Friday, January 23, 2026

ಸತ್ಯ | ನ್ಯಾಯ |ಧರ್ಮ

ಶಿಡ್ಲಘಟ್ಟ ಘಟನೆ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಕೆಪಿಸಿಸಿ ನೋಟಿಸ್

ಶಿಡ್ಲಘಟ್ಟದ ನಗರಸಭೆ ಆಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ, 2023ರ ವಿಧಾನಸಭಾ ಚುನಾವಣೆಯ ಶಿಡ್ಲಘಟ್ಟ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡುವಂತಹ ವರ್ತನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ (ಆಡಳಿತ) ಜಿ.ಸಿ. ಚಂದ್ರಶೇಖರ್ ಜನವರಿ 15, 2026 ರಂದು ಹೊರಡಿಸಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ಬ್ಯಾನರ್ ತೆರವುಗೊಳಿಸಿದ ವಿಚಾರವಾಗಿ ರಾಜೀವ್ ಗೌಡ ಅವರು ನಗರಸಭೆ ಆಯುಕ್ತರಾದ ಅಮೃತಾ ಗೌಡ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ವೈಯಕ್ತಿಕ ನಿಂದನೆ ಮಾಡಿದ್ದಾರೆ ಎನ್ನಲಾದ ಆಡಿಯೋ ಮತ್ತು ವಿಡಿಯೋಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಈ ಘಟನೆಯು ಪಕ್ಷಕ್ಕೆ ತೀವ್ರ ಮುಜುಗರ ತಂದಿದ್ದು, ಇದು ಸ್ಪಷ್ಟವಾಗಿ ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಏಳು ದಿನಗಳ ಒಳಗಾಗಿ ಲಿಖಿತ ವಿವರಣೆ ನೀಡುವಂತೆ ರಾಜೀವ್ ಗೌಡ ಅವರಿಗೆ ಸೂಚಿಸಲಾಗಿದ್ದು, ತಪ್ಪಿದಲ್ಲಿ ಶಿಸ್ತು ಸಮಿತಿಯು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಲಾಗಿದೆ.

ಅನಧಿಕೃತ ಬ್ಯಾನರ್ ತೆರವು ವಿಚಾರವಾಗಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜಕೀಯ ಸಂಚಲನ ಮೂಡಿಸಿತ್ತು ಮತ್ತು ಪೌರಕಾರ್ಮಿಕರು ಪ್ರತಿಭಟನೆ ನಡೆಸುವಂತೆ ಮಾಡಿತ್ತು. ಇದೇ ವೇಳೆ, ಮಹಿಳಾ ಅಧಿಕಾರಿಯ ಮೇಲಿನ ದೌರ್ಜನ್ಯವನ್ನು ಕಟುವಾಗಿ ಖಂಡಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ “ಗೂಂಡಾ ರಾಜ್ಯ”ವನ್ನು ಪೋಷಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page