Sunday, June 16, 2024

ಸತ್ಯ | ನ್ಯಾಯ |ಧರ್ಮ

ʼಕಾಲಾಯ ನಮಃʼ ಎನ್ನುತ್ತಾ ಮರಳಿ ಬಂದ ಕೋಮಲ್ ಕುಮಾರ್‌

ಬೆಂಗಳೂರು: ಹಾಸ್ಯ ಕಲಾವಿದನಾಗಿ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ನಾಯಕನಾಗೂ ಸೈ ಎನಿಸಿಕೊಂಡವರು. ಕಳೆದ ಕೆಲವು ವರ್ಷಗಳಿಂದ ಕೋಮಲ್ ಕುಮಾರ್ ಚಿತ್ರರಂಗದಿಂದ ದೂರವಿದ್ದರು. ಈಗ ʼಕಾಲಾಯ ನಮಃʼ ಚಿತ್ರದ ಮೂಲಕ ಕೋಮಲ್ ಕುಮಾರ್ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.

ʼಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನನ್ನ ಜೀವನದಲ್ಲೂ ಹಾಗೆ. ನಮ್ಮ ಅಣ್ಣ ಜಗ್ಗೇಶ್ ಅವರು, ಕೆಲವು ವರ್ಷಗಳ ಹಿಂದೆ ನನ್ನ ಜಾತಕ ನೋಡಿ, ನಿನಗೆ ಈಗ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಸ್ವಲ್ಪ ಹುಷಾರಾಗಿರು ಅಂದಿದ್ದರು. ಹಾಗಾಗಿ ಐದು ವರ್ಷದಿಂದ ನಾನು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.‌ ನಮ್ಮ ಊರಿನ ದೇವರಾದ ಕಾಲಭೈರವನ ಉಪಾಸನೆ ಮಾಡುತ್ತಿದೆ. ಈಗ ಕಾಲ ಕೂಡಿ ಬಂದಿದೆ. ʼಕಾಲಾಯ ನಮಃʼ ಶುರುವಾಗಿದ್ದು, ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳೀಯ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆ. ನನ್ನ ಪತ್ನಿ ಅನಸೂಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ.‌ ನನ್ನ ಅಣ್ಣ ಜಗ್ಗೇಶ್ ಅವರ ಸಹಕಾರವಿದೆ. ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್,‌ ತಿಲಕ್ ಹಾಗೂ ನನ್ನ ಅಣ್ಣ ಜಗ್ಗೇಶ್ ಅವರ‌ ಪುತ್ರ ಯತಿರಾಜ್ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.‌ ನಾನು ನಟಿಸಿರುವ 2020 ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರುತ್ತಿದೆʼ‌ ಎಂದು ಕೋಮಲ್ ಕುಮಾರ್ ವಿವರಣೆ ನೀಡಿದರು.

ʼಜ್ಯೋತಿಷ್ಯ ಯಾರು ನಂಬುತ್ತಾರೊ, ಬಿಡುತ್ತಾರೊ ನನಗ ಗೊತ್ತಿಲ್ಲ. ಆದರೆ ನನಗೆ ನಂಬಿಕೆಯಿದೆ. ಕೋಮಲ್ ಗೆ ಕೇತುದೆಸೆ ಇದೆ. 2022 ರವರೆಗೂ ಏನು ಮಾಡಬೇಡ ಅಂದಿದೆ. ಆತ ನನ್ನ ಮಾತು ಕೇಳಿ ಹಾಗೆ ನಡೆದುಕೊಂಡ. ಈಗ ಕಾಲಭೈರವನ ದಯೆಯಿಂದ ಈ‌ ಚಿತ್ರ ಆರಂಭಿಸಿದ್ದಾನೆ. ನನ್ನ‌ ಮಗ ಯತಿರಾಜ್ ಕೂಡ ಇದರಲ್ಲಿ ಅಭಿನಯಿಸುತ್ತಿದ್ದಾನೆ ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ವಿಶ್ವಾಸವಿದೆʼ ಎಂದು ಜಗ್ಗೇಶ್‌ ಮಾತನಾಡಿದರು.

ʼಕಾಲಾಯ ನಮಃʼ ಒಳ್ಳೆಯ ಕಥೆಯುಳ್ಳ ಚಿತ್ರ ಕೋಮಲ್ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದು ನಿರ್ದೇಶಕ ಮತಿವಣನ್ ತಿಳಿಸಿದರು. ಧಾರಾವಾಹಿಯಲ್ಲಿ ನಟಿಸುತ್ತಿದ್ದ ನನಗೆ ಇದು ಮೊದಲ ಸಿನಿಮಾ ಎಂದು ನಟಿ ಆಸಿಯಾ ಫಿರ್ದೋಸ್ ಹೇಳಿದರು.ನಿರ್ಮಾಪಕಿ ಅನಸೂಯ ಕೋಮಲ್ ಕುಮಾರ್, ಸಂಗೀತ ನಿರ್ದೇಶಕ ಎಮಿಲ್ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಚಿತ್ರದ ಕುರಿತು ಮಾತನಾಡಿದರು.

Related Articles

ಇತ್ತೀಚಿನ ಸುದ್ದಿಗಳು