Sunday, June 16, 2024

ಸತ್ಯ | ನ್ಯಾಯ |ಧರ್ಮ

ಕೊಲೆಯಾದವನಿಗೆ ರು. 25 ಲಕ್ಷ, ಪದಕ ಗೆದ್ದವನಿಗೆ ರು. 8 ಲಕ್ಷ!

 “ಹಿಂದಿನ ಬಾರಿ ಪದಕ ಗೆದ್ದಾಗ ಕುಮಾರಸ್ವಾಮಿಯವರು ಬಹುದೊಡ್ಡ ಮೊತ್ತದ ಪ್ರೋತ್ಸಾಹ  ಧನವನ್ನೇನೋ ಘೋಷಿಸಿದರು. ಆದರೆ ಕೊಡಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದವರಿಗೆ ನಮ್ಮ ರಾಜ್ಯದಲ್ಲಿ ಬೆಲೆ ಇಲ್ಲ. ಅಂಥವರನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬೇರೆ ರಾಜ್ಯಗಳು ಕಂಚಿನ ಪದಕ ಗೆದ್ದವರಿಗೆ 30-40 ಲಕ್ಷ ಪ್ರೋತ್ಸಾಹ ಧನ ಘೋಷಿಸಿವೆ. ಆದರೆ ಈಗ ಕರ್ನಾಟಕ ಸರಕಾರ ಜುಜುಬಿ 8 ಲಕ್ಷ ಘೋಷಣೆ ಮಾಡಿದೆ. ಘೋಷಿಸಿದ ಪ್ರೋತ್ಸಾಹ ಧನವನ್ನೂ ಸಕಾಲದಲ್ಲಿ ಕೊಡುವುದಿಲ್ಲ. ಒಂದು ವರ್ಷಕ್ಕೆ ಬರುವ ಪ್ರೋತ್ಸಾಹ ಧನ ಎರಡು ಮೂರು ವರ್ಷ ವಿಳಂಬವಾಗಿ ಬರುತ್ತದೆ. ಕೂಡಲೇ ಕೊಟ್ಟರೆ ಮುಂದಿನ ಕ್ರೀಡಾ ಸಾಧನೆಗೆ ದಾರಿಯಾಗುತ್ತದೆ” ಎಂದು ಒಲಿಂಪಿಕ್ಸ್ ಪದಕ ವಿಜೇತ ಗುರುರಾಜ್ ಪೂಜಾರಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಭಾರತ 140 ಕೋಟಿ ಜನಸಂಖ್ಯೆಯ ದೇಶ. ಆದರೆ ಒಲಿಂಪಿಕ್ಸ್, ಏಶ್ಯನ್ ಗೇಮ್ಸ್, ಕಾಮನ್ ವೆಲ್ತ್ ನಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಮ್ಮ ಸಾಧನೆ, ಸ್ವಾತಂತ್ರ್ಯದ 75 ವರ್ಷಗಳ ಬಳಿಕ ಕೂಡಾ ಬಹಳ ಹೆಮ್ಮೆ ಪಡುವಂಥದ್ದೇನಲ್ಲ. ಒಲಿಂಪಿಕ್ಸ್ ನಲ್ಲಿ ಒಂದು ಕಂಚಿನ ಪದಕ ಬಂದರೂ ನಾವು ರೋಮಾಂಚನಗೊಳ್ಳುವ ಪರಿಸ್ಥಿತಿ. ಕಳೆದ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 205 ದೇಶಗಳು ಭಾಗವಹಿಸಿದ್ದವು. ಅದರಲ್ಲಿ 140 ಕೋಟಿ ಜನಸಂಖ್ಯೆಯ ಭಾರತ ಗಳಿಸಿದ ಪದಕಗಳು ಕೇವಲ 07. ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು. ಇತ್ತೀಚೆಗೆ ಕೊನೆಗೊಂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 72 ದೇಶಗಳು ಭಾಗವಹಿಸಿದ್ದು, ಅದರಲ್ಲಿ ಭಾರತ ಗಳಿಸಿದ ಪದಕ ಕೇವಲ 61. 22 ಚಿನ್ನ, 16 ಬೆಳ್ಳಿ, 23 ಕಂಚು. ಇಷ್ಟೊಂದು ಜನಸಂಖ್ಯೆ ಇರುವ ದೇಶಕ್ಕೆ ಇಷ್ಟು ಪದಕ ಸಾಕೇ? ಯಾಕೆ ಹೀಗೆ? ಇದಕ್ಕೆ ಕಾರಣ ಯಾರು?

ಇದಕ್ಕೆ ಕಾರಣ ಯಾರು?

ಇದಕ್ಕೆ ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ನಮ್ಮ ಮುಂದೆ ಬಂದು ನಿಲ್ಲುವುದು ನಮ್ಮ ಸರಕಾರಗಳ ಧೋರಣೆ. ಈವತ್ತು ದೇಶದಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ಕೊರತೆಯಿಲ್ಲ. ದೈಹಿಕ ಕ್ಷಮತೆಯಿದೆ, ಆಸಕ್ತಿ, ಛಲ, ಪರಿಶ್ರಮ ಇದೆ. ಆದರೆ ಅದಕ್ಕೆ ಬೆಂಬಲವಾಗಿ ವಿಪರೀತ ಮೂಲಸೌಕರ್ಯದ ಮತ್ತು ಆರ್ಥಿಕ ಸಮಸ್ಯೆಗಳಿವೆ. ಇಂದಿಗೂ ನಮ್ಮಲ್ಲಿ ಕ್ರೀಡಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದವರು ವೈಯಕ್ತಿಕ ಪರಿಶ್ರಮದ ಮೂಲಕ ಸಾಧನೆ ಮಾಡಿರುವುದೇ ಹೊರತು, ಸರಕಾರದ ಬೆಂಬಲದಿಂದಾಗಲೀ ಸಹಾಯದಿಂದಾಗಲೀ ಅಲ್ಲ. ಪದಕ ಗಳಿಸಿ ಬಂದವರನ್ನು ಹೊಗಳಿ ಹಾಡಿ ಅಟ್ಟಕ್ಕೇರಿಸಲಾಗುತ್ತದೆ, ಬಹುಮಾನ ಘೋಷಿಸಲಾಗುತ್ತದೆ. ಆದರೆ ಆ ಹೊಗಳಿಕೆಗಳು ಬಹುಪಾಲು ಕ್ಷಣಿಕ ಮತ್ತು ಸೋಗಲಾಡಿತನದ್ದು, ಹಾಗೆಯೇ ಬಹುಮಾನದ ಮೊತ್ತ ತೀರಾ ಅತ್ಯಲ್ಪ ಮತ್ತು ಅವು ಕೇವಲ ಕಾಗದದಲ್ಲಿ ಉಳಿಯುವುದೇ ಹೆಚ್ಚು. ಇದಕ್ಕೆ ಬಹಳ ಮುಖ್ಯ ಉದಾಹರಣೆ ಇತ್ತೀಚೆಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ನಮ್ಮ ಗುರುರಾಜ ಪೂಜಾರಿ.

ಯಾರೀ ಗುರುರಾಜ ಪೂಜಾರಿ?

ಗುರುರಾಜ ಪೂಜಾರಿ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು. ಭಾರತೀಯ ವಾಯುಪಡೆಯ ಉದ್ಯೋಗಿ. ಗುರುರಾಜ ಪೂಜಾರಿ ಎಂಬ ಒಬ್ಬ ಕ್ರೀಡಾಳು ನಮ್ಮ ನಡುವೆ ಇದ್ದಾರೆ ಎಂಬುದೇ ನಮ್ಮಲ್ಲಿ ಅನೇಕರಿಗೆ ಗೊತ್ತಿರಲಿಲ್ಲ. ಗೊತ್ತಾದುದು ಹಿಂದಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಅವರು ಪದಕ ಗೆದ್ದಾಗ. ಮೊನ್ನೆ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಾಗ  ಅವರನ್ನು ಹಾಡಿ ಹೊಗಳಿದ್ದೇನು, ಅವರು ಊರಿಗೆ ಮರಳಿದಾಗ ಸ್ವಾಗತಿಸಿದ್ದೇನು! ಮೊನ್ನೆ  ರಾಜ್ಯ ಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರು, ಸಂಸದ ನಳಿನ್ ಕುಮಾರ್ ಕಟೀಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಉಡುಪಿಗೆ ಬಂದಾಗ ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸಿದರು. ಆದರೆ ಇದು ಸಾಕೇ? ಕ್ರೀಡಾಳುಗಳಿಗೆ ಬೇಕಾಗುವುದು ಪ್ರಚಾರ, ಶುಷ್ಕ ಹೊಗಳಿಕೆಗಳಲ್ಲ. ಬೇಕಾಗಿರುವುದು ಅವರು ಮುಂದೆ ಸಾಧನೆ ಮಾಡಲು ಅಗತ್ಯ ಸಹಾಯ. ಮುಖ್ಯವಾಗಿ ಆರ್ಥಿಕ ಬೆಂಬಲ. ಪೂಜಾರಿಯಂತಹ ವೇಟ್ ಲಿಫ್ಟರ್ ಗೆ ತಿಂಗಳಿಗೆ ಮುವತ್ತರಿಂದ ನಲವತ್ತು ಸಾವಿರ ಖರ್ಚು ಬರುತ್ತದೆ. ಅದನ್ನು ಆತ ಎಲ್ಲಿಂದ ಹೊಂದಿಸಬೇಕು? ಕೆಲ ಭಾಗ್ಯಶಾಲಿಗಳಿಗೆ ಕೆಲವು ಸಂಸ್ಥೆಗಳು ಸಹಾಯ ಮಾಡುವುದಿದೆ. ಆದರೆ ನಿಜವಾಗಿ ಸಹಾಯ ಮಾಡಬೇಕಿರುವುದು ಸರಕಾರಗಳು. ಆದರೆ ಅವು ಮಾಡುತ್ತಿವೆಯೇ?

ಸರಕಾರಗಳು ಕ್ರೀಡಾ ಪಟುಗಳಿಗೆ ಸಹಾಯ ಮಾಡುತ್ತಿವೆಯೇ?

ಇದರ ಬಗ್ಗೆ ಸ್ವತಃ ಗುರುರಾಜ ಪೂಜಾರಿಯವರೇ  ಬೇಸರದಿಂದ ಮಾತಾಡಿದ್ದಾರೆ. ಈ ಹಿಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗುರುರಾಜ್ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿಯ ಪದಕ ಗೆದ್ದಿದರು. ಈ ಬಾರಿ  61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದಾರೆ. “ಹಿಂದಿನ ಬಾರಿ ಪದಕ ಗೆದ್ದಾಗ ಕುಮಾರಸ್ವಾಮಿಯವರು ಬಹುದೊಡ್ಡ ಮೊತ್ತದ ಪ್ರೋತ್ಸಾಹ ಧನವನ್ನೇನೋ ಘೋಷಿಸಿದರು. ಆದರೆ ಕೊಡಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದವರಿಗೆ ನಮ್ಮ ರಾಜ್ಯದಲ್ಲಿ ಬೆಲೆ ಇಲ್ಲ, ಅಂಥವರನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ. ಬೇರೆ ರಾಜ್ಯಗಳು ಕಂಚಿನ ಪದಕ ಗೆದ್ದವರಿಗೆ 30-40 ಲಕ್ಷ ಪ್ರೋತ್ಸಾಹ ಧನ ಘೋಷಿಸಿವೆ. ಆದರೆ ಈಗ ಕರ್ನಾಟಕ ಸರಕಾರ ಜುಜುಬಿ 8 ಲಕ್ಷ ಘೋಷಣೆ ಮಾಡಿದೆ. ಘೋಷಿಸಿದ ಪ್ರೋತ್ಸಾಹ ಧನವನ್ನೂ ಸಕಾಲದಲ್ಲಿ ಕೊಡುವುದಿಲ್ಲ, ಒಂದು ವರ್ಷಕ್ಕೆ ಬರುವ ಪ್ರೋತ್ಸಾಹ ಧನ ಎರಡು ಮೂರು ವರ್ಷ ವಿಳಂಬವಾಗಿ ಬರುತ್ತದೆ. ಕೂಡಲೇ ಕೊಟ್ಟರೆ ಮುಂದಿನ ಕ್ರೀಡಾ ಸಾಧನೆಗೆ ದಾರಿಯಾಗುತ್ತದೆ” ಎಂದು ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಕೊಲೆಯಾದ ವ್ಯಕ್ತಿಯ ಧರ್ಮ ಆಧರಿಸಿ ತಲಾ 25 ಲಕ್ಷ ಪರಿಹಾರ!

ವಿಚಿತ್ರ ಎಂದರೆ ಬೊಮ್ಮಾಯಿ ಸರಕಾರದ ಕಾಲದಲ್ಲಿ ಕೋಮು ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾದ ವ್ಯಕ್ತಿಯ ಧರ್ಮ ಆಧರಿಸಿ ಅವರಿಗೆ ತಲಾ 25 ಲಕ್ಷ ಪರಿಹಾರ ಮೊತ್ತ ನೀಡಲಾಗುತ್ತದೆ. ಆದರೆ ಪದಕದ ಮೂಲಕ ರಾಜ್ಯಕ್ಕೆ ಮಾತ್ರವಲ್ಲ, ದೇಶಕ್ಕೇ ಕೀರ್ತಿ ತಂದ ಕ್ರೀಡಾಳುವಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುವ ಹಾಗೆ ಒಂದು ದೊಡ್ಡ ಮೊತ್ತವನ್ನು ಕೊಡುವುದು ಸಾಧ್ಯವಿಲ್ಲವೇ? ಅದೂ ಜನರ ದುಡ್ಡು? ಈ ಕ್ರೀಡಾಳುಗಳಿಗೆ ದೊಡ್ಡ ಸಮಸ್ಯೆ ಇರುವುದು ಹೊಟ್ಟೆ ಹೊರೆಯುವ ಸಮಸ್ಯೆ. ಅದಕ್ಕೆ ಅನುಕೂಲವಾಗುವ ಹಾಗೆ ಒಂದು ಸರಕಾರಿ ನೌಕರಿ ಕೊಡುವುದೂ ಅಷ್ಟು ಕಷ್ಟವೇ?

ಸರಕಾರದ ಧೋರಣೆ ಬದಲಾಗಬೇಕು

ಇವನ್ನೆಲ್ಲ ನೋಡುವಾಗ ನಮ್ಮ ಸರಕಾರದ ತಪ್ಪು ಆದ್ಯತೆಗಳು ಮತ್ತು ಪಕ್ಷಪಾತಿ ಧೋರಣೆಗಳು, ಕ್ರೀಡಾಲೋಕದ ಬಗ್ಗೆ ಇರುವ ತಾತ್ಸಾರ ಎದ್ದು ಕಾಣುತ್ತದೆ. ಗುರುರಾಜ ಪೂಜಾರಿ ಇನ್ನಷ್ಟು ಸಾಧನೆ ಮಾಡಿ ಒಲಿಂಪಿಕ್ಸ್ ಪದಕವನ್ನೂ ಗೆಲ್ಲುವಂತಾಗಬೇಕಾದರೆ, ಇನ್ನಷ್ಟು ಗುರುರಾಜ ಪೂಜಾರಿಗಳು ಸೃಷ್ಟಿಯಾಗಬೇಕಾದರೆ ಸರಕಾರ ತಮ್ಮ ಧೋರಣೆಗಳನ್ನು ಬದಲಿಸಿಕೊಳ್ಳಬೇಕು. ಸರಕಾರದ ಬಳಿ ಹಣದ ಕೊರತೆಯಿಲ್ಲ. ಇರುವುದು ಇಚ್ಛಾಶಕ್ತಿಯ ಕೊರತೆ. ಅದನ್ನು ನೀಗಿಸಿಕೊಳ್ಳಬೇಕು. ಆಗ ಕ್ರೀಡಾ ಲೋಕದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಬಹುದು. ಲೇಖನದ ಆರಂಭದಲ್ಲಿ ಹೇಳಿದ ಹಾಗೆ ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಇರುವುದು ಆ ಪ್ರತಿಭೆಗಳಿಗೆ ಬೆಂಬಲದ ಕೊರತೆ. ಕನಿಷ್ಠ ಆರ್ಥಿಕ ಸಹಾಯವನ್ನು ಸರಕಾರಗಳು ಉದಾರವಾಗಿ ಮಾಡಿದರೂ ನಮ್ಮ ಕ್ರೀಡಾಳುಗಳು ಅಸಾಧಾರಣ ಸಾಧನೆ ಮಾಡಬಲ್ಲರು.

ಗುಲಾಬಿ ಬಿಳಿಮಲೆ
ಸಾಮಾಜಿಕ ಕಾರ್ಯಕರ್ತೆ ಹಾಗು ಹವ್ಯಾಸಿ ಬರಹಗಾರ್ತಿ
ಮಂಗಳೂರು

Related Articles

ಇತ್ತೀಚಿನ ಸುದ್ದಿಗಳು