Thursday, June 13, 2024

ಸತ್ಯ | ನ್ಯಾಯ |ಧರ್ಮ

KPCC ನಕಲಿ ವೆಬ್‌ಸೈಟ್‌ ಸೃಷ್ಟಿ: ಮೂವರು ಕಂಪನಿ ನಿರ್ದೇಶಕರು, ಒಬ್ಬ ಉದ್ಯೋಗಿ ಬಂಧನ; ಮೊಬೈಲ್ ಲ್ಯಾಪ್ ಟಾಪ್ ವಶಕ್ಕೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (KPCC) ನಕಲಿ ವೆಬ್‌ಸೈಟ್‌ ಸೃಷ್ಟಿಸಿದ ಮತ್ತು ಅಸಭ್ಯ ವಿಷಯಗಳನ್ನು ಅದರಲ್ಲಿ ಪೋಸ್ಟ್‌ ಮಾಡಿದ ಆರೋಪದ ಮೇಲೆ ಹಾಸನ ಮೂಲದ, ಬೆಂಗಳೂರಿನಲ್ಲೂ ಕಚೇರಿ ಹೊಂದಿರುವ ಸಂಸ್ಥೆಯ ಮೂವರು ನಿರ್ದೇಶಕರು ಮತ್ತು ಓರ್ವ ಉದ್ಯೋಗಿಯನ್ನು ಬೆಂಗಳೂರು ಸೈಬರ್‌ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ KPCC ಹೆಸರು ಮತ್ತು ಕಾಂಗ್ರೆಸ್‌ ಪಕ್ಷದ ಚಿಹ್ನೆಯನ್ನು ಬಳಸಿಕೊಂಡು ನಕಲಿ ವೆಬ್‌ಸೈಟ್‌ ಸೃಷ್ಟಿಸಲಾಗಿತ್ತು. ಈ ಕುರಿತು ಅಂದು ಕಾಂಗ್ರೆಸ್‌ ಪಕ್ಷದ ಶತಭೀಷ್‌ ಶಿವಣ್ಣ ಎನ್ನುವವರು ದೂರು ನೀಡಿದ್ದರು.

ನಕಲಿ ವೆಬ್ಸೈಟ್‌ ಸೃಷ್ಟಿಸುವುದರ ಜೊತೆಗೆ ವೆಬ್ಸೈಟಿನಲ್ಲಿ ಅವಹೇಳನಕಾರಿ ಸಂಗತಿಗಳನ್ನು ಸಹ ಪ್ರಕಟಿಸಲಾಗಿದೆಯೆಂದು ದೂರಿನಲ್ಲಿ ಹೇಳಲಾಗಿತ್ತು. ಚುನಾವಣೆಗೆ ಎರಡು ತಿಂಗಳಿರುವಾಗ ಇಂತಹದ್ದೊಂದು ಪ್ರಕರಣ ಎದುರಾಗಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ತಂದಿತ್ತು.

ಇದೀಗ ಪೊಲೀಸರು ಪ್ರಕರಣದ ತನಿಖೆ ನಡೆಸಿ ಈ ಪ್ರಕರಣದ ಸಂಬಂಧ ಹಾಸನ ಮೂಲದ ವೆಟ್‌ ಫ್ಯಾಬ್‌ ಟೆಕ್ನಾಲಜೀಸ್‌ ಎನ್ನುವ ಕಂಪನಿಯ ಧರಣೇಶ್‌ ಜೈನ್‌, ಸಿದ್ಧಾರ್ಥ್‌, ಅರುಣ್‌ ಮತ್ತು ವೆಂಕಟೇಶ ಎನ್ನುವ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಪೈಕಿ ಧರಣೇಶ ಮತ್ತು ಅರುಣ ವೆಬ್‌ ಹೋಸ್ಟಿಂಗ್‌ ಹಣ ಭರಿಸಿದ್ದು, ಸಿದ್ಧಾರ್ಥ್‌ ಮತ್ತು ಅಲ್ಲಿನ ಉದ್ಯೋಗಿ ವೆಂಕಟೇಶ ನಕಲಿ ಇಮೇಲ್‌ ಐಡಿ ರಚನೆ ಮತ್ತು ವೆಬ್ಸೈಟ್‌ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಮೂವರು ಕಂಪನಿ ನಿರ್ದೇಶಕರಾಗಿದ್ದು ಓರ್ವ ಕಂಪನಿ ಉದ್ಯೋಗಿಯಾಗಿದ್ದಾನೆ. ಇವರೆಲ್ಲರೂ ಈ ಬೆಂಗಳೂರು ನಗರ ಪೊಲೀಸ್‌ ವಶದಲ್ಲಿದ್ದಾರೆ.

ಈ ಪ್ರಕರಣದಲ್ಲಿ ಹಾಸನ ಮೂಲದ ಶಶಾಂಕ್ ಭಾರದ್ವಾಜ್ ಮತ್ತು ವರಾಹೆ ಅನಾಲಿಟಿಕಲ್ ಕಂಪನಿಯಲ್ಲಿ (ಚುನಾವಣಾ ಪ್ರಚಾರ ನಿರ್ವಹಣಾ ಸಂಸ್ಥೆ) ಕೆಲಸ ಮಾಡುತ್ತಿರುವ ಆರೋಪಿ ನಿರ್ದೇಶಕರ ಸ್ನೇಹಿತ ಆರೋಪಿಗಳನ್ನು ಸಂಪರ್ಕಿಸಿ ಈ ನಕಲಿ ವೆಬ್‌ಸೈಟ್ ತಯಾರಿಸಿ ಕೊಡುವಂತೆ ಕೇಳಿಕೊಂಡಿದ್ದನು. ಇದಕ್ಕಾಗಿ ರೂ. 25,000/- ಕೊಟ್ಟು ತನ್ನ ಪಾಲಿನ ಕಮಿಷನ್ ಪಡೆದಿದ್ದ.

ವೆಬ್‌ಸೈಟ್‌ಗೆ ಸಂಬಂಧಿಸಿದಂತೆ ಟೆಕ್‌ ಸಂಸ್ಥೆಯ ನಿರ್ದೇಶಕರು ಮತ್ತು ಶಶಾಂಕ್‌ ನಡುವಿನ ವಾಟ್ಸಾಪ್‌ ಮಾತುಕತೆಗಳು ತಮಗೆ ಲಭ್ಯವಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಶಶಾಂಕ್‌ ಭಾರಧ್ವಾಜ್‌ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ. ಮುಂದಿನ ವಿಚಾರಣೆ ಜಾರಿಯಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು