕಾರಣವಾಗಿದೆ.

You cannot copy content of this page

Exit mobile version